ನಟ ದರ್ಶನ್ ಹಾಗೂ ಇತರರಿಂದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣ ಸಂಬಂಧ ತನಿಖೆ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘದ ನಿಯೋಗ ಚಿತ್ರದುರ್ಗದತ್ತ ಪಯಣ ಬೆಳೆಸಿದ್ದು, ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ.
ಫಿಲಂ ಚೇಂಬರ್ ಅಧ್ಯಕ್ಷ ಎನ್.ಎಂ. ಸುರೇಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಮಾಜಿ ಅಧ್ಯಕ್ಷರುಗಳಾದ ಚಿನ್ನೇಗೌಡ, ಸಾರಾ ಗೋವಿಂದು, ಕೆ.ವಿ. ಚಂದ್ರಶೇಖರ್ ಸೇರಿದಂತೆ ಹಲವರು ಚಿತ್ರದುರ್ಗಕ್ಕೆ ತೆರಳಿದ್ದಾರೆ. ರೇಣುಕಾಸ್ವಾಮಿ ಮನೆಯವರಿಗೆ ಧೈರ್ಯ ತುಂಬುವ ಕಾರ್ಯಕ್ಕೆ ಮುಂದಾಗಿದ್ದಾರೆ. ಜೊತೆಗೆ, ಫಿಲಂ ಚೇಂಬರ್ ಕಡೆಯಿಂದ 3ರಿಂದ 5 ಲಕ್ಷ ರೂಪಾಯಿ ಹಣ ಸಹಾಯ ಮಾಡುವ ಸಾಧ್ಯತೆ ಇದೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್, ಅವರ ಗೆಳತಿ ಪವಿತ್ರಾ ಗೌಡ ಸೇರಿದಂತೆ 18 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ದರ್ಶನ್ ಅವರನ್ನು ಕೋರ್ಟ್ಗೆ ಹಾಜರುಪಡಿಸಿ ಜೂನ್ 17ರವರೆಗೆ ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೂ ಪಡೆಯಲಾಗಿದೆ. ಪೊಲೀಸರು ಆರೋಪಿಗಳ ಮಹಜರು ಕಾರ್ಯ ನಡೆಸಿ ತನಿಖೆ ನಡೆಸುತ್ತಿದ್ದಾರೆ.