ಬೆಂಗಳೂರು: ಬಿಎಂಟಿಸಿ (ಕಲ್ಯಾಣ ಕರ್ನಾಟಕ), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವಿವಿಧ ಹುದ್ದೆಗಳಿಗೆ ಶನಿವಾರ ಮತ್ತು ಭಾನುವಾರ (ಜುಲೈ 13, 14) ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಅಕ್ರಮ ತಡೆಯುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಕ್ಯಾಮರಾ ಕಣ್ಗಾವಲಿಯಲ್ಲಿ ಲಿಖಿತ ಪರೀಕ್ಷೆ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವ್ಯಾಪಕ ಸಿದ್ಧತೆ ನಡೆಸಿದೆ
ʼಬೆಂಗಳೂರು, ಕಲ್ಬುರ್ಗಿ, ಧಾರವಾಡ ಮತ್ತು ಬಳ್ಳಾರಿ ನಗರಗಳ ಒಟ್ಟು 22 ಕೇಂದ್ರಗಳ, 377 ಕೊಠಡಿಗಳಲ್ಲಿ ಪರೀಕ್ಷೆ ನಡೆಯಲಿದೆ. ಪ್ರತಿಯೊಂದು ಪರೀಕ್ಷಾ ಕೊಠಡಿಯಲ್ಲೂ ಕ್ಯಾಮೆರಾ ಅಳವಡಿಸಿದ್ದು, ವೆಬ್ ಕ್ಯಾಸ್ಟಿಂಗ್ ಮೂಲಕ ಅಲ್ಲಿನ ಎಲ್ಲ ಬೆಳವಣಿಗೆಗಳನ್ನು ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆʼ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
ಉನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ ಅವರು ಶನಿವಾರ ಖುದ್ದು ಈ ಪ್ರಕ್ರಿಯೆಯನ್ನು ವೀಕ್ಷಿಸಲು ಕೆಇಎಗೆ ಬರಲಿದ್ದಾರೆ ಎಂದು ವಿವರಿಸಿದರು.
ಅಕ್ರಮ ತಡೆಗೆ ಕ್ರಮ: ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಈ ಕ್ರಮ ತೆಗೆದುಕೊಂಡಿದ್ದು, ಬೆಂಗಳೂರಿನ ಕೆಇಎ ಕಚೇರಿಯಲ್ಲಿ ರಾಜ್ಯ ಮಟ್ಟದ ಕಮಾಂಡ್ ಸೆಂಟರ್ ಸ್ಥಾಪಿಸಲಾಗಿದೆ. ಇಲ್ಲಿ ಪ್ರತಿಯೊಂದು ಪರೀಕ್ಷಾ ಕೊಠಡಿಯಲ್ಲಿ ಆಗುವ ಬೆಳವಣಿಗೆಗಳನ್ನು ಗಮನಿಸಲು ಟಿವಿಗಳನ್ನು ಅಳವಡಿಸಲಾಗಿದೆ.ಇದಕ್ಕಾಗಿ ಮೇಲ್ವಿಚಾರಣೆಗೆ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ.