ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2024-25ನೇ ಸಾಲಿನ ಆಯವ್ಯಯದಲ್ಲಿ ಎಂ.ಎಸ್.ಎಂ.ಇಗಳಿಗೆ ಏನನ್ನೂ ನೀಡಿಲ್ಲ. ರಾಜ್ಯದಲ್ಲಿನ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದಂತೆ ತೋರುತ್ತಿದೆ ಎಂದು ಕಾಸಿಯಾ ಅಧ್ಯಕ್ಷ ಸಿ.ಎ.ಶಶಿಧರ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.
ಕೃಷಿ, ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಆರೋಗ್ಯದ ಬಗ್ಗೆ ಗಮನಹರಿಸಿ ಉತ್ತಮ ಚಿಂತನೆಯ ಅಭಿವೃದ್ಧಿ ಆಯವ್ಯಯ ಮಂಡಿಸಿದ್ದಾರೆ. ಕೇಂದ್ರ ಸರ್ಕಾರದ ಬೆಂಬಲದೊಂದಿಗೆ ಕೈಗಾರಿಕಾ ವಸಾಹತುಗಳ ಉನ್ನತೀಕರಣದ ಪ್ರಸ್ತಾವನೆಯನ್ನು ಸ್ವಾಗತಿಸುತ್ತೇನೆ ಎಂದು ಇದೇ ವೇಳೆ ಹೇಳಿದರು.
ಇತರ ಪ್ರಮುಖ ಪ್ರಸ್ತಾಪಗಳಾದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಐಪಿಒ ವೆಚ್ಚಗಳಿಗೆ ಸಹಾಯಧನ, ಟ್ರೆಡ್ಸ್ ವೇದಿಕೆಯಲ್ಲಿ ಸರ್ಕಾರಿ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳ ಭಾಗವಹಿಸುವಿಕೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದು ಎಂ.ಎಸ್.ಎಂ.ಇ.ಗಳಿಗೆ ಸರ್ಕಾರಿ ಇಲಾಖೆಗಳು ಮತ್ತು ಸಾರ್ವಜನಿಕ ಉದ್ದಿಮೆಗಳಿಂದ ಬರಬೇಕಾದ ಬಾಕಿಯನ್ನು ಕಾಲಮಿತಿಯೊಳಗೆ ಪಡೆಯಲು ಅನುಕೂಲವಾಗುತ್ತದೆ. ಬೇರೆ ರಾಜ್ಯಗಳು ಈಗಾಗಲೇ ಈ ವೇದಿಕೆಯಲ್ಲಿ ಇಲಾಖೆಗಳ ಮತ್ತು ಸಾರ್ವಜನಿಕ ಉದ್ದಿಮೆಗಳ ಭಾಗವಹಿಸುವಿಕೆಯನ್ನು ಕಡ್ಡಾಯಗೊಳಿಸಿವೆ ಎಂದಿದ್ದಾರೆ.