ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ರಾಜ್ಯದ ಐವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕರ್ನಾಟಕ ಪ್ರತಿನಿಧಿಸುವ ನಿರ್ಮಲಾ ಸೀತಾರಾಮನ್ ಮತ್ತೆ ಹಣಕಾಸು ಸಚಿವೆಯಾಗಿದ್ದಾರೆ. ಇತ್ತ ಪ್ರಲ್ಹಾದ್ ಜೋಶಿ ಈ ಬಾರಿ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರ ಸಚಿವರಾಗಿ ಪ್ರಮುಖ ಖಾತೆಗಳನ್ನು ವಹಿಸಿಕೊಂಡಿದ್ದಾರೆ. ಈ ಇಬ್ಬರು ಹಿರಿಯ ಸಚಿವರಿಂದ ಕರ್ನಾಟಕ ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ.
ಮೋದಿ 3.O ಆರಂಭವಾಗಿದೆ. ಪ್ರಧಾನಿ ಮೋದಿ ನೂತನ ಕ್ಯಾಬಿನೆಟ್ನಲ್ಲಿ 71 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 24 ರಾಜ್ಯಗಳ 71 ಮಂದಿಗೆ ಸಚಿವ ಸ್ಥಾನ ನೀಡಲಾಗಿದೆ. ಈ ಪೈಕಿ ರಾಜ್ಯದಿಂದ ಕೇಂದ್ರ ಸಂಪುಟ ಸಚಿವರಾಗಿ ನಿರ್ಮಲಾ ಸೀತಾರಾಮನ್, ಪ್ರಲ್ಹಾದ್ ಜೋಶಿ, ಹೆಚ್.ಡಿ.ಕುಮಾರಸ್ವಾಮಿ, ರಾಜ್ಯ ಖಾತೆ ಸಚಿವರಾಗಿ ಶೋಭಾ ಕರಂದ್ಲಾಜೆ ಹಾಗೂ ವಿ.ಸೋಮಣ್ಣ ಮೋದಿ ನೂತನ ಕ್ಯಾಬಿನೆಟ್ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ನಿರ್ಮಲಾ ಸೀತಾರಾಮನ್ ಹಾಗೂ ಪ್ರಲ್ಹಾದ್ ಜೋಶಿ ಅವರಿಗೆ ಮಹತ್ವದ ಖಾತೆ ನೀಡಲಾಗಿದ್ದು, ನೂತನ ಸಚಿವರುಗಳ ಮೇಲೆ ಕರುನಾಡ ಜನರು ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ದೇಶದ ಜೊತೆಗೆ ಸಚಿವರುಗಳು ರಾಜ್ಯದ ಬೇಡಿಕೆಗಳನ್ನೂ ಈಡೇರಿಸುವ ನಿರೀಕ್ಷೆ ರಾಜ್ಯದ ಜನತೆಯದ್ದಾಗಿದೆ.
ನಿರ್ಮಲಾ ಸೀತಾರಾಮನ್ ಮೇಲಿನ ನಿರೀಕ್ಷೆ ಏನು?:ಕೇಂದ್ರ ಹಣಕಾಸು ಸಚಿವೆಯಾಗಿ ಮತ್ತೆ ನಿರ್ಮಲಾ ಸೀತಾರಾಮನ್ ಅವರಿಗೆ ಪ್ರಧಾನಿ ಮೋದಿ ಮಣೆ ಹಾಕಿದ್ದಾರೆ. ನೂತನವಾಗಿ ಅಧಿಕಾರ ಸ್ವೀಕರಿಸಿದ ನಿರ್ಮಲಾ ಸೀತಾರಾಮನ್ರಿಂದ ರಾಜ್ಯ ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಕಳೆದ ಬಾರಿಯೂ ಹಣಕಾಸು ಸಚಿವೆಯಾಗಿದ್ದಾಗ ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ಹೆಚ್ಚಿನದ್ದೇನು ಕೊಟ್ಟಿಲ್ಲ ಎಂಬ ಆಪಾದನೆಗೆ ಒಳಗಾಗಿದ್ದರು. ಈ ಬಾರಿ ಹೆಚ್ಚಿನ ಅನುದಾನವನ್ನು ಕರ್ನಾಟಕಕ್ಕೆ ನೀಡಬೇಕು ಎಂಬುದು ರಾಜ್ಯ ಸರ್ಕಾರದ ನಿರೀಕ್ಷೆಯಾಗಿದೆ.
ತೆರಿಗೆಯಲ್ಲಿನ ಅನ್ಯಾಯ ಸರಿಪಡಿಸಿ, ಕರ್ನಾಟಕಕ್ಕೆ ಹೆಚ್ಚಿನ ತೆರಿಗೆ ಹಂಚಿಕೆ ಮಾಡಬೇಕು ಎಂಬುದು ರಾಜ್ಯ ಸರ್ಕಾರದ ಪ್ರಮುಖ ನಿರೀಕ್ಷೆಯಾಗಿದೆ. ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಬೇಕು ಎಂಬುದನ್ನು ಕೇಂದ್ರ ಹಣಕಾಸು ಸಚಿವರಿಂದ ನಿರೀಕ್ಷಿಸಲಾಗುತ್ತಿದೆ. ವಿಶೇಷವಾಗಿ ಉದ್ದೇಶಿತ ಬೆಂಗಳೂರು ಸುರಂಗ ಮಾರ್ಗಕ್ಕೆ ಅನುದಾನದತ್ತ ರಾಜ್ಯ ಸರ್ಕಾರ ಕಣ್ಣಿಟ್ಟಿದೆ. 60 ಕಿ.ಮೀ. ಉದ್ದದ ಸುರಂಗ ಮಾರ್ಗಕ್ಕೆ ಒಟ್ಟು 30,000 ಕೋಟಿ ರೂ. ವೆಚ್ಚವಾಗಲಿದೆ. ಹೀಗಾಗಿ, ಕೇಂದ್ರ ಸರ್ಕಾರದಿಂದ ಈ ಯೋಜನೆಗೆ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದೆ ರಾಜ್ಯ ಸರ್ಕಾರ.
ಬೆಂಗಳೂರಲ್ಲಿ ಮಳೆಯಿಂದಾಗುವ ಅವಘಡ ತಪ್ಪಿಸಲು ರಾಜ್ಯ ಸರ್ಕಾರ ಯೋಜನೆಗಳನ್ನು ರೂಪಿಸಿದೆ. ಇದಕ್ಕಾಗಿ ಸುಮಾರು 3,000 ಕೋಟಿ ರೂ. ನೆರವಿಗಾಗಿ ವಿಶ್ವ ಬ್ಯಾಂಕ್ಗೆ ಮನವಿ ಸಲ್ಲಿಸಲಾಗಿದೆ. ಈ ಸಂಬಂಧದ ಪ್ರಸ್ತಾವನೆಯನ್ನು ಆರ್ಥಿಕ ವ್ಯವಹಾರಗಳ ಇಲಾಖೆಗೆ ಸಲ್ಲಿಸಲಾಗಿದ್ದು, ಬಹುಬೇಗ ಮಂಜೂರಾತಿ ನೀಡಬೇಕು ಎಂಬ ಬೇಡಿಕೆ ಹೊಂದಿದೆ. ರಾಜ್ಯದ ಪ್ರಮುಖ ಯೋಜನೆಗಳಿಗೆ ಹಣಕಾಸು ಇಲಾಖೆ ತ್ವರಿತವಾಗಿ ಮಂಜೂರಾತಿ ನೀಡಲಿ ಎಂಬ ನಿರೀಕ್ಷೆ ಇದೆ.
2023-24ರ ಕೇಂದ್ರ ಬಜೆಟ್ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗಾಗಿ 5,300 ಕೋಟಿ ರೂ. ಘೋಷಣೆ ಮಾಡಲಾಗಿದೆ. ಆದರೆ, ಅದನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಸೇರಿಸುವ ಪ್ರಕ್ರಿಯೆ ವಿಳಂಬವಾಗಿದ್ದು, ಕೇಂದ್ರದ ಆರ್ಥಿಕ ನೆರವು ಲಭ್ಯವಾಗದ ಕಾರಣ ಕಾಮಗಾರಿ ಪ್ರಗತಿ ವಿಳಂಬವಾಗಿದೆ. ಹೀಗಾಗಿ, ಕೂಡಲೇ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಘೋಷಿಸಿದ 5,300 ಕೋಟಿ ರೂ. ಆರ್ಥಿಕ ನೆರವು ಬಿಡುಗಡೆ ಮಾಡುವ ನಿರೀಕ್ಷೆ ರಾಜ್ಯ ಸರ್ಕಾರದ್ದಾಗಿದೆ.
ಜಿಎಸ್ಟಿ ದರ ಪರಿಷ್ಕರಣೆಯ ಬೇಡಿಕೆ:ಸಚಿವೆ ನಿರ್ಮಲಾ ಸೀತಾರಾಮನ್ ಜಿಎಸ್ಟಿ ದರ ಕಡಿಮೆ ಮಾಡುವ ನಿರೀಕ್ಷೆ ಹೊಂದಲಾಗಿದೆ. ಮುಖ್ಯವಾಗಿ 12%-18% ದರದಲ್ಲಿ ಪರಿಷ್ಕರಣೆ ಮಾಡಬೇಕು. ಇದರಿಂದ ಉದ್ಯಮಿಗಳು ಹಾಗೂ ಜನರಿಗೆ ಅನುಕೂಲವಾಗಲಿದೆ ಎಂದು ಕರ್ನಾಟಕ ರಾಜ್ಯ ಜಿಎಸ್ಟಿ ಸಲಹಾ ಸಮಿತಿ ಸದಸ್ಯ ಬಿ.ಟಿ.ಮನೋಹರ್ ತಿಳಿಸಿದ್ದಾರೆ. ಉಳಿದಂತೆ ಜಿಎಸ್ಟಿ ಅಹವಾಲು ವಿಚಾರಣೆಗಾಗಿ ಟ್ರಿಬ್ಯುನಲ್ ಅನ್ನು ಆದ್ಯತೆ ಮೇರೆಗೆ ಸ್ಥಾಪಿಸಬೇಕು. ಅದರಿಂದ ಡೀಲರ್ಗಳು ಜಿಎಸ್ಟಿ ತಕರಾರು ಹಾಗೂ ಅಹವಾಲನ್ನು ಶೀಘ್ರದಲ್ಲಿ ಬಗೆಹರಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ.
ಈ ಬಾರಿ ಕರ್ನಾಟಕಕ್ಕೆ ಹೆಚ್ಚಿನ ತೆರಿಗೆ ಪಾಲನ್ನು ಹಂಚಿಕೆ ಮಾಡುವಲ್ಲಿ ಹಾಗೂ ಎಂಎಸ್ಎಂಇಗೆ ಹೆಚ್ಚಿನ ಒತ್ತು ನೀಡಬೇಕು. ಗ್ರಾಮೀಣಾಭಿವೃದ್ಧಿ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಬಡತನ ನಿರ್ಮೂಲನೆಗೆ ಆದ್ಯತೆ ಹಾಗೂ ಪ್ರಮುಖವಾಗಿ 7 ಲಕ್ಷ ರೂ.ವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಬೇಕು. ಇದರಿಂದ ಜನರ ಖರೀದಿ ಸಾಮರ್ಥ್ಯ ಹೆಚ್ಚಾಗಲಿದೆ. ಜಿಎಸ್ಟಿಯಲ್ಲಿನ 12%, 18% ದರವನ್ನು ಕಡಿಮೆ ಮಾಡಬೇಕು ಎಂದು ಎಫ್ಕೆಸಿಸಿಐ ಮಾಜಿ ಅಧ್ಯಕ್ಷ ಜೆ.ಕ್ರಾಸ್ಟ್ ತಿಳಿಸಿದ್ದಾರೆ.
ಪ್ರಲ್ಹಾದ್ ಜೋಶಿ ಮೇಲೆ ರಾಜ್ಯದ ಅನ್ನಭಾಗ್ಯ ನಿರೀಕ್ಷೆ:ಪ್ರಲ್ಹಾದ್ ಜೋಶಿ ಆವರಿಗೆ ಈ ಬಾರಿ ಆಹಾರ ಮತ್ತು ಗ್ರಾಹಕ ವ್ಯವಹಾರ ಹಾಗೂ ನವೀಕರಿಸಬಹುದಾದ ಇಂಧನ ಖಾತೆ ನೀಡಲಾಗಿದೆ. ಪ್ರಮುಖವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಅನ್ನಭಾಗ್ಯಕ್ಕೆ ಅಕ್ಕಿ ಪೂರೈಕೆ ಮಾಡುವ ಮಹದಾಸೆ ರಾಜ್ಯ ಸರ್ಕಾರದ್ದಾಗಿದೆ. ಕಳೆದ ಕೇಂದ್ರ ಸರ್ಕಾರ ಯೋಜನೆಗೆ ಅಕ್ಕಿಯನ್ನು ಪೂರೈಸಿರಲಿಲ್ಲ. ಈ ಕುರಿತು ರಾಜ್ಯದ ಆಹಾರ ಖಾತೆ ಸಚಿವ ಮುನಿಯಪ್ಪ ಕೇಂದ್ರವನ್ನು ಸಂಪರ್ಕಿಸಿದರೂ ಪ್ರಯೋಜನವಾಗಿರಲಿಲ್ಲ. ಈಗ ರಾಜ್ಯದವರೇ ಆಹಾರ ಖಾತೆಯನ್ನು ವಹಿಸಿಕೊಳ್ಳುವುದರಿಂದ ಸಮಸ್ಯೆ ಬಗೆಹರಿಯಬಹುದು ಎಂಬ ನಿರೀಕ್ಷೆ ಇದೆ. ಇದರ ಜೊತೆಗೆ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ರಾಜ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ ಹೊಸ ಯೋಜನೆಗಳನ್ನು ರಾಜ್ಯದಲ್ಲಿ ಅನುಷ್ಠಾನ ಮಾಡುವ ನಿರೀಕ್ಷೆ ಹೊಂದಲಾಗಿದೆ.
ಇದನ್ನೂ ಓದಿ:ಮೋದಿ ಸಂಪುಟದಲ್ಲಿರುವ ಶೇ.66ರಷ್ಟು ಮಂತ್ರಿಗಳ ವಯಸ್ಸು 51 ರಿಂದ 70 ವರ್ಷ! - ADR Report