ಕರ್ನಾಟಕ

karnataka

ETV Bharat / state

ಸರ್ಕಾರಿ ನೌಕರರ ವರ್ಗಾವಣೆ ಮಾರ್ಗಸೂಚಿಗೆ ಸಂಪುಟ ಘಟನೋತ್ತರ ಅನುಮೋದನೆ: ಇತರ ನಿರ್ಣಯಗಳೇನು? - Cabinet Meeting - CABINET MEETING

ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಸಚಿವ ಸಂಪುಟ ಸಭೆ ನಡೆಯಿತು. ಸರ್ಕಾರಿ ನೌಕರರ ವರ್ಗಾವಣೆ ಮಾರ್ಗಸೂಚಿಗಳಿಗೆ ಘಟನೋತ್ತರ ಅನುಮೋದನೆ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಮುಂಬಡ್ತಿಗೆ ಸೇವಾವಧಿ ಕಡಿತ ಸೇರಿದಂತೆ ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.

Vidhana Soudha
ವಿಧಾನಸೌಧ (IANS)

By ETV Bharat Karnataka Team

Published : Jul 4, 2024, 8:08 PM IST

ಬೆಂಗಳೂರು: ಸರ್ಕಾರಿ ನೌಕರರ ವರ್ಗಾವಣೆಯ ಮಾರ್ಗಸೂಚಿಗಳಿಗೆ ರಾಜ್ಯ ಸಚಿವ ಸಂಪುಟ ಸಭೆ ಘಟನೋತ್ತರ ಅನುಮೋದನೆ ನೀಡಿದೆ. ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ನಡೆದ ಸಂಪುಟ ಸಭೆ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ವೃಂದದ ಮುಂಬಡ್ತಿಗೆ ನಿಗದಿಪಡಿಸಿರುವ ಕನಿಷ್ಠ ಅರ್ಹತಾ ಸೇವಾವಧಿಯನ್ನು 5 ವರ್ಷಗಳಿಂದ 3 ವರ್ಷಗಳಿಗೆ ಇಳಿಸಲು (1 ಬಾರಿ) ಕರ್ನಾಟಕ ಅರಣ್ಯ ಇಲಾಖೆಯ ಸೇವೆಗಳು (ನೇಮಕಾತಿ) (ತಿದ್ದುಪಡಿ) ನಿಯಮಗಳು‌-2024ಕ್ಕೆ ಅನುಮೋದನೆ‌ ನೀಡಲಾಗಿದ್ದು, ತಕ್ಷಣದಲ್ಲೇ ಅರ್ಹರಿಗೆ ಮುಂಬಡ್ತಿ ಕೊಡಲಾಗುತ್ತದೆ. ಇದೇ ವೇಳೆ, ಕಾನೂನು ಮತ್ತು ನೀತಿಗೆ (ಹೊಸ ಕಾನೂನು ನೀತಿ) ಅನುಮೋದನೆ ನೀಡಲಾಗಿದೆ. ಕರ್ನಾಟಕ ಕಾರ್ಬನ್ ಫ್ರೇಂ ವರ್ಕ್ ಅನುಷ್ಠಾನಕ್ಕೆ NABCOMS ಜೊತೆಗೆ ಒಪ್ಪಂದಕ್ಕೆ ರಾಜ್ಯ ಸರ್ಕಾರ ಸಮ್ಮತಿ ಇದೆ ಎಂದು ತಿಳಿಸಿದರು.

ನಮ್ಮ ಕ್ಲಿನಿಕ್​ಗಳಿಗೆ ಉಪಕರಣ: ಮೀನುಗಾರಿಕೆ ಇಲಾಖೆಯ ಒಳನಾಡು ಕೆರೆ/ ಜಲಾಶಯಗಳ ಮೀನು ಗುತ್ತಿಗೆ ಅವಧಿಯನ್ನು 2023-24ನೇ ಸಾಲಿಗೆ ನವೀಕರಿಸಿಕೊಂಡಿರುವ ಗುತ್ತಿಗೆದಾರರು, ಟೆಂಡರ್​ದಾರರುಗಳಿಗೆ ಪಾವತಿ ಸಹಿತವಾಗಿ ಒಂದು ವರ್ಷ ಗುತ್ತಿಗೆ ಅವಧಿ ವಿಸ್ತರಣೆಗೆ ಒಪ್ಪಿಗೆ ಕೊಡಲಾಗಿದೆ. 563 ನಗರ ಆರೋಗ್ಯ ಕ್ಷೇಮ ಕೇಂದ್ರಗಳಿಗೆ (ನಮ್ಮ ಕ್ಲಿನಿಕ್‌) ಪ್ರಯೋಗಾಲಯಗಳನ್ನು ಬಲಪಡಿಸಲು ಅವಶ್ಯವಿರುವ ಔಷಧಿಗಳು, ಉಪಕರಣಗಳು ಹಾಗೂ ಉಪಭೋಗ್ಯಗಳನ್ನು 53.66 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

100 ಹಾಸಿಗೆಗಳ ಸಾಮರ್ಥ್ಯದ 07 ತಾಲೂಕು ಆಸ್ಪತ್ರೆಗಳ (ಅನೇಕಲ್, ಹೊಸಕೋಟೆ, ಖಾನಾಪುರ, ನೆಲಮಂಗಲ, ಶಿರಹಟ್ಟಿ, ಶೃಂಗೇರಿ, ಯಳಂದೂರು ತಾಲೂಕುಗಳು) ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು 256.15 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ ಎಂದು ಸಚಿವರು ವಿವರಿಸಿದರು.

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು 15ನೇ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ (ಎನ್​ಹೆಚ್​ಎಂ ಅಡಿ) ಮೇಲ್ದರ್ಜೆ ಗೇರಿಸಿ ಅಗತ್ಯ ಉಪಕರಣಗಳು ಮತು ಮಾನವ ಸಂಪನ್ಮೂಲಗಳನ್ನು ಒದಗಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಖಾಲಿಯಿರುವ 3 ಉಪ ನಿಬಂಧಕರು (ವಿಚಾರಣೆ) ಮತ್ತು 3 ಸಹಾಯಕ ನಿಬಂಧಕರು (ಕಾನೂನು ಸಲಹೆ) ಹುದ್ದೆಗಳಿಗೆ ನಿವೃತ್ತ ನ್ಯಾಯಾಂಗ ಅಧಿಕಾರಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲು ಒಪ್ಪಿಗೆ ದೊರೆತಿದೆ ಎಂದು ಮಾಹಿತಿ ನೀಡಿದರು

ಇತರ ನಿರ್ಣಯಗಳು:

  • ಕರ್ನಾಟಕ ಸರ್ಕಾರ ಸಚಿವಾಲಯ ಸೇವೆಗಳು (ನೇಮಕಾತಿ) (ತಿದ್ದುಪಡಿ) ನಿಯಮಗಳು-2024 ಹಾಗೂ ಕರ್ನಾಟಕ ಸಾಮಾನ್ಯ (ಸರ್ಕಾರಿ ಅತಿಥ್ಯ ಸಂಸ್ಥೆ ನೇಮಕಾತಿ) (ತಿದ್ದುಪಡಿ) ನಿಯಮಗಳು-2024ಕ್ಕೆ ಅನುಮೋದನೆ.
  • ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಕಟ್ಟಡ ಮೇಲ್ದರ್ಜೆಗೇರಿಸುವ ಕಾಮಗಾರಿ, ಹೆಚ್ಚುವರಿ ಕಟ್ಟಡದ ನಿರ್ಮಾಣ ಕಾಮಗಾರಿ 30 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
  • ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಳಕಲ್​ನಲ್ಲಿ ಸರ್ಕಾರಿ ಇಂಜಿనిಯರಿಂಗ್ ಕಾಲೇಜಿನ ಕಟ್ಟಡ ನಿರ್ಮಾಣ ಕಾಮಗಾರಿಯ ಪರಿಷ್ಕೃತ ಅಂದಾಜು 59.32 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ.
  • ಚಿಕ್ಕಮಗಳೂರು ಜಿಲೆಯ ತಾಲೂಕಿನ ಮಾವಿನಕೆರೆ ಮೂಡಿಗೆರೆ ಗ್ರಾಮದ ಸ.ನಂ. 434ರಲ್ಲಿ 20 ಗುಂಟೆ ಜಮೀನನ್ನು ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಮಾಜಿ ಸೇವಾ ಸಂಘ, ಕಳಸ ಇವರಿಗೆ ಮಂಜೂರು ಮಾಡಲು ಒಪ್ಪಿಗೆ.
  • ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹೇರೂರು ಗ್ರಾಮದ ಸ.ನಂ.105ರಲ್ಲಿ 5-00 ಎಕರೆ ಜಮೀನನ್ನು ಬಸ್ ಘಟಕ ನಿರ್ಮಾಣಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಉಚಿತವಾಗಿ ಮಂಜೂರು ಮಾಡಲು ಒಪ್ಪಿಗೆ.
  • ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 840 ಬಿ.ಎಸ್-6 ಡೀಸೆಲ್ ಬಸ್​ಗಳನ್ನು ಒಟ್ಟು 363.82 ಕೋಟಿ ರೂ.ಗಳ ವೆಚ್ಚದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ.
  • ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಗ್ರಾಮದ ಸ.ನಂ. 59/1ರಲ್ಲಿ 14 ಸೆಂಟ್ ಜಮೀನನ್ನು ಬ್ರಹಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘಕ್ಕೆ ಮಂಜೂರು ಮಾಡಲು ಅನುಮೋದನೆ.
  • ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘಕ್ಕೆ ಬೆಂಗಳೂರಿನ ಇನ್‌ಫೆಂಟ್ರಿ ರಸ್ತೆಯಲ್ಲಿ ನೀಡಿರುವ 120x150 ಅಡಿ ನಿವೇಶನದ ಗುತ್ತಿಗೆ ಅವಧಿಯನ್ನು 30.07.2023ರಿಂದ 30 ವರ್ಷಗಳ ಅವಧಿಗೆ ಮುಂದುವರಿಸಲು ಒಪ್ಪಿಗೆ ನೀಡಲಾಗಿದೆ.
  • ದಾವಣಗೆರೆ ಉಪ್ಪಾರ ಸಂಘಕ್ಕೆ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ದಾವಣಗೆರೆ ತಾಲೂಕಿನ ನಿಟ್ಟುವಳಿ ಗ್ರಾಮದಲ್ಲಿ ಹಂಚಿಕೆಯಾಗಿರುವ 573.57 ಚ.ಮೀ ವಿಸ್ತೀರ್ಣವುಳ್ಳ ನಾಗರಿಕ ಸೌಲಭ್ಯ ನಿವೇಶನದ ಗುತ್ತಿಗೆ ಮೊತ್ತವನ್ನು ಶೈಕ್ಷಣಿಕ ಹಾಗೂ ಮಹಿಳಾ ವಿದ್ಯಾರ್ಥಿನಿಲಯದ ಉದ್ದೇಶಕ್ಕಾಗಿ ಕಡಿಮೆ ಮಾಡಲು ಅನುಮೋದನೆ ದೊರೆತಿದೆ.
  • ವಿ.ಎಸ್. ಪಾಟೀಲ ಅವರಿಗೆ ಜಿ ಪ್ರವರ್ಗದಡಿ ಸರ್ ಎಂ. ವಿಶ್ವೇಶ್ವರಯ್ಯ 2ನೇ ಬ್ಲಾಕ್ ಬಡಾವಣೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಹಂಚಿಕೆ ಮಾಡಿರುವ 15x24 ಮೀ. ಅಳತೆಯ ನಿವೇಶನ ಸಂಖ್ಯೆ 1568ಕ್ಕೆ ವಿಶೇಷ ಪ್ರಕರಣವೆಂದು ಪರಿಗಣಿಸೆ ನಿಯಮಗಳನ್ನು ಸಡಿಲಿಸಿ, ಶುದ್ಧ ಕ್ರಯ ಪತ್ರವನ್ನು ನೋಂದಾಯಿಸಿಕೊಡುವ ಬಗ್ಗೆ ಹಾಗೂ ಮನೋಹರ ಐನಾಪೂರ, ಮಾಜಿ ಶಾಸಕರು, ಇವರಿಗೆ ಜಿ ಪ್ರವರ್ಗದಡಿ ಸರ್ ಎಂ. ವಿಶ್ವೇಶ್ವರಯ್ಯ ಬಡಾವಣೆ 8ನೇ ಬ್ಲಾಕ್‌ನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಹಂಚಿಕೆ ಮಾಡಿರುವ 15x24 ಮೀ. ಅಳತೆಯ ನಿವೇಶನ ಸಂಖ್ಯೆ 1312ಕ್ಕೆ ನಿಯಮಗಳನ್ನು ಸಡಿಲಿಸಿ, ವಿಳಂಬ ಮನ್ನಾ ಮಾಡಿ, ಬಡ್ಡಿ ಮೌಲ್ಯವನ್ನು ಪಾವತಿಸಿಕೊಂಡು ವಿಶೇಷ ಪ್ರಕರಣವೆಂದು ಪರಿಗಣಿಸಿ, ಶುದ್ಧ ಕ್ರಯಪತ್ರವನ್ನು ನೋಂದಾಯಿಸಿಕೊಡುವ ಬಗ್ಗೆ ಸಂಪುಟ ಒಪ್ಪಿಗೆ ದೊರೆತಿದೆ.

ABOUT THE AUTHOR

...view details