ಬೆಂಗಳೂರು:''ರಾಮಜನ್ಮ ಭೂಮಿ ಹೋರಾಟದಲ್ಲಿ ಕರ್ನಾಟಕದ ಪಾತ್ರ ದೊಡ್ಡದಿದೆ. ರಾಮನಿಗೂ ಕರ್ನಾಟಕಕ್ಕೂ ತುಂಬಾ ನಂಟಿದೆ. ಆಂಜನೇಯ ಜನ್ಮಭೂಮಿ ಅಭಿವೃದ್ಧಿಪಡಿಸುವುದು ನಮ್ಮ ಮುಂದಿನ ಗುರಿ'' ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಅಯೋಧ್ಯೆಯಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಆಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಬಾಲಬ್ರೂಹಿ ಅತಿಥಿ ಗೃಹದ ಬಳಿ ಇರುವ ಮಾರುತಿ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ''ಇಂದು ಭಾರತದ ಇತಿಹಾಸದಲ್ಲಿ ಮಹತ್ವದ ಭಕ್ತಿ ಭಾವದ ದಿನ, ಐತಿಹಾಸಿಕ ದಿನ. ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆ ದಿನ'' ಎಂದರು.
''ಒಂದು ದೇಶದ ಪ್ರಜಾಪ್ರಭುತ್ವದಲ್ಲಿ ಅಂತಿಮ ನಿರ್ಣಯ ಜನರ ನಿರ್ಣಯ. ಎಲ್ಲಕ್ಕಿಂತ ದೊಡ್ಡ ಕೆಲಸ ಸರ್ಕಾರ ಮಾಡಬೇಕಾಗಿರುವುದು ಜನರ ಕೆಲಸ. ಈ ಕೆಲಸ ಪ್ರಧಾನಿ ನರೇಂದ್ರ ಮೋದಿ ಅವರಿಂದ ಆಗುತ್ತಿದೆ. ಅತ್ಯಂತ ಶ್ರದ್ಧಾ ಭಕ್ತಿಯಿಂದ ಅಯೋಧ್ಯೆಯಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಆಗುತ್ತಿದೆ. ರಾಮ ಮಂದಿರಕ್ಕಾಗಿ ಹೋರಾಟ ಮಾಡಿದಂತಹ ಎಲ್ಲ ಮಹನೀಯರಿಗೆ ಕೋಟಿ ಕೋಟಿ ನಮನ ಸಲ್ಲಿಸುವುದು'' ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನ ತಮ್ಮ ಮನೆಯಲ್ಲಿ ಕುಟುಂಬದ ಸದಸ್ಯರೊಂದಿಗೆ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಿದರು. ''ರಾಮಜನ್ಮಭೂಮಿ ಹೋರಾಟದಲ್ಲಿ ಕರ್ನಾಟಕದ ದೊಡ್ಡ ಪಾತ್ರವಿದೆ. ರಾಮನಿಗೂ ಕರ್ನಾಟಕಕ್ಕೂ ನಂಟಿದೆ. ಆಂಜನೇಯ ಜನ್ಮಸ್ಥಳ ಆಂಜನಾದ್ರಿ ಕರ್ನಾಟಕದಲ್ಲೇ ಇದೆ. ಆಂಜನೇಯ ಇದ್ದರೆ ರಾಮ ಪರಿಪೂರ್ಣ. ಮುಂದಿನ ನಮ್ಮ ಗುರಿ ಆಂಜನೇಯ ಜನ್ಮ ಭೂಮಿ ಅಭಿವೃದ್ಧಿ ಮಾಡುವುದು ಮುಂದಿನ ದಿನಗಳಲ್ಲಿ ಆಂಜನೇಯ ಕ್ಷೇತ್ರ ಅಭಿವೃದ್ಧಿ ಮಾಡಬೇಕು ಅಂತ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ. ರಾಮ ರಾಜ್ಯ ಸ್ಥಾಪನೆ ನಮ್ಮ ಮುಂದಿನ ಗುರಿ. ಇದು ಅಮೃತ ಘಳಿಗೆ, ಇಂಥ ಐತಿಹಾಸಿಕ ಸಂದರ್ಭದಲ್ಲಿ ನಾವಿದ್ದೇವೆ ಎನ್ನುವುದು ನಮ್ಮ ಖುಷಿ. ಇಂಥ ಪವಿತ್ರವಾದ ದಿನ ನಾವು ರಾಜಕೀಯ ಬೆರೆಸಿ ಮಾತನಾಡುವುದಿಲ್ಲ'' ಎಂದು ಹೇಳಿದರು.
ನಿವಾಸದಲ್ಲಿ ರಾಮಪೂಜೆ ನೆರವೇರಿಸಿದ ಬೊಮ್ಮಾಯಿ:ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಸವರಾಜ ಬೊಮ್ಮಾಯಿ ಇಂದು ಬೆಂಗಳೂರಿನ ಆರ್. ಟಿ. ನಗರದ ತಮ್ಮ ಮನೆಯಲ್ಲಿ ಕುಟುಂಬದ ಸದಸ್ಯರೊಂದಿಗೆ ಶ್ರೀ ರಾಮನಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪತ್ನಿ ಚನ್ನಮ್ಮ ಹಾಗೂ ಮಗ ಭರತ್ ಬೊಮ್ಮಾಯಿ ಪಾಲ್ಗೊಂಡಿದ್ದರು.
ಇದನ್ನೂ ಓದಿ:ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದ ಪ್ರಧಾನಿ: 'ಆರತಿ' ವೇಳೆ ಸೇನಾ ಹೆಲಿಕಾಪ್ಟರ್‌ಗಳಿಂದ ಪುಷ್ಪವೃಷ್ಟಿ