ಬೆಂಗಳೂರು: ಸಾರ್ವಜನಿಕ ಉದ್ದೇಶಗಳಿಗಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳುವಾಗ ರೈತರಿಗೆ ನೀಡುವ ಪರಿಹಾರಕ್ಕೆ ಆದಾಯ ತೆರಿಗೆಯ ಪಾವತಿಯಿಂದ ವಿನಾಯಿತಿ ನೀಡುವ ಕುರಿತ ಸಮಸ್ಯೆಯನ್ನು ಶೀಘ್ರವೇ ಪರಿಹರಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಈ ಕುರಿತಂತೆ ಏಕ ಸದಸ್ಯ ಪೀಠ 2023ರ ಏಪ್ರಿಲ್ 12 ರಂದು ಭೂಮಿ ಕಳೆದುಕೊಂಡವರ ಪರವಾಗಿ ನೀಡಿದ್ದ ತೀರ್ಪು ಪ್ರಶ್ನಿಸಿ ಆದಾಯ ತೆರಿಗೆ ಆಯುಕ್ತರು (ಟಿಡಿಎಸ್)ಸಲ್ಲಿಸಿದ ಮೇಲ್ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾಯಮೂರ್ತಿ ವಿಜಯಕುಮಾರ್ ಎ ಪಾಟೀಲ್ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.
ಅಲ್ಲದೇ, 2013ರ ಭೂ ಸ್ವಾಧೀನ ಕಾಯಿದೆಯ ಹೊರತಾಗಿ ಇತರ ಕಾನೂನುಗಳಡಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಾಗ ಅನೇಕ ರೈತರು ತಾವು ಪಡೆಯುವ ಪರಿಹಾರಕ್ಕೆ ಆದಾಯ ತೆರಿಗೆ ಪಾವತಿಸುವ ಬಗ್ಗೆ ಅತೃಪ್ತರಾಗಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರ ಈ ಅಂಶವನ್ನು ಪರಿಹರಿಸಲು ಮತ್ತು ಭೂಮಿ ಕಳೆದುಕೊಂಡ ರೈತರ ಕುಂದು ಕೊರತೆಗಳನ್ನು ಪರಿಹರಿಸಲು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಬೇಕು. 2013ರ ಕಾಯಿದೆಯ ಸೆಕ್ಷನ್ 96 ಭೂಮಿ ಕಳೆದುಕೊಳ್ಳುವ ಎಲ್ಲರಿಗೂ ಅನ್ವಯಿಸಬೇಕು ಎಂಬುದಾಗಿ ಪೀಠ ಆದೇಶಿಸಿದೆ.