ಬೆಂಗಳೂರು:ರಾಜ್ಯ ಸರ್ಕಾರ ಸರಳ, ಸುಗಮ ಮತ್ತು ಉದ್ಯಮಸ್ನೇಹಿ ಉಪಕ್ರಮಗಳಿಗೆ ಬದ್ಧವಾಗಿದ್ದು, ಜನವರಿಯ ವೇಳೆಗೆ ಏಕಗವಾಕ್ಷಿ ಮಂಜೂರಾತಿ ವ್ಯವಸ್ಥೆಗೆ ಅಗತ್ಯವಿರುವ ತಂತ್ರಾಂಶವನ್ನು ಸಿದ್ಧಪಡಿಸಲಾಗುವುದು. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳಿಗೆಲ್ಲ ಡಿಸೆಂಬರ್ ಹೊತ್ತಿಗೆ ಈ ತಂತ್ರಾಂಶದ ಭಾಗವಾಗುವಂತೆ ಗಡುವು ಕೊಡಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಸಂಜೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಮಂಜುಳಾ, ಇ-ಆಡಳಿತ ಇಲಾಖೆಯ ಮುಖ್ಯಸ್ಥ ಉಜ್ವಲ್ ಘೋಷ್, ಕೆಐಎಡಿಬಿ ಸಿಇಒ ಡಾ.ಮಹೇಶ ಸೇರಿದಂತೆ ಎಲ್ಲ ಇಲಾಖೆಗಳ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿದರು.
ಬಳಿಕ ಮಾತನಾಡಿದ ಸಚಿವರು, ಹೂಡಿಕೆ ಯೋಜನೆಗಳಿಗೆ ಮಂಜೂರಾತಿ, ಕೈಗಾರಿಕಾ ನಿವೇಶನ, ಕೈಗಾರಿಕಾ ಪ್ರದೇಶಗಳಲ್ಲಿ ಇರುವ ಸಿಎ ನಿವೇಶನ ಇತ್ಯಾದಿಗಳ ಹಂಚಿಕೆ ಈಗಿರುವ ಸಂಕೀರ್ಣ ಮತ್ತು ಬಹುಹಂತಗಳ ಅನುಮತಿ ವಿಧಾನದಿಂದ ವಿಳಂಬವಾಗುತ್ತಿದೆ. ಇದಕ್ಕೆ ಏಕಗವಾಕ್ಷಿ ವ್ಯವಸ್ಥೆ ಮೂಲಕ ಇತಿಶ್ರೀ ಹಾಡಲಾಗುವುದು. ಇದಕ್ಕಾಗಿ ಮೈಕ್ರೋಸಾಫ್ಟ್ ಕಂಪನಿಯು ಸಾಫ್ಟ್ವೇರ್ ಸಿದ್ಧಪಡಿಸಿದೆ. ಇದರೊಂದಿಗೆ ಎಲ್ಲ ಇಲಾಖೆಗಳ ಜೋಡಣೆ ಬಾಕಿದ್ದು, ಅದನ್ನು ತ್ವರಿತವಾಗಿ ಮಾಡಬೇಕು. ಈ ಉಪಕ್ರಮದ ಪರಿಣಾಮಕಾರಿ ಅನುಷ್ಠಾನದ ಸಂಬಂಧ ಸರಕಾರದ ಮುಖ್ಯ ಕಾರ್ಯದರ್ಶಿಗಳು ಸದ್ಯದಲ್ಲೇ ಇನ್ನೊಂದು ಸಭೆ ನಡೆಸಲಿದ್ದಾರೆ ಎಂದರು.