ಬೆಂಗಳೂರು: 50 ಕೋಟಿ ರೂಪಾಯಿಗೂ ಹೆಚ್ಚು ಬಂಡವಾಳ ಹೂಡಿಕೆಯ 14 ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳು ಸೇರಿದಂತೆ ಒಟ್ಟು 88 ಯೋಜನೆಗಳಿಂದ 4,071.11 ಕೋಟಿ ಬಂಡವಾಳ ಹೂಡಿಕೆಯ ಯೋಜನೆಗಳಿಗೆ ಗುರುವಾರ ನಡೆದ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಒಪ್ಪಿಗೆ ನೀಡಿದೆ. ಈ ಯೋಜನೆಗಳಿಂದ 10,585 ಜನರಿಗೆ ಉದ್ಯೋಗವಕಾಶ ಲಭಿಸಲಿದೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಆನೇಕಲ್‌ನ ವೀರಸಂದ್ರ ಗ್ರಾಮದಲ್ಲಿ 485 ಕೋಟಿ ಹೂಡಿಕೆಯೊಂದಿಗೆ 1,000 ಮಂದಿಗೆ ಐಟಿ ಮತ್ತು ಐಟಿಇಎಸ್ ಕ್ಷೇತ್ರದಲ್ಲಿ ಉದ್ಯೋಗ ನೀಡುವ ಅರಾಟ್ ಒನ್ ವರ್ಲ್ಡ್ ಪ್ರೈ.ಲಿ., (ಈ ಹಿಂದಿನ ಆರ್‌ಜಿಆರ್ ಟೆಕ್‌ಪಾರ್ಕ್ ಪ್ರೈ.ಲಿ.) ಕಂಪನಿಗೆ ಸಭೆಯಲ್ಲಿ ಅನುಮತಿ ನೀಡಲಾಗಿದೆ.
ಡೇರಿ ಕ್ಲಾಸಿಕ್ ಐಸ್ ಕ್ರೀಂ ಸಂಸ್ಥೆಯು, ಕಲಬುರಗಿ ಜಿಲ್ಲೆಯ ನಂದೂರು ಕಾಸರಟಗಿ ಕೈಗಾರಿಕಾ ಪ್ರದೇಶದಲ್ಲಿ ₹285 ಕೋಟಿ ವೆಚ್ಚದಲ್ಲಿ ಐಸ್ ಕ್ರೀಂ ಉತ್ಪಾದನಾ ಘಟಕ ಸ್ಥಾಪಿಸುತ್ತಿದ್ದು ಇದರಿಂದ 900 ಜನರಿಗೆ ಉದ್ಯೋಗ ಸಿಗಲಿದೆ. ಫ್ರೋಜನ್ ಡೆಸರ್ಟ್, ಕುಲ್ಫಿ ಇತ್ಯಾದಿ ಕೋಲ್ಡ್ ಸ್ಟೋರೇಜ್ ಸಹಿತ ವ್ಯವಸ್ಥೆ ಕಲ್ಪಿಸುವ ಯೋಜನೆಗೆ ಒಪ್ಪಿಗೆ ನೀಡಲಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ್ ವಿವರಿಸಿದರು.