ಕೊಪ್ಪಳ:ಭೂಮಿ ಮೇಲೆ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯೂ ದುಡಿದು ತಿನ್ನಬೇಕು. ವ್ಯಕ್ತಿ ಎಲ್ಲಿಯವರೆಗೆ ಬದುಕುತ್ತಾನೋ, ಅಲ್ಲಿಯವರೆಗೆ ದುಡಿಯುತ್ತಿರಬೇಕು ಎಂದು ಕೊಪ್ಪಳದ ಶ್ರೀಗವಿಸಿದ್ದೇಶ್ವರ ಸ್ವಾಮೀಜಿ ಸಲಹೆ ನೀಡಿದರು.
ಗವಿಮಠ ಜಾತ್ರೆಯ ನಿಮಿತ್ತ ಏರ್ಪಡಿಸಿದ್ದ ಕಾಯಕ ದೇವೊ ಭವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗವಿಸಿದ್ದೇಶ್ವರ ಜಾತ್ರೆ ಕಾಯಕ ನಿಷ್ಠೆಯ ಕುರಿತು ಜಾಥಾ ಮೂಲಕ ಆರಂಭವಾಗಿದೆ. ಸೃಷ್ಟಿಕರ್ತ ದೇವರು ಈ ನಿಸರ್ಗದಲ್ಲಿ ಅಂಗಾಂಗಳು ಇಲ್ಲದೇ ಇರುವವರನ್ನು ಮತ್ತು ಮಾತು ಬಾರದವರಿಗೆ ಜನ್ಮ ನೀಡಿದ್ದಾನೆ. ಆದರೆ ಹೊಟ್ಟೆ ಇಲ್ಲದವರನ್ನು ಅಂದರೆ ಊಟ ಮಾಡದೇ ಬದುಕ ಬಲ್ಲವರನ್ನು ಸೃಷ್ಟಿಸಿಲ್ಲ. ಅಂದರೆ ಈ ಭೂಮಿಯ ಮೇಲೆ ಜೀವಿಸುವವರೆಲ್ಲ ಆಹಾರ ತಿನ್ನಲೇಬೇಕು. ಅದನ್ನು ಅವರೇ ದುಡಿದು ತಿಂದಾಗ ಮಾತ್ರ ಅದಕ್ಕೆ ಮೌಲ್ಯವಿದೆ ಎಂದು ಅರಿವಿನ ಸಂದೇಶ ನೀಡಿದರು.
ಮನುಷ್ಯನು ನಿರಂತರ ಕಾಯಕದಲ್ಲಿ ತೊಡಗಲಿ:ನಿಸರ್ಗ ನಿರಂತರ ಕೆಲಸ ಮಾಡುತ್ತದೆ. ಗಾಳಿ, ನದಿ, ಸೂರ್ಯ ನಿರಂತರ ಕೆಲಸ ಮಾಡುತ್ತವೆ. ಅವುಗಳಲ್ಲಿ ಯಾವುದಾದರೂ ಒಂದು ತನ್ನ ಕೆಲಸ ಮಾಡುವುದನ್ನು ನಿಲ್ಲಿಸಿದರೆ ವ್ಯವಸ್ಥೆಯೇ ಬುಡಮೇಲಾಗುತ್ತದೆ. ಪ್ರಕೃತಿಯಂತೆ ಮನುಷ್ಯನು ನಿರಂತರ ಕಾಯಕದಲ್ಲಿ ತೊಡಗಬೇಕು. ಮನುಷ್ಯ ದುಡಿಯದೇ ಇದ್ದರೆ ಕೆಡುತ್ತಾನೆ. ಮನುಷ್ಯ ದುಡಿದೇ ಬದುಕಬೇಕು ಎಂದು ನುಡಿದರು.
ಸ್ವಯಂ ಉದ್ಯೋಗದಲ್ಲಿ ಯಶಸ್ಸು:ನಾನು ದುಡಿದು ಉಣ್ಣಬೇಕು. ತಂದೆ ಮಾಡಿದ್ದು ಉಂಡರೆ ಹಳಿಸಿದ್ದನ್ನು ತಿಂದಂತೆ, ಮೋಸ ಮಾಡಿ ತಿಂದರೆ ಅದು ಇನ್ನೊಬ್ಬರ ಎಂಜಲ ತಿಂದಂತೆ. ನಾವು ದುಡಿದು ತಿನ್ನಬೇಕು ಅದು ಮೃಷ್ಠಾನ್ನ ತಿಂದಂತೆ ಎಂದ ಶ್ರೀಗಳು, ಜಾತ್ರೆಯಲ್ಲಿ ಕಾಯಕ ನಿಷ್ಠೆಯ ಕಾರ್ಯಕ್ರಮವನ್ನು ಆಸಕ್ತಿಯಿಂದ ಆಯೋಜಿಸಲಾಗಿದೆ. ಈ ಬಾರಿ ಜಾತ್ರೆಯಲ್ಲಿ 100ಕ್ಕೂ ಹೆಚ್ಚು ಸ್ವಯಂ ಉದ್ಯೋಗದಲ್ಲಿ ಯಶಸ್ವಿಯಾದವರು ಬಂದಿದ್ದಾರೆ. ಅವರ ಯಶೋಗಾಥೆಗಳನ್ನು ಅರಿತು ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.