ಕರ್ನಾಟಕ

karnataka

ETV Bharat / state

ಯಲ್ಲಾಪುರ, ಸಿಂಧನೂರಿನ ಪ್ರತ್ಯೇಕ ಅಪಘಾತದಲ್ಲಿ 14 ಜನ ಸಾವು: ಸರ್ಕಾರದಿಂದ ತಲಾ ₹3 ಲಕ್ಷ ಪರಿಹಾರ - COMPENSATION FOR DECEASED FAMILY

ಯಲ್ಲಾಪುರ ಹಾಗೂ ಸಿಂಧನೂರಿನಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಮೃತಪಟ್ಟ 14 ಜನರ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ಪರಿಹಾರ ಘೋಷಿಸಲಾಗಿದೆ.

Accidents compensation
ಅಪಘಾತಕ್ಕೀಡಾದ ಲಾರಿ ಹಾಗೂ ಕ್ರೂಸರ್​ (ETV Bharat)

By ETV Bharat Karnataka Team

Published : Jan 22, 2025, 12:28 PM IST

ಬೆಂಗಳೂರು:ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ 14 ಜನರು ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಗಳಿಗೆ ರಾಜ್ಯ ಸರ್ಕಾರವು ತಲಾ 3 ಲಕ್ಷ ರೂ. ಪರಿಹಾರ ಘೋಷಿಸಿದೆ.

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಸಿಎಂ ಸಿದ್ದರಾಮಯ್ಯ, ''ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಮೃತಪಟ್ಟವರ ಕುಟುಂಬಗಳಿಗೆ ರಾಜ್ಯ ಸರ್ಕಾರದ ವತಿಯಿಂದ ತಲಾ 3 ಲಕ್ಷ ಪರಿಹಾರ ರೂ. ನೀಡಲಾಗುವುದು. ಜೊತೆಗೆ ಅಪಘಾತದಲ್ಲಿ ಗಾಯಗೊಂಡವರ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು'' ಎಂದಿದ್ದಾರೆ.

''ಎರಡು ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು 14 ಜನ ಸಾವನ್ನಪ್ಪಿರುವ ಸುದ್ದಿ ತಿಳಿದು ಸಂಕಟವಾಯಿತು. ಮೃತರ ಆತ್ಮಗಳಿಗೆ ಚಿರಶಾಂತಿ ಕೋರುತ್ತೇನೆ. ಅವಸರ, ಅತಿ ವೇಗದ ಚಾಲನೆ ಹಾಗೂ ಅಜಾಗರೂಕತೆ ಅಪಘಾತಕ್ಕೆ ಕಾರಣ. ಈ ದುರ್ಘಟನೆಗಳಲ್ಲಿ ತಮ್ಮವರನ್ನು ಕಳೆದುಕೊಂಡು ದುಃಖದಲ್ಲಿರುವ ನೊಂದ ಜನರಿಗೆ ನನ್ನ ಸಂತಾಪಗಳು. ಎಚ್ಚರಿಕೆಯಿಂದ ವಾಹನ ಚಲಾಯಿಸಿ, ಸುರಕ್ಷಿತರಾಗಿರಿ ಎಂದು ಮನವಿ ಮಾಡುತ್ತೇನೆ'' ಎಂದು ತಿಳಿಸಿದ್ದಾರೆ.

ಹೆಚ್​.ಡಿ.ಕುಮಾರಸ್ವಾಮಿ ಕಂಬನಿ : ''ರಾಜ್ಯದಲ್ಲಿ ಸಂಭವಿಸಿರುವ ಎರಡು ಭೀಕರ ಅಪಘಾತಗಳಲ್ಲಿ 14 ಜನ ಸಾವನ್ನಪ್ಪಿರುವ ವಾರ್ತೆ ಕೇಳಿ ನನಗೆ ತೀವ್ರ ಆಘಾತ ಉಂಟಾಗಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಬಳಿಯ ಅರಬೈಲ್ ಬಳಿ ಸಂಭವಿಸಿದ ಅಪಘಾತದಲ್ಲಿ 10 ಜನರು ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರು ಬಳಿ ರಸ್ತೆ ದುರಂತದಲ್ಲಿ ಮೂವರು ವಿದ್ಯಾರ್ಥಿಗಳು ಸೇರಿ ನಾಲ್ವರು ದುರ್ಮರಣಕ್ಕೆ ತುತ್ತಾಗಿರುವುದು ನನಗೆ ಅತೀವ ನೋವುಂಟು ಮಾಡಿದೆ'' ಎಂದು ಕೇಂದ್ರ ಸಚಿವ ಹೆಚ್​.ಡಿ. ಕುಮಾರಸ್ವಾಮಿ ಎಕ್ಸ್​​ನಲ್ಲಿ ಬರೆದುಕೊಂಡಿದ್ದಾರೆ.

''ಮೃತರ ಆತ್ಮಗಳಿಗೆ ಚಿರಶಾಂತಿ ಸಿಗಲಿ, ದುಃಖತಪ್ತ ಕುಟುಂಬಗಳಿಗೆ ತಮ್ಮವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಅಸಮರ್ಪಕ ರಸ್ತೆ ಮೂಲಸೌಕರ್ಯ, ವಾಹನಗಳ ಆತುರದ ಚಾಲನೆ, ನಿದ್ದೆಗಣ್ಣಿನಲ್ಲಿ ವಾಹನ ಚಾಲನೆ, ಸಂಚಾರ ನಿಯಮಗಳ ಉಲ್ಲಂಘನೆ ಇತ್ಯಾದಿ ಕಾರಣಗಳು ಅಪಘಾತಗಳಿಗೆ ಕಾರಣವಾಗುತ್ತಿವೆ. ಈ ಬಗ್ಗೆ ಅಧಿಕಾರಿಗಳು ಹೆಚ್ಚು ಗಮನ ಕೊಟ್ಟು ಅಮೂಲ್ಯ ಜೀವಗಳ ಹರಣ ತಪ್ಪಿಸಬೇಕು'' ಎಂದು ಹೆಚ್​​ಡಿಕೆ ತಿಳಿಸಿದ್ದಾರೆ.

ಬಸವರಾಜ ಬೊಮ್ಮಾಯಿ ಸಂತಾಪ :''ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಅರಬೈಲ್ ಬಳಿ ನಡೆದ ಲಾರಿ ಅಪಘಾತದಲ್ಲಿ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಹತ್ತು ಜನರು ದುರಂತ ಸಾವಿಗೀಡಾದ ಸುದ್ದಿ ಮನಸ್ಸಿಗೆ ನೋವುಂಟು ಮಾಡಿದೆ. ಈ ಘಟನೆಯಲ್ಲಿ ಇನ್ನೂ ಕೆಲವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ರಾಜ್ಯ ಸರ್ಕಾರವು ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು, ಹಾಗೂ ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಆಗ್ರಹಿಸುತ್ತೇನೆ. ಮೃತರ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಸ್ಥರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ'' ಎಂದು ಸಂಸದ ಬಸವರಾಜ ಬೊಮ್ಮಾಯಿ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ:ಯಲ್ಲಾಪುರ ಬಳಿ ಉರುಳಿ ಬಿದ್ದ ಲಾರಿ : ಹಣ್ಣು, ತರಕಾರಿ ಸಾಗಿಸುತ್ತಿದ್ದ 10 ಮಂದಿ ಸಾವು

ಘಟನೆಗಳ ವಿವರ :ಹಣ್ಣು, ತರಕಾರಿ ತುಂಬಿಕೊಂಡು ವ್ಯಾಪಾರಸ್ಥರೊಂದಿಗೆ ಸಂತೆಗೆ ತೆರಳುತ್ತಿದ್ದ ಲಾರಿಯೊಂದು ಕಂದಕಕ್ಕೆ ಉರುಳಿ ಬಿದ್ದು 10 ಮಂದಿ ಸಾವನ್ನಪ್ಪಿರುವ ಘಟನೆ ಯಲ್ಲಾಪುರದ ಅರಬೈಲ್ ಘಟ್ಟದ ಕಾಗೇರಿ ಪೆಟ್ರೋಲ್ ಬಂಕ್ ಬಳಿ ಬುಧವಾರ ಮುಂಜಾನೆ ಸಂಭವಿಸಿತ್ತು. ಮೃತರೆಲ್ಲರೂ ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದವರು. ಸವಣೂರಿನಿಂದ ಕುಮಟಾದ ಸಂತೆಗೆ ತೆರಳುತ್ತಿದ್ದ ಲಾರಿಯಲ್ಲಿ ಸುಮಾರು 40ಕ್ಕೂ ಹೆಚ್ಚು ವ್ಯಾಪಾರಸ್ಥರು ತರಕಾರಿಗಳನ್ನು ತುಂಬಿಕೊಂಡು ತೆರಳುತ್ತಿದ್ದರು. ಘಟನೆಯಲ್ಲಿ 15 ಮಂದಿ ಗಾಯಗೊಂಡಿದ್ದಾರೆ.

ಇನ್ನೊಂದೆಡೆ, ಆಂಧ್ರ ಪ್ರದೇಶದ ಮಂತ್ರಾಲಯ ಸಂಸ್ಕೃತ ವಿದ್ಯಾಪೀಠದ ವಾಹನ ಪಲ್ಟಿಯಾಗಿ ಮೂವರು ವಿದ್ಯಾರ್ಥಿಗಳು ಹಾಗೂ ಚಾಲಕ ಸಾವನ್ನಪ್ಪಿರುವ ಘಟನೆ ಸಿಂಧನೂರು ಹೊರವಲಯದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. 14 ಜನ ಪ್ರಯಾಣಿಸುತ್ತಿದ್ದ ಕ್ರೂಸರ್ ವಾಹನದ ಆಕ್ಸಲ್ ಕಟ್ ಆಗಿ ಪಲ್ಟಿಯಾಗಿದೆ. ಮಂತ್ರಾಲಯದಿಂದ ಕೊಪ್ಪಳದ ಆನೆಗುಂದಿಯ ನರಹರಿ ತೀರ್ಥರ ವೃಂದಾವನಕ್ಕೆ ತೆರಳುವಾಗ ಈ ಅಪಘಾತ ಸಂಭವಿಸಿದೆ.

ಇದನ್ನೂ ಓದಿ:ಭೀಕರ ಅಪಘಾತ; ಮಂತ್ರಾಲಯ ಸಂಸ್ಕೃತ ವಿದ್ಯಾಪೀಠದ ಮೂವರು ವಿದ್ಯಾರ್ಥಿಗಳು ಸೇರಿ ನಾಲ್ವರು ಸಾವು

ABOUT THE AUTHOR

...view details