ಬಳ್ಳಾರಿ : ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಕಳೆದ 3 ವರ್ಷಗಳಲ್ಲಿ ಆಗಿರುವ ಹಲವು ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿ, ಆರೋಪಿಗಳನ್ನು ಬಂಧಿಸಿ, ಕಳ್ಳತನವಾದ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬಳ್ಳಾರಿ ವಲಯ ಐಜಿಪಿ ಲೋಕೇಶ್ ಕುಮಾರ್ ಹೇಳಿದರು.
ಜಿಲ್ಲಾ ಪೊಲೀಸ್ ಕಚೇರಿಯ ಆವರಣದಲ್ಲಿ ಕಳ್ಳರಿಂದ ವಶಪಡಿಸಿಕೊಂಡ ಸ್ವತ್ತಿನ ಕವಾಯಿತು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಾರಸುದಾರರಿಗೆ ಕಳ್ಳತನವಾದ ವಸ್ತುಗಳನ್ನು ನೀಡಿ ನಂತರ ಮಾಧ್ಯಮಗೋಷ್ಟಿಯಲ್ಲಿ ಅವರು ಮಾಹಿತಿ ನೀಡಿದರು.
ಕಳ್ಳತನವಾದ ವಸ್ತುಗಳನ್ನು ವಾರಸುದಾರರಿಗೆ ವಾಪಸ್ ಮಾಡುವಲ್ಲಿ ನಮ್ಮ ಬಳ್ಳಾರಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸರ ಈ ಕಾರ್ಯಾಚರಣೆಗೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ ಎಂದು ತಿಳಿಸಿದರು.
ಕಳೆದ ಮೂರು ವರ್ಷಗಳಲ್ಲಿ 107 ಪ್ರಕರಣ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅವುಗಳನ್ನು ನ್ಯಾಯಾಲಯಕ್ಕೆ ನೀಡಿ ಪರಿಶೀಲಿಸಿದ ನಂತರ ವಾರಸುದಾರರಿಗೆ ಈಗ ನಾವು ವಾಪಸ್ ನೀಡಿದ್ದೇವೆ ಎಂದರು.
ಕಳ್ಳತನ ಪ್ರಕರಣಗಳಲ್ಲಿ ಶೇ. 39% ಪ್ರಮಾಣದಲ್ಲಿ ಬಳ್ಳಾರಿ ಪೊಲೀಸರು ಪ್ರಕರಣಗಳನ್ನು ಭೇದಿಸಿ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇತರೆ ಜಿಲ್ಲೆಗಳಿಗೆ ಹಾಗೂ ರಾಜ್ಯಾದ್ಯಂತ ಹೋಲಿಕೆ ಮಾಡಿದ್ರೆ ಶೇ.25% ಮಾತ್ರ ಬಾಕಿ ಇದೆ ಎಂದು ತಿಳಿಸಿದರು.
ಒಟ್ಟು 95 ದ್ವಿಚಕ್ರವಾಹನ, 2 ಲ್ಯಾಪ್ ಟಾಪ್, 2563 ಗ್ರಾಂ ಬಂಗಾರ, 7535 ಗ್ರಾಂ ಬೆಳ್ಳಿ ಆಭರಣಗಳು, ಎರಡು ಮೊಬೈಲ್ ಗಳು, ಆರು ಪಂಪ್ಸೆಟ್ ಮೋಟಾರ್ಗಳು ಸೇರಿದಂತೆ ಇತರ ವಸ್ತುಗಳನ್ನು ನಮ್ಮ ಪೊಲೀಸರು ಜಪ್ತಿಪಡಿಸಿಕೊಂಡಿದ್ದಾರೆ ಎಂದರು.
2024 ನೇ ಸಾಲಿನಲ್ಲಿ ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ 58,375 ಪ್ರಕರಣಗಳನ್ನು ದಾಖಲಿಸಿ, ಒಟ್ಟು ರೂ. 2,85,58,000/- ದಂಡ ವಸೂಲಿ ಮಾಡಲಾಗಿದೆ. ಇದು ರಾಜ್ಯದಲ್ಲೇ ದಾಖಲೆಯಾಗಿದೆ ಎಂದು ಹೇಳಿದರು.
ಕೊಟ್ಪಾ ಕಾಯ್ದೆ ಅಡಿಯಲ್ಲಿ 5917 ಪ್ರಕರಣಗಳನ್ನ ದಾಖಲಿಸಲಾಗಿತ್ತು. ಅವುಗಳಲ್ಲಿ ರೂ. 4,88,640/ ದಂಡ ವಸೂಲಿ ಮಾಡಲಾಗಿದೆ ಎಂದು ಹೇಳಿದರು.
2024ನೇ ಸಾಲಿನಲ್ಲಿ ಕಳುವಾದ ರೂ. 4,94,42,031/- ಗಳಲ್ಲಿ ರೂ. 1,91,14,613/ ಮಾಲನ್ನು ವಶಪಡಿಸಿಕೊಂಡಿದ್ದು, ವಶಪಡಿಸಿಕೊಂಡ ಮಾಲಿನ ಪೈಕಿ ರೂ.1,48,40,600/- ಮೌಲ್ಯದ ಮಾಲನ್ನು ಫಿರ್ಯಾದಿದಾರರಿಗೆ/ವಾರಸುದಾರರಿಗೆ ಹಿಂತಿರುಗಿಸಲಾಗಿದೆ ಎಂದು ಐಜಿಪಿ ವಿವರಿಸಿದರು.
ಕಳ್ಳರಿಂದ ದರೋಡೆ ಆಗಿದ್ದ ಸ್ವತ್ತನ್ನು ವಶಕ್ಕೆ ಪಡೆದುಕೊಳ್ಳಲು ಅಂತಾರಾಜ್ಯದಲ್ಲಿ ಸಂಚರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ ಬಳ್ಳಾರಿ ಎಸ್ಪಿ ಶೋಭಾರಾಣಿ ಅವರ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು. ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿ. ಜೆ ಶೋಭಾರಾಣಿ, ಅಡಿಶನಲ್ ಎಸ್ಪಿ ನವೀನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮಹಾನಂದಿಕೊಟ್ಟಂ ನಿವಾಸಿ ಧನ್ ರಾಜ್ ಅವರು ಮಾತನಾಡಿ, ''ನಮ್ಮ ಸಂಬಂಧಿಕರೊಬ್ಬರ ಮದುವೆ ಇತ್ತು. ಕಾರ್ಯಕ್ರಮ ಮುಗಿಸಿ ಬರುವಾಗ ರಾತ್ರಿ ಸುಮಾರು 9:30 ಆಗಿತ್ತು. ಆಗ ನಮ್ಮ ಮೂವರು ಚಿಕ್ಕಮ್ಮರು ನಡೆದುಕೊಂಡು ಬರುವಾಗ ಇಬ್ಬರು ಮೋಟಾರ್ ಬೈಕ್ನಲ್ಲಿ ಬಂದು ಬಂಗಾರದ ಚೈನ್ ಕಸಿದುಕೊಂಡು ಪರಾರಿಯಾಗಿದ್ದರು. ತಕ್ಷಣವೇ ನಮಗೆ ಗೊತ್ತಿದ್ದ ಪೊಲೀಸರಿಗೆ ಫೋನ್ ಮಾಡಿದೆವು. ಅವರು ಸ್ಥಳಕ್ಕೆ ಬಂದು ಸಿಸಿಟಿವಿ ಕ್ಯಾಮರಾ ಪರಿಶೀಲನೆ ನಡೆಸಿದ್ದರು. ನಂತರ ಕಳೆದುಕೊಂಡಿದ್ದ ಎರಡೂವರೆ ತೊಲೆ ಚಿನ್ನವನ್ನ 6-7 ತಿಂಗಳಲ್ಲಿ ರಿಕವರಿ ಮಾಡಿಕೊಟ್ಟಿದ್ದಾರೆ'' ಎಂದು ಕೃತಜ್ಞತೆ ಸಲ್ಲಿಸಿದರು.
ಇದನ್ನೂ ಓದಿ : ರಾಜಧಾನಿಯಲ್ಲಿ ಈ ವರ್ಷ ಕಳ್ಳತನದ ಜೊತೆಗೆ ಕೊಲೆ, ಕೊಲೆಯತ್ನ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖ - CRIME RATE DECREASED IN BENGALURU