ಕೇಂದ್ರದ ಅನುದಾನ ತಾರತಮ್ಯದಿಂದ ರಾಜ್ಯಕ್ಕೆ 1,87,867 ಕೋಟಿ ರೂ. ನಷ್ಟವಾಗಿದೆ: ಸಿಎಂ ಸಿದ್ದರಾಮಯ್ಯ ಬೆಂಗಳೂರು: 14ನೇ ಹಣಕಾಸು ಆಯೋಗದಿಂದ 15ನೇ ಹಣಕಾಸು ಆಯೋಗದವರೆಗೆ ತೆರಿಗೆ ಹಂಚಿಕೆ ಅನ್ಯಾಯದಿಂದ ರಾಜ್ಯಕ್ಕೆ ಒಟ್ಟು 1,87,867 ಕೋಟಿ ರೂ. ನಷ್ಟವಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಜೊತೆ ಜಂಟಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯಕ್ಕೆ ಆಗಿರುವ ಅನುದಾನ ಅನ್ಯಾಯದ ವಿರುದ್ಧ ಫೆ.7ರಂದು ದೆಹಲಿಯ ಜಂತರ್ ಮಂಥರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಇದು ಬಿಜೆಪಿ ವಿರುದ್ಧದ ಪ್ರತಿಭಟನೆ ಅಲ್ಲ. ಕೇಂದ್ರ ಸರ್ಕಾರದ, ದೇಶದ ಜನರ ಗಮನ ಸೆಳೆಯಲು ಪ್ರತಿಭಟನೆ ಮಾಡುತ್ತಿದ್ದೇವೆ. ಅನಿವಾರ್ಯ ಕಾರಣದಿಂದ ಪ್ರತಿಭಟನೆ ಮಾಡುತ್ತಿದ್ದೇವೆ. ಇದು ರಾಜಕೀಯ ಪ್ರತಿಭಟನೆ ಅಲ್ಲ. ಕೇಂದ್ರದ ಮಲತಾಯಿ ಧೋರಣೆ, ತಾರತಮ್ಯ ವಿರುದ್ಧದ ಪ್ರತಿಭಟನೆಯಾಗಿದ್ದು, ರಾಜ್ಯದ ಎಲ್ಲ ಸಚಿವರು, ಕಾಂಗ್ರೆಸ್ ಶಾಸಕರು ಭಾಗವಹಿಸುತ್ತಿದ್ದಾರೆ ಎಂದರು.
ಇಲ್ಲಿವರೆಗೆ 15 ಹಣಕಾಸು ಆಯೋಗ ಆಗಿದೆ. 14ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ 42% ತೆರಿಗೆ ಹಂಚಿಕೆ ಮಾಡಿದ್ದರು. 15ನೇ ಹಣಕಾಸು ಆಯೋಗದಲ್ಲಿ ಅದು 41% ಗೆ ಇಳಿಯಿತು. 14ನೇ ಹಣಕಾಸು ಆಯೋಗದಲ್ಲಿ ಇದ್ದ 4.71% ತೆರಿಗೆ ಪಾಲು 15ನೇ ಹಣಕಾಸು ಆಯೋಗದಲ್ಲಿ ಅದು 3.64% ಗೆ ಇಳಿಕೆ ಆಗಿದೆ. ಅಂದರೆ ರಾಜ್ಯಕ್ಕೆ 1.7% ಕಡಿತವಾಗಿದೆ. ರಾಜ್ಯಕ್ಕೆ ನಾಲ್ಕು ವರ್ಷದಲ್ಲಿ 45 ಸಾವಿರ ಕೋಟಿ ರೂ. ತೆರಿಗೆ ಪಾಲು ಕಡಿಮೆಯಾಗಿದೆ. ಐದು ವರ್ಷದಲ್ಲಿ ಒಟ್ಟು 62 ಸಾವಿರದ 98 ಕೋಟಿ ತೆರಿಗೆ ಪಾಲು ಕಡಿಮೆಯಾಗಿದೆ ಎಂದು ಕಿಡಿಕಾರಿದರು.
ತೆರಿಗೆ ಪಾಲು ಕಡಿಮೆಯಾಗಿರುವುದನ್ನು ಗಮನಿಸಿ 15ನೇ ಹಣಕಾಸು ಆಯೋಗ ಮಧ್ಯಂತರ ವರದಿಯಲ್ಲಿ ರಾಜ್ಯಕ್ಕೆ 5,495 ಕೋಟಿ ರೂ. ವಿಶೇಷ ಅನುದಾನ ನೀಡಲು ಶಿಫಾರಸು ಮಾಡಲಾಗಿತ್ತು. ನಮ್ಮ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆ ಆಗಿರುವ ಹಣಕಾಸು ಸಚಿವರು ಇದನ್ನು ತಿರಸ್ಕಾರ ಮಾಡಿದರು. 15ನೇ ಹಣಕಾಸು ಆಯೋಗದ ಅಂತಿಮ ವರದಿಯಲ್ಲಿ 3000 ಕೋಟಿ ರೂ. ಫೆರಿಪರೆಲ್ ರಿಂಗ್ ರಸ್ತೆ, ಜಲಮೂಲಗಳ ಅಭಿವೃದ್ಧಿಗೆ 3000 ಕೋಟಿ ರೂ. ಸೇರಿ ಒಟ್ಟು ಆರು ಸಾವಿರ ಕೋಟಿಗಳನ್ನು ಕೊಡುವಂತೆ ಶಿಫಾರಸು ಮಾಡಿದ್ದರು. ಎರಡೂ ಸೇರಿ 11,495 ಕೋಟಿ ರೂ. ರಾಜ್ಯಕ್ಕೆ ಶಿಫಾರಸು ಮಾಡಲಾಗಿತ್ತು. ತೆರಿಗೆ ಪಾಲು 62000 ಕೋಟಿ ರೂ. ಜೊತೆಗೆ 11,495 ಕೋಟಿ ರೂ. ರಾಜ್ಯಕ್ಕೆ ನಷ್ಟವಾಗಿದೆ. ಆ ಮೂಲಕ 73,593 ಕೋಟಿ ರೂ. ನಮಗೆ ಕಡಿಮೆಯಾಗಿದೆ ಎಂದು ಸಿಎಂ ಅಂಕಿ- ಅಂಶ ನೀಡಿದರು.
ಕೇಂದ್ರದ ಅನುದಾನ ತಾರತಮ್ಯದಿಂದ ರಾಜ್ಯಕ್ಕೆ 1,87,867 ಕೋಟಿ ರೂ. ನಷ್ಟವಾಗಿದೆ: ಸಿಎಂ ಸಿದ್ದರಾಮಯ್ಯ ಜಿಎಸ್ಟಿ ಜಾರಿಗೆ ಬಂದಾಗ 15% ನಮ್ಮ ತೆರಿಗೆ ಸಂಗ್ರಹ ವೃದ್ಧಿ ಇತ್ತು. ಜಿಎಸ್ಟಿ ಬಂದ ಬಳಿಕ ಒಂದು ವೇಳೆ ನಷ್ಟ ಆದರೆ ಅದನ್ನು ತುಂಬಿ ಕೊಡುತ್ತೇವೆ ಎಂದು ಕೇಂದ್ರ ಹೇಳಿತ್ತು. ಜೂನ್ 2022ಕ್ಕೆ ಜಿಎಸ್ಟಿ ಪರಿಹಾರ ಸ್ಥಗಿತವಾಯಿತು. ಈಗ ಪರಿಹಾರ ಕೊಡ್ತಾ ಇಲ್ಲ. ನಮಗೆ ಹಿಂದಿನ ತೆರಿಗೆ ವೃದ್ಧಿ 15% ತಲುಪಲು ಸಾಧ್ಯವಾಗಿಲ್ಲ. ಅದಕ್ಕಾಗಿ ಜಿಎಸ್ಟಿ ನಷ್ಟ ಪರಿಹಾರ ಮುಂದುವರಿಸಿ ಎಂದು ಮನವಿ ಮಾಡಿದ್ದೆವು. ಆದರೆ ಅದು ಆಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕರ್ನಾಟಕದಿಂದ ಸುಮಾರು 4,30,000 ಕೋಟಿ ರೂ. ತೆರಿಗೆ ವಸೂಲಿಯಾಗುತ್ತದೆ. ಮಹಾರಾಷ್ಟ್ರ ಬಳಿಕ ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಎರಡನೇ ಅತಿ ದೊಡ್ಡ ರಾಜ್ಯವಾಗಿದೆ. 2023-24 ಸಾಲಿನಲ್ಲಿ ಈ ವರ್ಷ ನಮಗೆ ತೆರಿಗೆ ಪಾಲಿನ ರೂಪದಲ್ಲಿ 37,252 ಕೋಟಿ ರೂ. ಬರಲಿದೆ. ಕೇಂದ್ರ ಪುರಸ್ಕೃತ ಯೋಜನೆಗೆ 13,005 ಕೋಟಿ ರೂ. ಬರಬೇಕಿದೆ. ಎರಡೂ ಸೇರಿ ಈ ವರ್ಷ ಒಟ್ಟು 50,257 ಕೋಟಿ ರೂ. ಬರುತ್ತಿದೆ. ಅಂದರೆ ರಾಜ್ಯದಿಂದ ಸಂಗ್ರಹವಾಗುವ 4,30,000 ಕೋಟಿ ರೂ. ತೆರಿಗೆಯಲ್ಲಿ ಕೇವಲ 50,257 ಕೋಟಿ ರೂ. ಮಾತ್ರ ಕೊಡಲಾಗುತ್ತದೆ. ಅಂದರೆ 100 ರೂ.ನಲ್ಲಿ ನಮಗೆ 12-13 ರೂ. ಮಾತ್ರ ಸಿಗುತ್ತಿದೆ ಎಂದರು.
2018-19ರಲ್ಲಿ ಕೇಂದ್ರ ಬಜೆಟ್ ಗಾತ್ರ 24,42,213 ಕೋಟಿ ಇತ್ತು. ಆಗ ತೆರಿಗೆ ಪಾಲು 35,895 ಕೋಟಿ ಮತ್ತು ಕೇಂದ್ರ ಪುರಸ್ಕೃತ ಯೋಜನೆಯಡಿ 16,082 ಕೋಟಿ ಅನುದಾನ ಸಿಗುತ್ತಿತ್ತು. 2023-24 ಸಾಲಿನಲ್ಲಿ ಕೇಂದ್ರದ ಬಜೆಟ್ ಗಾತ್ರ 45,03,097 ಕೋಟಿ ಇದೆ. ನಮಗೆ 50,257 ಕೋಟಿ ಮಾತ್ರ ಅನುದಾನ ಸಿಗಲಿದೆ. 2017-18ರಲ್ಲಿ 2.2% ಇದ್ದ ತೆರಿಗೆ ಪಾಲು ಹಾಗೂ ಅನುದಾನ 2023-24 ಸಾಲಿನಲ್ಲಿ 1.23% ಗೆ ಇಳಿಕೆಯಾಗಿದೆ. ಸೆಸ್ ಮತ್ತು ಸರ್ಚಾರ್ಜ್ ಪ್ರತಿ ವರ್ಷ ಹೆಚ್ಚು ಮಾಡುತ್ತಿದ್ದಾರೆ. ಇದರಲ್ಲಿ ರಾಜ್ಯಗಳಿಗೆ ಪಾಲು ಕೊಡಲ್ಲ. ಅದನ್ನು ಕೇಂದ್ರ ಸರ್ಕಾರವೇ ಇಟ್ಟುಕೊಳ್ಳುತ್ತದೆ ಎಂದು ತಿಳಿಸಿದರು.
14ನೇ ಹಣಕಾಸು ಆಯೋಗದಿಂದ 15ನೇ ಹಣಕಾಸು ಆಯೋಗದ ವರೆಗೆ ರಾಜ್ಯಕ್ಕೆ ಸುಮಾರು 1,87,000 ಕೋಟಿ ರೂ. ನಷ್ಟ ಆಗಿದೆ. ಭದ್ರಾ ಮೇಲ್ದಂಡೆಗೆ 5,300 ಕೋಟಿ ಕೊಡುತ್ತೇವೆ ಎಂದು ಕೇಂದ್ರ ಬಜೆಟ್ನಲ್ಲಿ ಘೋಷಣೆ ಮಾಡಿದ್ದರು. ಆದರೆ ಈವರೆಗೆ ಒಂದು ರೂಪಾಯಿ ಕೊಟ್ಟಿಲ್ಲ. ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರದ ಪರಿಸರ ಇಲಾಖೆ ಈವರೆಗೆ ಅನುಮತಿ ಕೊಟ್ಟಿಲ್ಲ. ಅಧಿಸೂಚನೆ ಆದರೂ ಪರಿಸರ ಇಲಾಖೆ ಅನುಮತಿ ಕೊಟ್ಟಿಲ್ಲ. ಹಾಗಾಗಿ ಅದರ ಜಾರಿ ಸಾಧ್ಯವಾಗಿಲ್ಲ. ಮೇಕೆದಾಟು ಯೋಜನೆಗೆ ಇಂದಿನವರೆಗೆ ಅನುಮತಿ ಕೊಟ್ಟಿಲ್ಲ. ರಾಜ್ಯದಲ್ಲಿ ಬರಗಾಲ ಬಂದಿದೆ. 223 ತಾಲೂಕುಗಳಲ್ಲಿ ಬರ ಇದೆ. ಸೆಪ್ಟೆಂಬರ್ನಲ್ಲಿ ಕೇಂದ್ರ ತಂಡ ಬಂದು ಪರಿಶೀಲನೆ ನಡೆಸಿ, ಕೇಂದ್ರಕ್ಕೆ ವರದಿ ನೀಡಿದ್ದಾರೆ. ಆದರೆ ಬರ ಪರಿಹಾರ ಸಂಬಂಧ ಅಮಿತ್ ಶಾ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯ ಸಭೆ ನಡೆಸಿಲ್ಲ. ಬೆಂಗಳೂರಿಗೆ ಪ್ರಧಾನಿ ಬಂದಿದ್ದಾಗಲೂ ಅವರ ಮುಂದೆ ಬರ ಪರಿಹಾರ ಬಗ್ಗೆ ಪ್ರಸ್ತಾಪಿಸಿದ್ದೆ. ಬರದಿಂದ ಸುಮಾರು 17,901 ಕೋಟಿ ರೂ. ಪರಿಹಾರ ಕೇಳಿದ್ದೇವೆ. ಎನ್ಡಿಆರ್ಎಪ್ನಿಂದ ಒಂದೂ ರೂಪಾಯಿ ಹಣ ಬಿಡುಗಡೆ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಚಿನ್ನ ಇಡುವ ಕೋಳಿಯನ್ನೇ ಕುಯ್ದರೆ ಹೇಗೆ?:ಹಿಂದೆ ಪ್ರವಾಹ ಬಂದಾಗಲೂ ಹಣ ಕೊಟ್ಟಿರಲಿಲ್ಲ. ಯಡಿಯೂರಪ್ಪ ಗೋಗರೆದರೂ ಪರಿಹಾರ ಕೊಟ್ಟಿರಲಿಲ್ಲ. ಅವರಿಗೆ ಜೋರಾಗಿ ಮಾತನಾಡಲು ಬಾಯಿಯೇ ಇಲ್ಲ. ಬೊಮ್ಮಾಯಿ ಆಗ ಮಾತನಾಡಿಲ್ಲ. ಜನಸಂಖ್ಯೆ, ವಿಸ್ತೀರ್ಣ, ತಲಾ ಆದಾಯ, ಅರಣ್ಯಪ್ರದೇಶ, ತೆರಿಗೆ ಮತ್ತು ಹಣಕಾಸಿನ ಪರಿಸ್ಥಿತಿ ಹಾಗೂ ಸಮುದಾಯದ ಅಭಿವೃದ್ಧಿ ಆಧಾರದಲ್ಲಿ ಅನುದಾನ ಹಂಚಿಕೆ ಮಾಡುತ್ತಾರೆ. ಜನಸಂಖ್ಯೆಯಲ್ಲಿ ಜನ ನಿಯಂತ್ರಣ ಮಾಡಿಲ್ಲ. ದಕ್ಷಿಣ ಭಾರತದಲ್ಲಿ ಜನಸಂಖ್ಯೆ ನಿಯಂತ್ರಣ ಮಾಡಿದ್ದೇವೆ. ಚಿನ್ನದ ಮೊಟ್ಟೆ ಕೊಡುತ್ತೆ ಎಂದು ಕೋಳಿಯನ್ನೇ ಕುಯ್ದು ಬಿಡುವ ಪರಿಸ್ಥಿತಿ ಆಗಿದೆ. ಹಾಗೇ ಆಗಬಾರದು. ಪತ್ರ ಬರೆದರೂ ಉತ್ತರ ಕೊಡಲ್ಲ ಅಂದರೆ ಒಕ್ಕೂಟ ವ್ಯವಸ್ಥೆಯ ಲಕ್ಷಣನಾ?. ರಾಜ್ಯ ಸಚಿವರಿಗೆ ಕೇಂದ್ರ ಸಚಿವರ ಭೇಟಿಗೆ ಅವಕಾಶ ಕೊಡಲ್ಲಾ ಅಂದರೆ ಹೇಗೆ? ಇದು ಬಿಜೆಪಿ vs ಕಾಂಗ್ರೆಸ್ ಅಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಆಗುತ್ತಿರುವ ಅನ್ಯಾಯ ಸರಿಪಡಿಸುವುದು, ದೇಶದ ಗಮನ ಹರಿಸಲು ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಪ್ರಹ್ಲಾದ್ ಜೋಷಿ, ಖೂಬಾ, ಶೋಭಾ ಕರಂದ್ಲಾಜೆ ಕೇಂದ್ರ ಸಚಿವರಾಗಿದ್ದಾರೆ ಆದರೆ ಬಾಯಿ ಬಿಡುತ್ತಿಲ್ಲ. 25 ಬಿಜೆಪಿ ಸಂಸದರು ಒಂದು ದಿನವಾದರೂ ಇದರ ಬಗ್ಗೆ ಮಾತನಾಡಿಲ್ಲ. ಹಣಕಾಸು ಸಚಿವೆ ನಮ್ಮ ರಾಜ್ಯದವರೇ ಆಗಿದ್ದಾರೆ. ಆದರೆ ಅವರೇ ಅನ್ಯಾಯ ಮಾಡಿದರೆ ಏನು ಮಾಡುವುದು?. ಎಲ್ಲ ಸಂಸದರು ಮತ್ತು ಕೇಂದ್ರ ಬಿಜೆಪಿ ಸಚಿವರು ಈ ಪ್ರತಿಭಟನೆಗೆ ಬರಲಿ ಎಂದು ಕರೆ ಕೊಡುತ್ತಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಬಿಜೆಪಿಯವರು ಅಲ್ಲಿ ಮಾತನಾಡಲಿ. ಆದರೆ ಇಲ್ಲಿ ಸುಳ್ಳು ಹೇಳುತ್ತಿದ್ದಾರೆ ಎಂದು ಸಿಎಂ ವಾಗ್ದಾಳಿ ನಡೆಸಿದರು.
ಶ್ವೇತಪತ್ರ ಬಿಡುಗಡೆಗೆ ಚಿಂತನೆ: ರಾಜ್ಯದ ಹಣಕಾಸು ಸ್ಥಿತಿಗತಿ ಬಗ್ಗೆ ಶ್ವೇತಪತ್ರ ಬಿಡುಗಡೆ ಮಾಡುವಂತೆ ಪ್ರತಿಪಕ್ಷಗಳು ಆಗ್ರಹಿಸುತ್ತಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಸದನದಲ್ಲಿ ರಾಜ್ಯದ ಹಣಕಾಸು ಸ್ಥತಿಗತಿ ಸಂಬಂಧ ಶ್ವೇತಪತ್ರ ಹೊರಡಿಸಲು ಗಂಭೀರವಾಗಿ ಯೋಚಿಸುತ್ತಿದ್ದೇವೆ ಎಂದರು.
ಇದನ್ನೂ ಓದಿ: ನನ್ನ ತೆರಿಗೆ ನನ್ನ ಹಕ್ಕು ಅಭಿಯಾನಕ್ಕೆ ಸಿಎಂ ಬೆಂಬಲ; ಕನ್ನಡಿಗರ ತೆರಿಗೆ ಹಣ ಉತ್ತರ ರಾಜ್ಯಗಳ ಪಾಲು: ಸಿದ್ದರಾಮಯ್ಯ