ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಅಕ್ರಮವಾಗಿ ತಮ್ಮ ಕುಟುಂಬಸ್ಥರಿಗೆ ನಿಯಮ ಬಾಹಿರವಾಗಿ ನಿವೇಶನಗಳನ್ನು ಪಡೆದ ಆರೋಪ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠವು ವಿಚಾರಣೆ ನಡೆಸಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ. ಹೈಕೋರ್ಟ್ ಆದೇಶದಿಂದಾಗಿ ಸಿದ್ದರಾಮಯ್ಯ ವಿಚಾರಣೆ ಎದುರಿಸುವ ಅನಿವಾರ್ಯತೆ ಎದುರಾಗಿದೆ.
ಹೈಕೋರ್ಟ್ ಪೀಠ ಹೇಳಿದ್ದೇನು?ಪ್ರಕರಣ ಸಂಬಂಧ ದೂರುದಾರರು ತಮ್ಮ ದೂರನ್ನು ದಾಖಲಿಸುವಲ್ಲಿ ಮತ್ತು ರಾಜ್ಯಪಾಲರಿಂದ ಅನುಮೋದನೆ ಪಡೆಯುವಲ್ಲಿ ಸಮರ್ಥನೀಯರಾಗಿದ್ದಾರೆ. ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17 ಎ ಅಡಿಯಲ್ಲಿ ಅನುಮೋದನೆ ಪಡೆಯುವುದು ಕಡ್ಡಾಯವಾಗಿದೆ. ಆದರೆ, ಬಿಎನ್ಎಸ್ 200 ಮತ್ತು 223 ಅಡಿಯಲ್ಲಿ ಖಾಸಗಿ ವ್ಯಕ್ತಿಗಳು ದೂರು ದಾಖಲಿಸುವ ಸಂದರ್ಭದಲ್ಲಿ ತನಿಖಾಧಿಕಾರಿಯಿಂದ ರಾಜ್ಯಪಾಲರಿಗೆ ಮನವಿ ಮಾಡಬೇಕು ಎಂಬ ನಿಯಮ ಕಡ್ಡಾಯವಾಗಿಲ್ಲ. ಅಲ್ಲದೆ, ಖಾಸಗಿ ವ್ಯಕ್ತಿಯೇ ರಾಜ್ಯಪಾಲರಿಂದ ಅನುಮೋದನೆ ಪಡೆಯುವುದಕ್ಕೆ ಅವಕಾಶವಿರಲಿದೆ. ರಾಜ್ಯಪಾಲರು ಸಾಮಾನ್ಯ ಸಂದರ್ಭಗಳಲ್ಲಿ ಸಂವಿಧಾನದ ಪರಿಚ್ಛೇದ 163 ಅಡಿಯಲ್ಲಿ ಕೌನ್ಸಿಲ್ ಆಫ್ ಮಿನಿಸ್ಟರ್ ಅವರ ಸಲಹೆಗಳನ್ನು ಪಡೆಯಬಹುದಾಗಿದೆ. ಈ ಪ್ರಸ್ತುತ ಪ್ರಕರಣದಲ್ಲಿ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಬಹುದಾಗಿದೆ, ಅದರಲ್ಲಿ ಯಾವುದೇ ರೀತಿಯ ತಪ್ಪು ಆಗಿಲ್ಲ. ದೂರುದಾರರು ನೀಡಿರುವ ದಾಖಲೆಗಳು ಮತ್ತು ಸಾಕ್ಷ್ಯಾಧಾರಗಳ ಆರೋಪದಲ್ಲಿ ಅರ್ಜಿದಾರರ ಕುಟುಂಬದ ಸದಸ್ಯರಿದ್ದಾರೆ. ಈ ಎಲ್ಲ ಅಂಶಗಳನ್ನು ಪರಿಶೀಲಿಸಿದಾಗ ಈ ಪ್ರಕರಣದಲ್ಲಿ ಸಂಶಯವಿಲ್ಲದೆಯೇ ತನಿಖೆ ನಡೆಯಬೇಕಾದ ಅಗತ್ಯವಿದೆ. ಅಲ್ಲದೆ, ಅರ್ಜಿಯಲ್ಲಿ ವಿವರಿಸಲಾದ ಸಂಗತಿಗಳ ಬಗ್ಗೆ ತನಿಖೆಯ ಅಗತ್ಯವಿದ್ದು, ಅರ್ಜಿಯನ್ನು ವಜಾಗೊಳಿಸಲಾಗುತ್ತಿದೆ ಎಂದು ಪೀಠ ತಿಳಿಸಿದೆ.
ವಿಚಾರಣೆ ವೇಳೆ ಮುಖ್ಯಮಂತ್ರಿಗಳ ಪರವಾಗಿ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಪ್ರೊ. ರವಿವರ್ಮಕುಮಾರ್ ಸುದೀರ್ಘ ವಾದ ಮಂಡಿಸಿದ್ದರು. ರಾಜ್ಯಪಾರ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ದೂರುದಾರರ ಪರವಾಗಿ ಹಿರಿಯ ವಕೀಲರಾದ ಕೆ.ಜಿ. ರಾಘವನ್ ಮತ್ತಿತರ ವಕೀಲರು ವಾದ ಮಂಡಿಸಿದ್ದರು.
ಸಿದ್ದರಾಮಯ್ಯ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ರಾಜ್ಯಪಾಲರು ಜನರಿಂದ ಆಯ್ಕೆಯಾಗಿಲ್ಲ, ನೇಮಕಗೊಂಡಿದ್ದಾರೆ. ಹೀಗಾಗಿ, ರಾಜ್ಯಪಾಲರಿಗೆ ಹೆಚ್ಚಿನ ಉತ್ತರದಾಯಿತ್ವ ಇದೆ. ರಾಜ್ಯಪಾಲರು ಅತಿ ವಿರಳ ಸಂದರ್ಭದಲ್ಲಿ ವಿವೇಚನಾಧಿಕಾರ ಬಳಸಬೇಕು. ರಾಜ್ಯಪಾಲರು 32 ವರ್ಷದ ಹಳೆಯ ಪ್ರಕರಣದ ತನಿಖೆಗೆ ಅನುಮತಿ ನೀಡಿದ್ದಾರೆ. ರಾಷ್ಟ್ರಪತಿ ಆಳ್ವಿಕೆಗಿಂತ ಇದು ಹೆಚ್ಚು ರಾಜಕೀಯ ಪ್ರೇರಿತ. ಸೆಕ್ಷನ್ 17ಎ ಅಡಿ ಅನುಮತಿ ನೀಡುವಾಗ ಸಚಿವ ಸಂಪುಟದ ಶಿಫಾರಸು ಪಾಲಿಸಬೇಕು. ಪಾಲಿಸದಿದ್ದರೆ ಅದಕ್ಕೆ ಸೂಕ್ತ ಕಾರಣ ನೀಡುವ ಹೊಣೆ ರಾಜ್ಯಪಾಲರ ಮೇಲಿರಲಿದೆ ಎಂದು ವಾದ ಮಂಡಿಸಿದ್ದರು.
ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ರಾಜ್ಯಪಾಲರು ನಿರ್ಧಾರ ಕೈಗೊಳ್ಳಬೇಕು. 1000 ಪುಟಗಳ ದಾಖಲೆ ಪರಿಶೀಲಿಸಿ 5 ಪುಟಗಳಲ್ಲಿ ಆದೇಶ ಹೇಳಲಾಗದು. ರಾಜ್ಯಪಾಲರ ಆದೇಶ ಓದಿದರೆ ಎಲ್ಲವೂ ಅರ್ಥವಾಗುವಂತಿರಬೇಕು. ರಾಜ್ಯಪಾಲರು ಪಕ್ಷಾತೀತರಾಗಿರಬೇಕು ಎಂಬುದು ಕೇಳಲು ಮಾತ್ರ ಇದೆ. ಹಲವು ರಾಜ್ಯಪಾಲರು ರಾಜಿನಾಮೆ ನೀಡಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಖಾಸಗಿ ದೂರುದಾರರು ಸಕ್ಷಮ ಪ್ರಾಧಿಕಾರಕ್ಕೆ ದೂರು ಸಲ್ಲಿಸಲು ಅವಕಾಶ ನೀಡಬಾರದು ಎಂದು ವಾದಿಸಿದ್ದರು.
ಇನ್ನುಳಿದವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಏಕಿಲ್ಲ?
ರಾಜ್ಯಪಾಲರು ಸಹಜ ನ್ಯಾಯ ಪ್ರಕ್ರಿಯೆಯನ್ನು ಪಾಲಿಸಿಲ್ಲ. ಪ್ರಕರಣ ಸಂಬಂಧ ಮೂರು ಮನವಿಗಳು ಬಂದಿವೆ. ಒಂದು ಮನವಿಗೆ ಸಂಬಂಧಿಸಿದಂತೆ ಸಿದ್ದರಾಮಯ್ಯನವರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಮತ್ತಿಬ್ಬರ ದೂರಿನ ಕುರಿತು ಶೋಕಾಸ್ ನೋಟಿಸ್ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಆದರೆ, ಯಾವುದೇ ದೂರಿಗೂ ಶೋಕಾಸ್ ನೋಟಿಸ್ ನೀಡಿಲ್ಲದಿದ್ದರೆ ಅಗತ್ಯವಿಲ್ಲವೆನ್ನಬಹುದಿತ್ತು. ಒಬ್ಬರ ದೂರಿಗೆ ನೀಡಿ, ಇಬ್ಬರ ದೂರಿಗೆ ಶೋಕಾಸ್ ನೋಟಿಸ್ ನೀಡಿಲ್ಲ. ಅಲ್ಲದೇ, ಮುಖ್ಯಮಂತ್ರಿಗಳನ್ನು ಹೊರತುಪಡಿಸಿ ಉಳಿದವರಿಗೆ ಪ್ರಾಸಿಕ್ಯೂಷನ್ ಅನುಮತಿ ನೀಡಿಲ್ಲ. ಶಶಿಕಲಾ ಜೊಲ್ಲೆ ಪ್ರಕರಣದಲ್ಲಿ ತಿರಸ್ಕರಿಸಲಾಗಿದೆ, ಮುರುಗೇಶ್ ನಿರಾಣಿ ಪ್ರಕರಣದಲ್ಲಿ ಸ್ಪಷ್ಟನೆ ಕೇಳಿ ಹಿಂತಿರುಗಿಸಲಾಗಿದೆ. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪ್ರಕರಣವನ್ನು ಹಿಂತಿರುಗಿಸಲಾಗಿದೆ ಎಂದು ಪೀಠಕ್ಕೆ ವಿವರಣೆ ನೀಡಿದ್ದರು.
ದೂರುದಾರರ ವಿರುದ್ಧ ವಿವಿಧ ಆರೋಪ: ದೂರುದಾರ ಟಿ.ಜೆ. ಅಬ್ರಹಾಂ ವಿರುದ್ಧ ಬ್ಲಾಕ್‌ಮೇಲ್, ಸುಲಿಗೆ, ಮಾನಹಾನಿ ಆರೋಪಗಳಿವೆ. ಸುಪ್ರೀಂಕೋರ್ಟ್ 25 ಲಕ್ಷ ರೂ. ದಂಡ ವಿಧಿಸಿದೆ. 50-50 ನಿವೇಶನ ಹಂಚಿಕೆ ಬಿಜೆಪಿ ಸರ್ಕಾರದ ಸಮಯದಲ್ಲಾಗಿದೆ. ಆದ್ದರಿಂದ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಯಾವುದೇ ಪಾತ್ರವಿಲ್ಲ. ರಾಜ್ಯಪಾಲರ ಅನುಮತಿ ಕಾನೂನು ಬಾಹಿರವಾಗಿದ್ದು, ಅನುಮತಿಯನ್ನು ರದ್ದುಪಡಿಸಬೇಕು ಎಂದು ಅಭಿಷೇಕ್ ಮನು ಸಿಂಘ್ವಿ ಕೋರಿದ್ದರು.
ರಾಜ್ಯಪಾಲರು ಮುಖ್ಯಮಂತ್ರಿಗಳ ನೀಡಿದ್ದ ಪ್ರತಿಕ್ರಿಯೆನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಇದೊಂದು ವಿವೇಚನಾ ರಹಿತ ಮತ್ತು ಆತುರದ ಹಾಗೂ ಅಸಾಂವಿಧಾನಿಕ ನಿರ್ಧಾರವಾಗಿದೆ. ಹೀಗಾಗಿ, ಈ ಆದೇಶವನ್ನು ಅಗತ್ಯ ದಾಖಲೆಗಳ ಪರಿಗಣಿಸದೆ ಹೊರಡಿಸಿದ್ದು, ರದ್ದು ಮಾಡಬೇಕು. ಅಲ್ಲದೆ, ಈ ಆದೇಶಕ್ಕೆ ಮಧ್ಯಂತರ ಪರಿಹಾರ ನೀಡದಿದ್ದಲ್ಲಿ ಅರ್ಜಿದಾರರ ಘನತೆಗೆ ಸರಿಪಡಿಸಲಾಗದ ಹಾನಿಯಾಗಲಿದೆ. ಜತೆಗೆ ಮುಖ್ಯಮಂತ್ರಿಗಳ ಕಚೇರಿಯ ಕಾರ್ಯನಿರ್ವಹಣೆಗೂ ತೊಡಕಾಗಲಿದೆ. ಹೀಗಾಗಿ ರಾಜ್ಯಪಾಲರ ಆದೇಶವನ್ನು ಕಾರ್ಯರೂಪಕ್ಕೆ ತರುವುದಕ್ಕೆ ತಡೆ ನೀಡಬೇಕು ಎಂದು ಸಿಎಂ ಪರ ವಕೀಲರು ಮಧ್ಯಂತರ ಪರಿಹಾರ ಕೋರಿದ್ದರು.
ರಾಜ್ಯಪಾಲರ ಕ್ರಮ ಸಮರ್ಥಿಸಿಕೊಂಡಿದ್ದ ಸಾಲಿಸಿಟರ್ ಜನರಲ್:ರಾಜ್ಯಪಾಲರ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಯಾವುದೇ ಆರೋಪ ಸಂಬಂಧ ಅನುಮತಿ ಬಂದ ಬಳಿಕ ಅದರ ಕುರಿತಂತೆ ಮೇಲ್ನೋಟಕ್ಕೆ ಸತ್ಯ ಎಂಬುದಾಗಿ ಗೊತ್ತಾದ ನಂತರ ತಹಶೀಲ್ದಾರ್ ಇಲ್ಲವೇ, ರಾಜ್ಯಪಾಲರು ಸಹ ಅನುಮತಿ ನೀಡಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ರಾಜಕೀಯ ಉದ್ದೇಶ ಎಂಬುದು ಸುಳ್ಳು, ಪ್ರಕರಣ ಸಂಬಂಧ ಟಿ. ಜೆ. ಅಬ್ರಾಹಂ ಅವರು ದಾಖಲೆಗಳ ಮೂಲಕ ರಾಜ್ಯಪಾಲರಿಗೆ ಅನುಮತಿ ಕೇಳಿ ಮನವಿ ಮಾಡಿದ್ದರು. ಅದೇ ಆರೋಪ ಸಂಬಂಧ ಇನ್ನಿಬ್ಬರು ಮನವಿ ಮಾಡಿದ್ದಾರೆ. ಹೀಗಾಗಿ, ಅಬ್ರಾಹಂ ಅವರ ಅರ್ಜಿ ಸಂಬಂಧ ಸಿಎಂಗೆ ಶೋಕಾಸ್ ನೋಟಿಸ್ ಜಾರಿ ಮಾಡಿ ಪ್ರತಿಕ್ರಿಯೆ ಕೇಳಲಾಗಿದೆ. ರಾಜ್ಯಪಾಲರು ವಿವೇಚನೆ ಬಳಸಿಯೇ ಅನುಮತಿ ನೀಡಿದ್ದಾರೆ. ಈ ಪ್ರಕರಣದಲ್ಲಿ ಅನುಮತಿ ಪಡೆಯುವ ಅಗತ್ಯವೇ ಇಲ್ಲ. ರಾಜ್ಯಪಾಲರು ಯಾವುದೇ ರೀತಿಯ ಆತುರದ ನಿರ್ಧಾರ ಕೈಗೊಂಡಿಲ್ಲ. ದಾಖಲೆಗಳನ್ನು ಪರಿಶೀಲಿಸಿಯೇ ಅನುಮತಿ ನೀಡಿದ್ದಾರೆ. ಹೀಗಾಗಿ, ರಾಜ್ಯಪಾಲರ ಕ್ರಮ ಸರಿ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು.
ಇದನ್ನೂ ಓದಿ:ಕ್ಷುಲ್ಲಕ ವಿಚಾರಗಳ ಬಗ್ಗೆ ಉತ್ತರ ಕೋರಿ ರಾಜ್ಯಪಾಲರ ಪತ್ರ : ಸಿಎಂ ಸಿದ್ದರಾಮಯ್ಯ ಅಸಮಾಧಾನ - CM Siddaramaiah