ಕರ್ನಾಟಕ

karnataka

ETV Bharat / state

ಯುಜಿ ನೀಟ್: ರೋಲ್ ನಂಬರ್ ದಾಖಲಿಸಲು ಸದ್ಯದಲ್ಲೇ ಅವಕಾಶ - UG NEET - UG NEET

ಯುಜಿ ನೀಟ್​ಗೆ ರೋಲ್ ನಂಬರ್ ದಾಖಲಿಸಲು ಸದ್ಯದಲ್ಲೇ ಪೋರ್ಟಲ್ ತೆರೆಯಲಾಗುವುದು ಎಂದು ಕೆಇಎ ತಿಳಿಸಿದೆ. ​

Karnataka Examination Authority
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ETV Bharat)

By ETV Bharat Karnataka Team

Published : Jun 7, 2024, 9:31 PM IST

ಬೆಂಗಳೂರು:ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸುಗಳಿಗೆ ಪ್ರವೇಶ ಬಯಸಿ ಈಗಾಗಲೇ 2024ರ ಯುಜಿಸಿಇಟಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡು, ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಿರುವವರು ಈಗ ಯುಜಿ-ನೀಟ್​ನಲ್ಲಿ ಅರ್ಹತೆ ಪಡೆದಿದ್ದಲ್ಲಿ, ತಮ್ಮ ರೋಲ್ ನಂಬರ್ ದಾಖಲಿಸಲು ಸದ್ಯದಲ್ಲೇ ತನ್ನ ಜಾಲತಾಣದಲ್ಲಿ ಪೋರ್ಟಲ್ ತೆರೆಯಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಶುಕ್ರವಾರ ತಿಳಿಸಿದೆ.

ಅಭ್ಯರ್ಥಿಗಳು ದಾಖಲಿಸುವ ರೋಲ್ ನಂಬರ್ ಆಧಾರದ ಮೇಲೆ ಅಭ್ಯರ್ಥಿಯ ಹೆಸರು, ರ‍್ಯಾಂಕ್, ಅಂಕ, ಅರ್ಹತೆಗಳ ಮಾಹಿತಿ ಪಡೆಯಲಾಗುವುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಹೇಳಿಕೆಯಲ್ಲಿ ಮಾಹಿತಿ ನೀಡಿದ್ದಾರೆ.

ಈಗ ಯುಜಿ ನೀಟ್​ನಲ್ಲಿ ಅರ್ಹತೆ ಪಡೆದುಕೊಂಡಿದ್ದು, ಈವರೆಗೂ ಯುಜಿ-ಸಿಇಟಿಗೆ ನೋಂದಣಿ ಮಾಡಿಕೊಳ್ಳದೇ ಇರುವವರಿಗೂ ಆನ್​ಲೈನ್ ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿಗೆ ಅವಕಾಶ ನೀಡಲಾಗುವುದು. ಅಭ್ಯರ್ಥಿಗಳು ದಾಖಲಿಸುವ ವಿವರಗಳನ್ನು ವೆಬ್-ಸರ್ವೀಸ್ ಮೂಲಕ ಆನ್​ಲೈನ್ ಮೂಲಕವೇ ಪರಿಶೀಲಿಸಲಾಗುವುದು. ಹೀಗಾಗಿ ಭೌತಿಕ ಪರಿಶೀಲನೆ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸುಗಳ ಪ್ರವೇಶಕ್ಕೆ ಪ್ರಾಧಿಕಾರದಲ್ಲಿ ನೋಂದಣಿ ಮಾಡಿ, ಅರ್ಜಿ ಸಲ್ಲಿಸಿ, ಆನ್​ಲೈನ್ ಕೌನ್ಸೆಲಿಂಗ್​ನಲ್ಲಿ ಭಾಗವಹಿಸುವುದು ಕಡ್ಡಾಯ. ನಮೂದಿಸುವ ಆಪ್ಶನ್ಸ್ ಪರಿಗಣಿಸಿ, ಮೆರಿಟ್ ಆಧಾರದ ಮೇಲೆ ಸೀಟು ಹಂಚಿಕೆ ಮಾಡಲಾಗುವುದು. ಎಂಜಿನಿಯರಿಂಗ್ ಸೇರಿದಂತೆ ಹಲವು ವೃತ್ತಿಪರ ಕೋರ್ಸುಗಳಿಗೆ ಏಕಕಾಲದಲ್ಲೇ ಆಪ್ಶನ್ಸ್ ದಾಖಲಿಸಲು ಅವಕಾಶ ನೀಡಲಾಗುವುದು ಮತ್ತು ಜತೆಯಲ್ಲೇ ಕೌನ್ಸೆಲಿಂಗ್ ನಡೆಸಲಾಗುವುದು ಎಂದು ಹೇಳಿದ್ದಾರೆ.

ಈ ಸಂಬಂಧ ವಿವಿಧ ಇಲಾಖೆಗಳು ಸೀಟ್ ಮ್ಯಾಟ್ರಿಕ್ಸ್ ಮತ್ತು ಶುಲ್ಕದ ವಿವರಗಳನ್ನು ಕೆಇಎಗೆ ನೀಡಿದ ಬಳಿಕ ಸೀಟು ಹಂಚಿಕೆ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:ಸಿಇಟಿ: ಜೂನ್ 10ರಿಂದ 12ರವರೆಗೆ ವಿಶೇಷಚೇತನರ ವೈದ್ಯಕೀಯ ತಪಾಸಣೆ - Kea Medical Examination

ABOUT THE AUTHOR

...view details