ಬೆಳಗಾವಿ: ಬೈಲಹೊಂಗಲ ಕಿತ್ತೂರು ರಾಣಿ ಚನ್ನಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಠೇವಣಿದಾರರ ಹಣ ಮರು ಪಾವತಿಸುತ್ತಿಲ್ಲ. ಅಲ್ಲದೇ ಬ್ಯಾಂಕಿನಲ್ಲಿ ಸುಮಾರು 600 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ನೂರಾರು ಠೇವಣಿದಾರರು ಜಿಲ್ಲಾಧಿಕಾರಿ ಕಚೇರಿ ಮುಂದೆ ಇಂದು ಧರಣಿ ನಡೆಸಿದರು.
ನಗರದ ಕನ್ನಡ ಸಾಹಿತ್ಯ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ರ‍್ಯಾಲಿ ನಡೆಸಿದ ಠೇವಣಿದಾರರು, ಸೊಸೈಟಿ ಚೇರ್ಮನ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಡವರು, ಕೂಲಿಕಾರರು ಕಷ್ಟಪಟ್ಟು ದುಡಿದ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದಾರೆ. ಅಲ್ಲದೇ ಕೆಲವೊಂದಿಷ್ಟು ಜನರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಮತ್ತೊಂದಿಷ್ಟು ಜನರು ಮನೆ ಕಟ್ಟುತ್ತಿದ್ದಾರೆ. ಅಲ್ಲದೇ ಮದುವೆಯನ್ನೂ ಆಗುತ್ತಿದ್ದಾರೆ. ಅಂಥವರಿಗೆ ಹಣದ ಸಮಸ್ಯೆ ಆಗುತ್ತಿದೆ ಎಂದು ಠೇವಣಿದಾರರು ಅಳಲು ತೋಡಿಕೊಂಡರು.
ಠೇವಣಿದಾರ ವಿಜಯ ಗೌಡರ ಮಾಧ್ಯಮಗಳ ಜೊತೆಗೆ ಮಾತನಾಡಿ, ಚನ್ನಮ್ಮ ಬ್ಯಾಂಕಿನಲ್ಲಿ ಒಟ್ಟು 762 ಕೋಟಿ ರೂ. ಠೇವಣಿ ಇಟ್ಟಿರುವ ಬಗ್ಗೆ ನಮಗೆ ಮಾಹಿತಿ ಇದೆ. ಇದರಲ್ಲಿ ಬ್ಯಾಂಕ್ ಚೇರ್ಮನ್ ಮತ್ತ ಅವರ ಮನೆಯವರೇ ಅಂದಾಜು 433 ಕೋಟಿ ರೂ. ಸಾಲ ತೆಗೆದುಕೊಂಡಿದ್ದಾರೆ. ಈ ಹಣವನ್ನು ಅವರು ಬ್ಯಾಂಕಿಗೆ ಮರಳಿಸಿಲ್ಲ. ಅದರ ಬಡ್ಡಿ ಎಲ್ಲ ಸೇರಿ ಈಗ 551 ಕೋಟಿ ರೂ. ಆಗಿದೆ. ಈಗ ನಾವು ನಮ್ಮ ಠೇವಣಿ ಹಣ ಕೇಳಲು ಹೋದರೆ ನಮ್ಮ ಆಸ್ತಿ ಮಾರಾಟ ಮಾಡಿ ಕೊಡುತ್ತೇವೆ ಎನ್ನುತ್ತಿದ್ದಾರೆ. ಕಳೆದ ಮೂರು ತಿಂಗಳಿನಿಂದ ನಮ್ಮನ್ನು ಅಲೆದಾಡಿಸುತ್ತಿದ್ದಾರೆ. ಹಾಗಾಗಿ, ತಪ್ಪಿತಸ್ಥರ ವಿರುದ್ಧ ಕ್ರಮವಾಗಿ ನಮ್ಮ ದುಡ್ಡು ನಮಗೆ ವಾಪಸ್ ಕೊಡಬೇಕು ಎಂದು ಆಗ್ರಹಿಸಿದರು.