ಬೆಂಗಳೂರು:ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದ ಬರ ಪರಿಹಾರ ಹಣವನ್ನು ಬೆಳೆಹಾನಿಗಾಗಿ ರೈತರಿಗೆ ಪಾವತಿಸುವಂತೆ ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ಕೇಂದ್ರದಿಂದ ಬಿಡುಗಡೆಯಾದ ಪರಿಹಾರ ಹಣವನ್ನು ನಿಯಮಾನುಸಾರ ಅರ್ಹ ರೈತ ಫಲಾನುಭವಿಗಳಿಗೆ ಪಾವತಿಸಲು ರಾಜ್ಯ ಸರ್ಕಾರ ಸೂಚಿಸಿದೆ.
ಎನ್ಡಿಆರ್ಎಫ್/ಎಸ್ಡಿಆರ್ಎಫ್ ಮಾರ್ಗಸೂಚಿಗಳ ಪ್ರಕಾರ ಅರ್ಹತೆಯ ಅನುಸಾರ ಈಗಾಗಲೇ ಅರ್ಹ ರೈತರಿಗೆ ಗರಿಷ್ಠ 2,000 ರೂ.ವರೆಗೆ ಪರಿಹಾರ ನೀಡಲಾಗಿದೆ. ಪಾವತಿಸಿದ ಬೆಳೆಹಾನಿ ಪರಿಹಾರ ಮೊತ್ತವನ್ನು ಪರಿಗಣನೆಗೆ ತೆಗೆದುಕೊಂಡು, ಅರ್ಹತೆಯಂತೆ ಇನ್ನುಳಿದ ಬಾಕಿ ಬೆಳೆಹಾನಿ ಪರಿಹಾರ ಪಾವತಿಗೆ ಅನುದಾನ ಬಿಡುಗಡೆಗೊಳಿಸಲು ಆದೇಶಿಸಲಾಗಿದೆ.
ಕೇಂದ್ರ ಸರ್ಕಾರ ಕಳೆದ ವಾರ ಎನ್ಡಿಆರ್ಎಫ್ನಡಿ 3,454.22 ಕೋಟಿ ರೂ. ಬರ ಪರಿಹಾರ ಬಿಡಗಡೆಗೊಳಿಸಿತ್ತು. ಈ ಮೊತ್ತವನ್ನು ಬೆಳೆಹಾನಿ ಪರಿಹಾರ ಮೊತ್ತವಾಗಿ ರೈತರಿಗೆ ಪಾವತಿಸಲು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರಿಗೆ ಬಿಡುಗಡೆ ಮಾಡಲು ಆದೇಶಿಸಿದೆ. ರಾಜ್ಯ ಸರ್ಕಾರ ಇದಕ್ಕೂ ಮೊದಲು ಎಸ್ಡಿಆರ್ಎಫ್ ಅಡಿ ಬೆಳೆಹಾನಿ ಪರಿಹಾರದ ಮೊದಲನೇ ಕಂತಾಗಿ ಪ್ರತಿ ಅರ್ಹ ರೈತರಿಗೆ ಗರಿಷ್ಠ 2,000 ರೂ.ವರೆಗೆ, ಗರಿಷ್ಠ 2 ಹೆಕ್ಟೇರ್‌ಗೆ ಸೀಮಿತಗೊಳಿಸಿ ಪಾವತಿ ಮಾಡಿತ್ತು.