ಕರ್ನಾಟಕ

karnataka

ETV Bharat / state

ಬೆಳಗಾವಿಯ ರಾಜಕಾರಣಿಗಳಿಗೆ ಕನ್ನಡದ ಮೇಲೆ ಸ್ವಾಭಿಮಾನ ಬಂದಾಗ ಇಂಥ ಘಟನೆಗಳು ಅಂತ್ಯ: ನಾರಾಯಣ ಗೌಡ - KANNADA RAKSHANA VEDIKE PROTEST

ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಎಂಇಎಸ್​ ಮತ್ತು ಶಿವಸೇನೆ ಸಂಘಟನೆಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

Protest by Karave activists in Belagavi
ಕ.ರ.ವೇ ಕಾರ್ಯಕರ್ತರಿಂದ ಬೆಳಗಾವಿಯಲ್ಲಿ ಪ್ರತಿಭಟನೆ (ETV Bharat)

By ETV Bharat Karnataka Team

Published : Feb 25, 2025, 5:15 PM IST

ಬೆಳಗಾವಿ: ಕೆಎಸ್ಆರ್​ಟಿಸಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಹಾಗೂ ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್​ಗಳಿಗೆ ಮಸಿ ಬಳಿದಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೆಳಗಾವಿಯಲ್ಲಿ ಇಂದು ಪ್ರತಿಭಟನೆ ನಡೆಸಿದರು.

ಬೆಳಗ್ಗೆ ಬೆಳಗಾವಿಗೆ ಆಗಮಿಸಿದ ಕ.ರ.ವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಂಡಕ್ಟರ್ ಮಹಾದೇವ ಹುಕ್ಕೇರಿ ಅವರನ್ನು ಭೇಟಿಯಾಗಿ, ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು.

ಕ.ರ.ವೇ ಕಾರ್ಯಕರ್ತರಿಂದ ಬೆಳಗಾವಿಯಲ್ಲಿ ಪ್ರತಿಭಟನೆ (ETV Bharat)

ಬಳಿಕ ಬಾಳೇಕುಂದ್ರಿ ಚಲೋ ಹಮ್ಮಿಕೊಳ್ಳಲಾಗಿತ್ತು. ರಾಣಿ ಚನ್ನಮ್ಮ ವೃತ್ತದಲ್ಲಿ ಕ.ರ.ವೇ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಕನ್ನಡ ಬಾವುಟಗಳನ್ನು ಹಿಡಿದು ಎಂಇಎಸ್, ಶಿವಸೇನೆ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು.

ಇದಕ್ಕೆ ಮುನ್ನ, ಚನ್ನಮ್ಮನ ಪುತ್ಥಳಿಗೆ ನಾರಾಯಣಗೌಡ ಮಾಲಾರ್ಪಣೆ ಮಾಡಿದರು. ಕ.ರ.ವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ, ರಾಜ್ಯ ಸಂಚಾಲಕ ಸುರೇಶ ಗವನ್ನವರ ಸೇರಿ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಭಟನೆಯ ಬಳಿಕ‌ ಮಾಧ್ಯಮಗಳೊಂದಿಗೆ ಮಾತನಾಡಿದ ನಾರಾಯಣ ಗೌಡ, "ಇಲ್ಲಿನ ಜನಪ್ರತಿನಿಧಿಗಳನ್ನು ಈ ನೆಲದ ಜನರು ಆಯ್ಕೆ ಮಾಡಿದ್ದಾರೆ. ಕೇವಲ ಮರಾಠಿಗರು, ಎಂಇಎಸ್​ನವರು ಆಯ್ಕೆ ಮಾಡಿ ಕಳುಹಿಸಿಲ್ಲ. ಎಲ್ಲ ಕನ್ನಡಿಗರೂ ಮತ ಹಾಕಿದ್ದಾರೆ. ಹಾಗಾಗಿ, ಹಲ್ಲೆಗೊಳಗಾದ ಕನ್ನಡಿಗ ಕಂಡಕ್ಟರ್ ಪರವಾಗಿ ನೀವು ನಿಲ್ಲಬೇಕು. ಅದನ್ನು ಬಿಟ್ಟು ಮರಾಠಿ ವೋಟ್ ಬ್ಯಾಂಕ್​ಗಾಗಿ ಕನ್ನಡಿಗರನ್ನು ಬಲಿ ಕೊಡುವ ಕೆಲಸ ಮಾಡಿದರೆ ಕ.ರ.ವೇಯ ದೊಡ್ಡ ಹೋರಾಟವನ್ನು ಇಲ್ಲಿನ ಇಬ್ಬರು ಸಚಿವರು ಎದುರಿಸಬೇಕಾಗುತ್ತದೆ" ಎಂದು ಎಚ್ಚರಿಸಿದರು.

ಚನ್ನಮ್ಮನ ಪುತ್ಥಳಿಗೆ ಮಾಲಾರ್ಪಣೆ (ETV Bharat)

"ತಕ್ಷಣ ಸಿಪಿಐ ಅವರನ್ನು ಅಮಾನತು ಮಾಡಬೇಕು. ಪ್ರಕರಣದಲ್ಲಿ ಬಂಧಿಸಿರುವವರ ಮೇಲೆ ಗೂಂಡಾ ಕಾಯ್ದೆಯಡಿ ಕೇಸ್ ಹಾಕಿ ಗಡೀಪಾರು ಮಾಡಬೇಕು. ಬೆಳಗಾವಿಯ ರಾಜಕಾರಣಿಗಳಿಗೆ ಕನ್ನಡದ ಸ್ವಾಭಿಮಾನ ಬಂದಾಗ ಈ ರೀತಿಯ ಘಟನೆಗಳು ಅಂತ್ಯ ಕಾಣುತ್ತವೆ. ಇಂಥವರನ್ನು ಬೆಳೆಸುತ್ತಿರುವವರು ಬೆಳಗಾವಿ ರಾಜಕಾರಣಿಗಳು. ಈ ಬಗ್ಗೆ ಚರ್ಚಿಸಲು ನಾಳೆ ಗೃಹ ಸಚಿವರನ್ನು ಭೇಟಿ ಮಾಡುತ್ತೇನೆ" ಎಂದು ತಿಳಿಸಿದರು.

"ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದು ಮಹಾರಾಷ್ಟ್ರದವರಿಗೂ ಗೊತ್ತಿದೆ. ಮಹಾಜನ್ ಆಯೋಗದ ವರದಿ ಪ್ರಕಾರವೂ ಇದು ತೀರ್ಮಾನವಾಗಿದೆ. ಆದರೂ ಎಂಇಎಸ್ ತನ್ನ ಕಿತಾಪತಿ ನಿಲ್ಲಿಸುತ್ತಿಲ್ಲ. ಎಂಇಎಸ್​​ನವರ ದೌರ್ಜ್ಯನಕ್ಕೆ ಅಂತ್ಯ ಕಾಣಿಸಬೇಕಿದೆ. ಏಳು ಎಂಇಎಸ್ ಶಾಸಕರು ಗೆದ್ದು ಬರುತ್ತಿರುವವರು ಈಗ ನೆಲಕಚ್ಚಿದ್ದಾರೆ. ಈಗ ಒಬ್ಬ ಶಾಸಕರೂ ಇಲ್ಲಿ ಗೆಲ್ಲಲಾಗುತ್ತಿಲ್ಲ. ಅದರ ಹೊಟ್ಟೆಯುರಿಗೆ ಅಮಾಯಕ ಕನ್ನಡಿಗರ ಮೇಲೆ ಗೂಂಡಾಗಿರಿ ಪ್ರದರ್ಶಿಸುತ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:ಕಂಡಕ್ಟರ್ ಮೇಲಿನ ಪೋಕ್ಸೋ ಕೇಸ್ ವಾಪಸ್ : ನಾವು ಕನ್ನಡಾಭಿಮಾನಿಗಳು ಎಂದ ಬಾಲಕಿ ಪೋಷಕರು; ಸಿಪಿಐ ವರ್ಗಾವಣೆ - BELAGAVI CONDUCTOR CASE

ABOUT THE AUTHOR

...view details