ಕೋಲಾರ: ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಟಾಪನೆಯಾಗಿರುವ ರಾಮಲಲ್ಲಾನ ವಿಗ್ರಹ ಕೆತ್ತನೆ ಮಾಡಿದ್ದು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್. ಆದರೆ ರಾಮಲಲ್ಲಾ ವಿಗ್ರಹ ಕೆತ್ತನೆಗೆ ಯಾವ ಕಲ್ಲನ್ನು ಬಳಸಬೇಕು, ಯಾವ ಗುಣಮಟ್ಟದ ಶಿಲೆಯನ್ನು ಬಳಸಬೇಕು ಮತ್ತು ಹೇಗೆ ಮಂದಿರ ನಿರ್ಮಾಣ ಮಾಡಬೇಕು ಅನ್ನೋದನ್ನು ಅಂತಿಮಗೊಳಿಸಿದ್ದು, ಚಿನ್ನದ ನಾಡು ಕೋಲಾರದ NIRMನ ವಿಜ್ಞಾನಿ. ಈ ಮೂಲಕ ರಾಮ ಮಂದಿರ ನಿರ್ಮಾಣದಲ್ಲಿ ಚಿನ್ನದ ನಾಡು ಕೋಲಾರದ ವಿಜ್ಞಾನಿಯ ಕೊಡುಗೆ ಅಪಾರ.
ಕೋಲಾರ ಜಿಲ್ಲೆ ಕೆಜಿಎಫ್ನಲ್ಲಿರುವ NIRMನ ಪ್ರಧಾನ ವಿಜ್ಞಾನಿ ಡಾ.ರಾಜನ್ ಬಾಬು ಅವರು ರಾಮ ಮಂದಿರ ನಿರ್ಮಾಣದ ಪ್ರತಿ ಹಂತದಲ್ಲೂ ಭಾಗಿಯಾದವರು. ದೇವಾಲಯದ ಅಡಿಗಲ್ಲಿನಿಂದ ಹಿಡಿದು ದೇವಾಲಯದ ವಿನ್ಯಾಸಕ್ಕೆ ಬಳಸಲಾಗಿರುವ ಶಿಲೆ, ನೆಲಹಾಸಿಗೆಗೆ ಬಳಸಲಾಗಿರುವ ಕಲ್ಲು, ಅಷ್ಟೇ ಯಾಕೆ ರಾಮಲಲ್ಲಾ ವಿಗ್ರಹ ಕೆತ್ತನೆಗೆ ಬಳಸಲಾಗಿರುವ ಶಿಲೆಯನ್ನು ಸಹ ಇವರೇ ಪರೀಕ್ಷಿಸಿ ಅಂತಿಮಗೊಳಿಸಿದ ನಂತರವಷ್ಟೇ ಮುಂದಿನ ಪ್ರಕ್ರಿಯೆ ನಡೆದಿದೆ.
ಇನ್ನು ರಾಜನ್ ಬಾಬು ಅವರು ರಾಮ ಮಂದಿರ ಕಟ್ಟಡ ನಿರ್ಮಾಣಕ್ಕೆ ಅಡಿಪಾಯ ತೆಗೆಯುವುದರಿಂದ ಹಿಡಿದು, ಬೇರೆ ಬೇರೆ ರಾಜ್ಯಗಳಲ್ಲಿನ ಕ್ವಾರಿಗಳಲ್ಲಿ ಹೋಗಿ ಕಲ್ಲುಗಳ ಗುಣಮಟ್ಟ ಪರೀಕ್ಷಿಸಿ ಆಯ್ಕೆ ಮಾಡುವವರೆಗೂ ಪ್ರತಿ ಹಂತದಲ್ಲೂ ಕೆಲಸ ಮಾಡಿದ್ದಾರೆ. ಮೊದಲು ಕ್ವಾರಿಯಲ್ಲಿನ ಕಲ್ಲಿನ ಮಾದರಿಯನ್ನು ತಂದು ಇದೇ ಕೆಜಿಎಫ್ನಲ್ಲಿರುವ NIRMನ ಲ್ಯಾಬ್ನಲ್ಲಿ ಅದರ ಗುಣಟ್ಟ ಪರೀಕ್ಷಿಸುತ್ತಿದ್ದರು. ಕಲ್ಲು ಗುಣಮಟ್ಟದ್ದಾಗಿದ್ದರೆ ಮಾತ್ರ ನಿರ್ಮಾಣಕ್ಕೆ ಅಂತಿಮಗೊಳಿಸುತ್ತಿದ್ದರು. ಕೇವಲ ಒಂದು ರಾಜ್ಯದಲ್ಲಿ ಮಾತ್ರ ಕಲ್ಲುಗಳನ್ನು ಆಯ್ಕೆ ಮಾಡಿಲ್ಲ, ಮಂದಿರದ ಒಂದೊಂದು ಭಾಗಕ್ಕೆ ಒಂದೊಂದು ರೀತಿಯ ಕಲ್ಲುಗಳನ್ನು ಬಳಕೆ ಮಾಡಲಾಗಿದೆ. ಈ ಮೂಲಕ ಮಂದಿರಕ್ಕೆ ಇಡೀ ದೇಶದ ಪ್ರಮುಖ ತಂತ್ರಜ್ಞರ, ಎಂಜಿನಿಯರ್ಗಳ ಹಾಗೂ ಹತ್ತಾರು ವಿಭಿನ್ನ ಶಿಲ್ಪಿಗಳ ಬುದ್ಧಿ ಶಕ್ತಿಯನ್ನು ಒಂದೆಡೆ ಕಲೆ ಹಾಕಿ ರಾಮ ಮಂದಿರವನ್ನು ನಿರ್ಮಾಣ ಮಾಡಲಾಗುತ್ತಿದೆ.