ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬೇಸಿಗೆ ರಾಜಧಾನಿ ಶ್ರೀನಗರದಲ್ಲಿ ಭಾನುವಾರ ದುರಂತ ಘಟನೆ ಸಂಭವಿಸಿದ್ದು, ಒಂದೇ ಕುಟುಂಬದ ಐವರು ತಮ್ಮ ಬಾಡಿಗೆ ನಿವಾಸದಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಮೃತರಲ್ಲಿ ಪೋಷಕರು ಮತ್ತು ಅವರ ಇಬ್ಬರು ಅಪ್ರಾಪ್ತ ಮಕ್ಕಳು ಮತ್ತು 28 ದಿನಗಳ ಹಿಂದೆ ಜನಿಸಿದ ಶಿಶು ಸೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂಲತಃ ಬಾರಾಮುಲ್ಲಾ ಜಿಲ್ಲೆಯ ಉರಿಯವರಾದ ಅಜಾಜ್ ಅಹ್ಮದ್ ಭಟ್ ಹಾಗೂ ಕುಟುಂಬಸ್ಥರು ಸಾವನ್ನಪ್ಪಿದ್ದಾರೆ ಎಂದು ಗುರುತಿಸಲಾಗಿದೆ. ಇವರು ಕಳೆದ ಎರಡು ತಿಂಗಳಿನಿಂದ ಇಲ್ಲಿ ಬಾಡಿಗೆ ವಸತಿಗೃಹದಲ್ಲಿ ವಾಸಿಸುತ್ತಿದ್ದರು. ಭಟ್ ಅವರು ಲಲಿತ್ ಗ್ರ್ಯಾಂಡ್ ಪ್ಯಾಲೇಸ್‌ನ ಖಾಸಗಿ ಹೋಟೆಲ್‌ನಲ್ಲಿ ಬಾಣಸಿಗರಾಗಿದ್ದರು.
ತನ್ನ ಮಗನನ್ನು ಸಂಪರ್ಕಿಸಲು ಸಾಧ್ಯವಾಗದ ಭಟ್ ಅವರ ತಾಯಿಯು ಮನೆ ಮಾಲೀಕ ಮುಖ್ತಾರ್ ಅಹ್ಮದ್ ಅವರನ್ನು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. "ಅಜಾಜ್ ಅಹ್ಮದ್ ಭಟ್ ತಾಯಿಯು ನನಗೆ ಕರೆ ಮಾಡಿ, ಸಂಜೆ 4 ಗಂಟೆಯಿಂದ ಅಜಾಜ್ ತನ್ನ ಕರೆಗಳಿಗೆ ಪ್ರತಿಕ್ರಿಯಿಸುತ್ತಿಲ್ಲ ಎಂದು ಹೇಳಿದರು. ಆಗ ನಾನು ಪರಿಶೀಲಿಸಲು ಇನ್ನೊಬ್ಬ ಬಾಡಿಗೆದಾರನನ್ನು ಕಳುಹಿಸಿದೆ" ಎಂದು ಮುಖ್ತಾರ್ ಹೇಳಿದರು.
"ಬಾಡಿಗೆದಾರನು ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಹಾಗಾಗಿ, ನಾವು ಬಾಗಿಲು ಒಡೆದು ತೆರೆದಾಗ ಅಜಾಜ್, ಅವರ ಪತ್ನಿ ಮತ್ತು ಅವರ ಮೂವರು ಮಕ್ಕಳು ಮೃತಪಟ್ಟಿರುವುದು ಕಂಡುಬಂದಿದೆ'' ಎಂದು ಮುಖ್ತಾರ್ ತಿಳಿಸಿದರು.
ಹೀಟಿಂಗ್ ಉಪಕರಣ (Blower) ದಿಂದ ಉಸಿರುಗಟ್ಟುವಿಕೆ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶ್ರೀನಗರದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಲಾಗಿದ್ದು, ತನಿಖೆ ನಡೆಯುತ್ತಿದೆ.
ಕಣಿವೆ ನಾಡಿನಲ್ಲಿ ಮೈಕೊರೆಯುವ ಚಳಿ ತೀವ್ರಗೊಂಡಿದ್ದು, ರಾತ್ರಿ ವೇಳೆ ಮತ್ತಷ್ಟು ತಾಪಮಾನ ಇಳಿಕೆಯಾಗುವುದರಿಂದ ಜನರು ಸುರಕ್ಷಾ ಸಾಧನಗಳ ಮೊರೆ ಹೋಗುತ್ತಿದ್ದಾರೆ. ಹೀಟಿಂಗ್ ಉಪಕರಣಗಳ (Blower) ಅನಿಯಂತ್ರಿತ ಬಳಕೆಯಿಂದ ಕಾರ್ಬನ್ ಮಾನಾಕ್ಸೈಡ್ ಮಟ್ಟ ಏರಿಕೆಯಾಗುತ್ತದೆ. ಇದರಿಂದ ಕೊಠಡಿಗಳಲ್ಲಿ ಆಮ್ಲಜನಕದ ಪ್ರಮಾಣ ಇಳಿಕೆಯಾಗುತ್ತದೆ. ಇದು ಉಸಿರುಗಟ್ಟುವಿಕೆಗೆ ಕಾರಣವಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಇತ್ತೀಚೆಗೆ ಕಾಶ್ಮೀರದಲ್ಲಿ ಸಂಭವಿಸಿದ ಎರಡನೇ ದುರಂತ ಘಟನೆ ಇದಾಗಿದೆ. ಈ ಹಿಂದೆ, ಬಾರಾಮುಲ್ಲಾದ ತಂಗ್‌ಮಾರ್ಗ್‌ನಲ್ಲಿ ಟಿನ್ ಶೆಡ್ ನಿವಾಸಕ್ಕೆ ಬೆಂಕಿ ಹೊತ್ತಿಕೊಂಡು ಇಬ್ಬರು ಅಪ್ರಾಪ್ತರು ಪ್ರಾಣ ಕಳೆದುಕೊಂಡಿದ್ದರು.
ಇದನ್ನೂ ಓದಿ: ಚಾರ್ಜಿಂಗ್ ವೇಳೆ ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟ: ಅಜ್ಜಿ ಮನೆಗೆ ಬಂದಿದ್ದ 11 ವರ್ಷದ ಬಾಲಕಿ ಸಾವು