ಬೆಂಗಳೂರು:ವೈದ್ಯರು, ನರ್ಸ್‌ಗಳು ಸೇರಿದಂತೆ ಫಾರ್ಮಸಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡುವಂತೆ ಹೈಕೋರ್ಟ್ ಆದೇಶ ನೀಡಿದೆ. ಯಶವಂತಪುರದ ಇಎಸ್‌ಐ ಡಿಸ್ಪೆನ್ಸರಿಯಲ್ಲಿ ಫಾರ್ಮಸಿ ಅಧಿಕಾರಿಯಾಗಿರುವ ಕೆ. ಪ್ರದೀಪ್ ಮತ್ತಿತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕ ಸದಸ್ಯಪೀಠ ಈ ಆದೇಶ ಮಾಡಿದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದೆ ಹೈಕೋರ್ಟ್ ನೀಡಿರುವ ಆದೇಶವನ್ನು ಉಲ್ಲೇಖಿಸಿ ಈ ಆದೇಶವನ್ನು ನೀಡಲಾಗುತ್ತಿದೆ ಎಂದು ಏಕ ಸದಸ್ಯಪೀಠ ತಿಳಿಸಿದೆ. ಜೊತೆಗೆ, ಕೇಂದ್ರ ಚುನಾವಣಾ ಆಯೋಗ, ರಾಜ್ಯ ಸರ್ಕಾರ ಮತ್ತು ಜಿಲ್ಲಾ ಚುನಾವಣಾಧಿಕಾರಿಗೆ ನೋಟಿಸ್ ಜಾರಿಗೊಳಿಸಿದೆ.
ಅರ್ಜಿದಾರರು ಫಾರ್ಮಸಿ ಅಧಿಕಾರಿಗಳಾಗಿದ್ದಾರೆ. ರಾಜ್ಯದಲ್ಲಿ ಈ ಹಿಂದೆ ನಡೆದ ಚುನಾವಣೆ ಸಮಯದಲ್ಲಿ ಫಾರ್ಮಸಿ ಅಧಿಕಾರಿಗಳಿಗೆ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡಲಾಗಿತ್ತು. ಆದರೆ, ಈ ಸಲ ಮತ್ತೆ ಚುನಾವಣೆಯಲ್ಲಿ ಅವರನ್ನು ನಿಯೋಜನೆ ಮಾಡಲಾಗಿದ್ದು, ಇದು ಭಾರತೀಯ ಚುನಾವಣಾ ಆಯೋಗ ಹೊರಡಿಸಿರುವ ಕೈಪಿಡಿಗೆ ವಿರುದ್ಧವಾಗಿದೆ. ಚುನಾವಣಾ ಆಯೋಗವೇ ವೈದ್ಯರು, ನರ್ಸ್‌ಗಳು ಮತ್ತು ಎಎನ್‌ಎಂಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸದಂತೆ ಆದೇಶ ನೀಡಿದೆ. ಹಾಗಾಗಿ, ಅವರಿಗೆ ಸೇವೆಯಿಂದ ವಿನಾಯಿತಿ ನೀಡಬೇಕು ಎಂದು ನ್ಯಾಯಾಲಯ ಜಿಲ್ಲಾ ಚುನಾವಣಾಧಿಕಾರಿಗೆ ನಿರ್ದೇಶನ ನೀಡಿದೆ.