ಕರ್ನಾಟಕ

karnataka

ETV Bharat / state

ಸರ್ಕಾರಿ ಕಚೇರಿಗಳಲ್ಲಿ ಧೂಮಪಾನ, ತಂಬಾಕು ಉತ್ಪನ್ನ ಸೇವಿಸಿದರೆ ಶಿಸ್ತು ಕ್ರಮ: ಸರ್ಕಾರ ಆದೇಶ - BANS TOBACCO IN KARNATAKA

ಸಿಬ್ಬಂದಿಯ ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ಪರೋಕ್ಷ ಧೂಮಪಾನದಿಂದ ಸಾರ್ವಜನಿಕರನ್ನು ಮತ್ತು ಸರ್ಕಾರಿ ಸಿಬ್ಬಂದಿಯನ್ನು ರಕ್ಷಿಸುವ ಉದ್ದೇಶದಿಂದ ಸರ್ಕಾರಿ ಕಚೇರಿಗಳಲ್ಲಿ ಧೂಮಪಾನ, ತಂಬಾಕು ಉತ್ಪನ್ನ ಸೇವನೆಯನ್ನು ನಿರ್ಬಂಧಿಸಿ ಸರ್ಕಾರ ಆದೇಶ ಹೊರಡಿಸಿದೆ.

BANS TOBACCO IN KARNATAKA
ಸಾಂದರ್ಭಿಕ ಚಿತ್ರ (File)

By ETV Bharat Karnataka Team

Published : Nov 7, 2024, 5:32 PM IST

ಬೆಂಗಳೂರು: ಕೆಲಸದ ಅವಧಿಯಲ್ಲಿ ಸರ್ಕಾರಿ ಸಿಬ್ಬಂದಿ ಆಗಾಗ್ಗೆ ದಮ್​ ಹೊಡೆಯಲು ಹೊರ ಹೋಗುವುದು, ಗುಟ್ಕಾ ತಿನ್ನಲು ಅತ್ತಿತ್ತ ಅಲೆಯುವುದನ್ನು ಕಂಡಿರುತ್ತೀರಿ. ಹೀಗೆ ಸರ್ಕಾರಿ ಕಚೇರಿಗಳಲ್ಲಿ ಹಾಗೂ ಕಚೇರಿ ಆವರಣಗಳಲ್ಲಿ ಧೂಮಪಾನ ಇತರ ತಂಬಾಕು ಉತ್ಪನ್ನಗಳ ಸೇವನೆಯನ್ನು ನಿರ್ಬಂಧಿಸಿ ಸರ್ಕಾರ ಆದೇಶ ಹೊರಡಿಸಿದೆ.

ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ಈ ಸಂಬಂಧ ಆದೇಶ ಹೊರಡಿಸಿದೆ. ಯಾವುದೇ ಸರ್ಕಾರಿ ನೌಕರನು ಸರ್ಕಾರಿ ಕಚೇರಿಗಳಲ್ಲಿ ಹಾಗೂ ಕಚೇರಿ ಆವರಣದಲ್ಲಿ ಧೂಮಪಾನ ಸೇರಿದಂತೆ ಯಾವುದೇ ತಂಬಾಕು ಉತ್ಪನ್ನಗಳ ಸೇವನೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಸಂಬಂಧ ಎಚ್ಚರಿಕೆಯ ಫಲಕವನ್ನು ಕಚೇರಿಯ ಸೂಕ್ತ ಸ್ಥಳಗಳಲ್ಲಿ ಪ್ರದರ್ಶಿಸುವಂತೆ ಸೂಚಿಸಿದೆ.

ಧೂಮಪಾನ ಹಾಗೂ ತಂಬಾಕಿನ ಇತರೆ ಉತ್ಪನ್ನಗಳ ಸೇವನೆ ಆರೋಗ್ಯಕ್ಕೆ ಮಾರಕವಾಗಿದ್ದು, ಸಾರ್ವಜನಿಕ ಪ್ರದೇಶಗಳಲ್ಲಿ ಇಂತಹ ಉತ್ಪನ್ನಗಳ ಸೇವನೆಯನ್ನು THE CIGARETTES AND OTHER TOBACCO PRODUCTS (PROHIBITION OF ADVERTISEMENT AND REGULATION OF TRADE AND COMMERCE, PRODUCTION, SUPPLY AND DISTRIBUTION) ACT, 2003 (ಕೇಂದ್ರ ಅಧಿನಿಯಮ 34/2003)ರಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳು, 2021ರ ನಿಯಮ-31ರಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಮಾದಕ ಪಾನೀಯ ಅಥವಾ ಮಾದಕ ವಸ್ತುವನ್ನು ಸೇವಿಸುವುದನ್ನು ಕೂಡ ನಿಷೇಧಿಸಲಾಗಿದೆ. ಶಾಸನತ್ಮಾಕ ಎಚ್ಚರಿಕೆಗಳ ಹೊರತಾಗಿಯೂ ಸರ್ಕಾರಿ ಕಚೇರಿಗಳಲ್ಲಿ ಹಾಗೂ ಕಚೇರಿಯ ಆವರಣದಲ್ಲಿ ತಂಬಾಕು ಉತ್ಪನ್ನಗಳ ಸೇವನೆ ಆಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿಯ ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ಪರೋಕ್ಷ ಧೂಮಪಾನದಿಂದ ಸಾರ್ವಜನಿಕರನ್ನು ಹಾಗೂ ಸರ್ಕಾರಿ ಸಿಬ್ಬಂದಿಯನ್ನು ರಕ್ಷಿಸುವ ಉದ್ದೇಶದಿಂದ ಯಾವುದೇ ಸರ್ಕಾರಿ ನೌಕರನು ಸರ್ಕಾರಿ ಕಚೇರಿಗಳಲ್ಲಿ ಹಾಗೂ ಕಚೇರಿ ಆವರಣದಲ್ಲಿ ಧೂಮಪಾನ ಸೇರಿದಂತೆ ಯಾವುದೇ ತಂಬಾಕು ಉತ್ಪನ್ನಗಳ ಸೇವನೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಸಂಬಂಧ ಎಚ್ಚರಿಕೆಯ ಫಲಕವನ್ನು ಕಚೇರಿಯ ಸೂಕ್ತ ಸ್ಥಳಗಳಲ್ಲಿ ಪ್ರದರ್ಶಿಸತಕ್ಕದ್ದು ಎಂದು ಸೂಚಿಸಲಾಗಿದೆ.

ಈ ಸೂಚನೆಗಳನ್ನು ಉಲ್ಲಂಘಿಸಿ ಯಾವುದೇ ಸರ್ಕಾರಿ ನೌಕರ ಕಚೇರಿಯಲ್ಲಿ ಅಥವಾ ಕಚೇರಿಯ ಆವರಣದಲ್ಲಿ ಧೂಮಪಾನ ಮಾಡುವುದು ಮತ್ತು ಯಾವುದೇ ತಂಬಾಕು ಉತ್ಪನ್ನಗಳನ್ನು (ಗುಟ್ಕಾ, ಪಾನ್ ಮಸಾಲ, ಹೊಗೆಸೊಪ್ಪು ಇತ್ಯಾದಿ) ಸೇವಿಸುವುದು ಕಂಡುಬಂದಲ್ಲಿ ಅಂತಹ ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಖಡಕ್ ಸೂಚನೆ ನೀಡಲಾಗಿದೆ.

ಇದನ್ನೂ ಓದಿ:ವಿದ್ಯಾರ್ಥಿಯಾಗಿದ್ದಾಗ ಸಿಗರೇಟ್ ಸೇದುತ್ತಿದ್ದೆ, ಎಂಎಲ್​ಎ ಆದ್ಮೇಲೆ ಬಿಟ್ಟೆ: ಸಿಎಂ ಸಿದ್ದರಾಮಯ್ಯ

ABOUT THE AUTHOR

...view details