ಶಿವಮೊಗ್ಗ:ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯು ಶಿವಮೊಗ್ಗ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ಕುಮಾರ್ ಬೆಂಬಲಕ್ಕೆ ನಿಂತಿದೆ. ಮಂಡಳಿಯು ಎರಡು ದಿನಗಳ ಕಾಲ ಗೀತಾ ಶಿವರಾಜ್ಕುಮಾರ್ ಅವರ ಪರ ಪ್ರಚಾರ ನಡೆಸಲು ಬಂದಿದೆ. ಇಲ್ಲಿ ಪಕ್ಷಾತೀತವಾಗಿ ನಾವೆಲ್ಲ ಬಂದಿದ್ದೇವೆ ಎಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ಎನ್.ಸುರೇಶ್ ಹೇಳಿದರು.
ಶಿವಮೊಗ್ಗದಲ್ಲಿ ಈ ಬಗ್ಗೆ 'ಈಟಿವಿ ಭಾರತ'ದ ಜೊತೆ ಮಾತನಾಡಿದ ಎಂ.ಎನ್.ಸುರೇಶ್, ''ನಾನು ಶಿವಮೊಗ್ಗದಲ್ಲಿಯೇ ಹುಟ್ಟಿ ಬೆಳೆದು, ಓದಿ, ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಹೋಗಿದ್ದೆ. ನಾನು ಬಂಗಾರಪ್ಪನವರ ಕಟ್ಟಾ ಅಭಿಮಾನಿ. ಅವರು ಬಡವರು, ವಿದ್ಯಾರ್ಥಿಗಳು, ಹಿಂದುಳಿದವರಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಬಂಗಾರಪ್ಪನವರ ಕೊಡುಗೆ ಈಗಲೂ ಜನಮನದಲ್ಲಿದೆ. ಗೀತಾ ಶಿವರಾಜ್ಕುಮಾರ್ ಅವರು ದೊಡ್ಮನೆ ಸೊಸೆಯಾಗಿದ್ದು, ನಟ ಶಿವರಾಜ್ಕುಮಾರ್ ಅವರ ಮಡದಿ. ಅವರ ಕುಟುಂಬವು ಕನ್ನಡ ಚಿತ್ರರಂಗಕ್ಕೆ ಕೊಟ್ಟಂತಹ ಕೊಡುಗೆ, ಬಂಗಾರಪ್ಪನವರು ರಾಜಕೀಯಕ್ಕೆ ನೀಡಿದ ಕೊಡುಗೆ ಎಲ್ಲರಿಗೂ ನೆನಪಿದೆ. ಹೀಗಾಗಿ, ಚಿತ್ರರಂಗದಿಂದ ನಾವೆಲ್ಲ ಪಕ್ಷಾತೀತವಾಗಿ ಬಂದಿದ್ದೇವೆ'' ಎಂದರು.
ಸ್ವಯಂಪ್ರೇರಿತ ಬೆಂಬಲ:''ಲೋಕಸಭೆ ಚುನಾವಣೆಯಲ್ಲಿ ಬದಲಾವಣೆ ಬೇಕಾಗಿದೆ. ರಾಜಕೀಯದಲ್ಲಿ ಯಾರೂ ಮಿತ್ರರು ಅಲ್ಲ, ಶತ್ರುಗಳೂ ಅಲ್ಲ. ಗೀತಾ ಶಿವರಾಜ್ಕುಮಾರ್ ಅವರಿಗೆ ನಾವೆಲ್ಲಾ ಸ್ವಯಂಪ್ರೇರಿತವಾಗಿ ಬಂದು ಸಪೋರ್ಟ್ ಮಾಡುತ್ತಿದ್ದೇವೆ. ಈಗಾಗಲೇ ಅನೇಕ ನಟ, ನಟಿಯರು ಬಂದಿದ್ದಾರೆ. ಇನ್ನೂ ಬರುತ್ತಾರೆ. ಗೀತಾ ಅವರಿಗೆ ಒಂದು ಅವಕಾಶ ಕೊಡಿ, ಆಗ ಒಬ್ಬ ಮನುಷ್ಯ ಏನ್ ಮಾಡ್ತಾರೆ ಅಂತ ಗೊತ್ತಾಗುತ್ತದೆ. ಅವರು ಕೂಡ ಶಿವಮೊಗ್ಗದಲ್ಲಿಯೇ ಹುಟ್ಟಿ ಬೆಳೆದವರು, ಅಂತವರಿಗೆ ಒಂದು ಅವಕಾಶ ಕೊಡಿ'' ಎಂದು ವಿನಂತಿಸಿಕೊಂಡರು.