ಪಾಟ್ನಾ: ಬಿಹಾರದ ರಾಜಧಾನಿಯ ಗಾಂಧಿ ಮೈದಾನದಲ್ಲಿ ವಿದ್ಯಾರ್ಥಿ ಪ್ರತಿಭಟನೆಯನ್ನು ಬೆಂಬಲಿಸಿ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಜನ ಸುರಾಜ್ ಪಾರ್ಟಿಯ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಅವರನ್ನು ಸೋಮವಾರ ಮುಂಜಾನೆ ಬಿಹಾರ ಪೊಲೀಸರು ಬಂಧಿಸಿದರು.
ಪ್ರಶಾಂತ್ ಕಿಶೋರ್ ಅವರನ್ನು ಪಾಟ್ನಾ ಪೊಲೀಸರು ಗಾಂಧಿ ಮೈದಾನದಿಂದ ಬಲವಂತವಾಗಿ ಬಂಧಿಸಿ ಕರೆದೊಯ್ದಿದ್ದಾರೆ. ಬಿಹಾರ ಲೋಕಸೇವಾ ಆಯೋಗ ನಡೆಸಿದ್ದ 70ನೇ ಸಂಯುಕ್ತ (ಪ್ರಿಲಿಮಿನರಿ) ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, ಪರೀಕ್ಷೆ ರದ್ದುಪಡಿಸಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ಪ್ರಶಾಂತ್ ಕಿಶೋರ್ ಬೆಂಬಲಿಸಿ, ಜನವರಿ 2ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು.
ಸೋಮವಾರ ಬೆಳಗ್ಗೆ 4 ಗಂಟೆಯ ಸುಮಾರಿಗೆ 10 ಪೊಲೀಸ್ ಸಿಬ್ಬಂದಿಯೊಂದಿಗೆ ಪೊಲೀಸ್ ಅಧಿಕಾರಿಗಳು ಆಗಮಿಸಿ ಬಿಪಿಎಸ್‌ಸಿ ಅಭ್ಯರ್ಥಿಗಳೊಂದಿಗೆ ಪ್ರತಿಭಟನೆ ನಡೆಸುತ್ತಿದ್ದ ಕಿಶೋರ್ ಅವರನ್ನು, ಬೆಂಬಲಿಗರ ಪ್ರತಿರೋಧದ ನಡುವೆಯೂ ಆಂಬುಲೆನ್ಸ್‌ನಲ್ಲಿ ಕರೆದೊಯ್ದರು.
ಬಿಪಿಎಸ್‌ಸಿ ಪ್ರತಿಭಟನೆ ತೀವ್ರ: ಪಾಟ್ನಾದಲ್ಲಿ ಮುಷ್ಕರದ ವೇಳೆ ಪ್ರಶಾಂತ್ ಕಿಶೋರ್ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು ಕಪಾಳಮೋಕ್ಷ ಮಾಡಿದ್ದಾರೆ ಎಂದು ಬೆಂಬಲಿಗರು ಆರೋಪಿಸಿದ್ದಾರೆ. "ಕಳೆದ 5 ದಿನಗಳಿಂದ ರಾಜ್ಯದ ಕೆಟ್ಟ ಶಿಕ್ಷಣ ವ್ಯವಸ್ಥೆ ಮತ್ತು ಪರೀಕ್ಷಾ ಅಕ್ರಮಗಳ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪ್ರಶಾಂತ್ ಕಿಶೋರ್ ಅವರನ್ನು ಪೊಲೀಸರು ಬೆಳಗ್ಗೆ 4 ಗಂಟೆಗೆ ಬಲವಂತವಾಗಿ ವಶಕ್ಕೆ ಪಡೆದರು. ಅವರೊಂದಿಗೆ ಕುಳಿತಿದ್ದ ಸಾವಿರಾರು ಯುವಕರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿದೆ" ಎಂದು ಜನ ಸುರಾಜ್ ಪಕ್ಷ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಆರೋಪಿಸಿದೆ.
"ಪ್ರಶಾಂತ್ ಕಿಶೋರ್ ಅವರು ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತುತ್ತಿದ್ದರು. ಅವರ ಬಂಧನ ಸ್ವೀಕಾರಾರ್ಹವಲ್ಲ" ಎಂದು ಪ್ರತಿಭಟನಾಕಾರರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಟ್ನಾ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಚಂದ್ರಶೇಖರ್ ಸಿಂಗ್, "ಹೌದು, ಗಾಂಧಿ ಮೈದಾನದಲ್ಲಿ ಧರಣಿ ಕುಳಿತಿದ್ದ ಕಿಶೋರ್ ಮತ್ತು ಅವರ ಬೆಂಬಲಿಗರನ್ನು ಸೋಮವಾರ ಬೆಳಗ್ಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈಗ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಅವರ ಧರಣಿ ಕಾನೂನುಬಾಹಿರ. ನಿರ್ಬಂಧಿತ ಜಾಗದ ಬಳಿ ಧರಣಿ ನಡೆಸುತ್ತಿದ್ದಾರೆ" ಎಂದು ತಿಳಿಸಿದರು.
ಮಹಾತ್ಮ ಗಾಂಧಿ ಶಾಸನದ ಸಮೀಪವಿರುವ ನಿರ್ಬಂಧಿತ ತಾಣವಾದ ಗಾಂಧಿ ಮೈದಾನದಲ್ಲಿ ಆಮರಣಾಂತ ಉಪವಾಸ ನಡೆಸಿದ್ದಕ್ಕಾಗಿ ಕಿಶೋರ್ ವಿರುದ್ಧ ಪಾಟ್ನಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದರು.
ಮೂಲಗಳ ಪ್ರಕಾರ, ಕಿಶೋರ್ ಅವರನ್ನು ಪಾಟ್ನಾ ಏಮ್ಸ್‌ಗೆ ಕರೆದೊಯ್ಯಲಾಗಿದೆ. ಆದರೆ ವೈದ್ಯಕೀಯ ಚಿಕಿತ್ಸೆಗೆ ಅವರು ನಿರಾಕರಿಸಿದ್ದಾರೆ. ಬಿಪಿಎಸ್‌ಸಿ ಪರೀಕ್ಷೆಯನ್ನು ರದ್ದುಗೊಳಿಸಲು ಬಿಹಾರ ಸರ್ಕಾರ ಒಪ್ಪುವವರೆಗೂ ನಾನು ಉಪವಾಸ ಮುರಿಯುವುದಿಲ್ಲ ಎಂದು ಕಿಶೋರ್ ಪ್ರತಿಪಾದಿಸಿದ್ದಾರೆ.
ಜನ ಸುರಾಜ್ ಪಕ್ಷ ಪೊಲೀಸರ ಕ್ರಮವನ್ನು ಖಂಡಿಸಿದ್ದು, ಇದು ಸರ್ಕಾರದ 'ಹೇಡಿತನ'ದ ಸಂಕೇತ ಎಂದು ಕಿಡಿಕಾರಿದೆ.
ಡಿಸೆಂಬರ್ 13ರಂದು ನಡೆದ ಬಿಪಿಎಸ್‌ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ವಿವಿಧ ಅವ್ಯವಹಾರ ಆರೋಪಗಳ ಕುರಿತು ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು.
ಇದನ್ನೂ ಓದಿ: I.N.D.I.A. ಕೂಟಕ್ಕೆ ಸೇರುವ ಆಫರ್ ತಿರಸ್ಕರಿಸಿದ ಬಿಹಾರ ಸಿಎಂ ನಿತೀಶ್‌ಕುಮಾರ್