ಬೆಳಗಾವಿ :"ಕನ್ನಡಿಗ ಕಂಡಕ್ಟರ್ ಮೇಲೆ ಆದ ಅನ್ಯಾಯ ಖಂಡಿಸಿ ಪ್ರತಿಭಟಿಸಲು ಮತ್ತು ಕೆಲ ಮರಾಠಿ ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಲು ಮಂಗಳವಾರ ಬೆಳಗ್ಗೆ ನಾನು ಬೆಳಗಾವಿಗೆ ಬರುತ್ತಿದ್ದೇನೆ. ಕನ್ನಡದ ಕೆಚ್ಚೆದೆಯ ಕಲಿಗಳು, ಹುಲಿಗಳು ಎಲ್ಲರೂ ಅಂದು ಬೆಳಗಾವಿಗೆ ಬನ್ನಿ. ನಮ್ಮ ಮುಂದೆ ಆ ಕಿಡಿಗೇಡಿಗಳ ಪ್ರದರ್ಶಿಸಲಿ ನೋಡೋಣ. ನಾನು ಬರುವುದರೊಳಗೆ ಕಂಡಕ್ಟರ್ ಮೇಲಿನ ಪೋಕ್ಸೋ ಕೇಸ್ ವಾಪಸ್ ಪಡೆಯುವಂತೆ" ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಆಗ್ರಹಿಸಿದ್ದಾರೆ.
ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ನಾರಾಯಣಗೌಡರು, "ಕನ್ನಡ ಮಾತಾಡಿದ್ದಕ್ಕೆ ಮರಾಠಿ ಮಾತಾಡು ಅಂತಾ ಕಂಡಕ್ಟರ್ ಮೇಲೆ ಎಂಇಎಸ್ ಮತ್ತು ಕೆಲ ಮರಾಠಿಗರು ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ಇಂಥವರನ್ನು ಅನೇಕ ವರ್ಷಗಳಿಂದ ನಾನು ನೋಡಿದ್ದೇನೆ. ಹಿಂದೆ 7 ಜನ ಎಂಇಎಸ್ ಕಿಡಿಗೇಡಿಗಳು ಶಾಸಕರಾಗಿ ಆಯ್ಕೆಯಾಗಿ ಬರುತ್ತಿದ್ದರು. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಗೆಲ್ಲುತ್ತಿದ್ದರು. ಜಿ.ಪಂ., ತಾ.ಪಂ ಅವರ ಹಿಡಿತದಲ್ಲಿದ್ದವು. ಕನ್ನಡ ಬಾವುಟ ಹಾರಿಸದ ಸ್ಥಿತಿಯಿತ್ತು. ಆದರೆ, ಅವರನ್ನು ನಮ್ಮ ಕನ್ನಡಿಗರು ಬಗ್ಗು ಬಡಿದಿದ್ದಾರೆ. ಹಾಗಾಗಿ, ಇಂಥ ಉದ್ಧಟತನಕ್ಕೆ ನಾವು ಹೆದರುವುದಿಲ್ಲ. ಯಾಕೆಂದರೆ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಹುಟ್ಟಿದ ಪುಣ್ಯಭೂಮಿ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದಿಂಚು ಜಾಗ ಕಬಳಿಸಲು ಸಾಧ್ಯವಿಲ್ಲ :"ಎಂಇಎಸ್ ಬೇರುಗಳನ್ನು ಈಗಾಗಲೇ ಕತ್ತರಿಸಿದ್ದೇವೆ. ಅದಕ್ಕಾಗಿ ಅಮಾಯಕ ಕನ್ನಡಿಗನ ಮೇಲೆ ದೌರ್ಜನ್ಯ ಮಾಡಿದ್ದಾರೆ. ಮಂಗಳವಾರ ಬೆಳಗ್ಗೆ ನಾನು ಬೆಳಗಾವಿಗೆ ಬರುತ್ತಿದ್ದೇನೆ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಬೆಳಗಾವಿಯನ್ನು ನಿಮ್ಮ ಕೈಯಿಂದ ಏನೂ ಮಾಡಲು ಆಗೋದಿಲ್ಲ. ಒಂದಿಂಚು ಜಾಗ ಕಬಳಿಸಲು ನಿಮಗೆ ಸಾಧ್ಯವಿಲ್ಲ" ಎಂದು ಎಚ್ಚರಿಕೆ ರವಾನಿಸಿದರು.
"ಎಂಇಎಸ್ ಬೆನ್ನಿಗೆ ಬೆಳಗಾವಿ ರಾಜಕಾರಣಿಗಳು ನಿಂತಿದ್ದಾರೆ. ಕನ್ನಡಿಗರನ್ನು ಮರೆತು ಭ್ರಷ್ಟ ರಾಜಕಾಣಿಗಳು
ರಣಹೇಡಿಗಳಂತೆ ಅವರನ್ನು ಬೆಂಬಲಿಸುತ್ತಿದ್ದಾರೆ. ಇವರ ರಾಜಕೀಯ ಪ್ರಭಾವದಿಂದ ರಾತ್ರೋರಾತ್ರಿ ಕಂಡಕ್ಟರ್ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಕರ್ನಾಟಕದ ಬೆಳಗಾವಿಯಲ್ಲಿ ನೀವು ಕೆಲಸ ಮಾಡುತ್ತಿದ್ದಿರೋ ಅಥವಾ ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದಿರೋ" ಎಂದು ಬೆಳಗಾವಿ ಪೊಲೀಸರ ವಿರುದ್ಧ ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.