ಕರ್ನಾಟಕ

karnataka

ETV Bharat / state

ಸ್ವಾಭಿಮಾನಕ್ಕೆ ಧಕ್ಕೆಯಾದ್ದರಿಂದ ಪಾರ್ಟಿ ತೊರೆದಿದ್ದೇನೆ: ಸಂಗಣ್ಣ ಕರಡಿ - Sanganna Karadi - SANGANNA KARADI

ಟಿಕೆಟ್ ಕೈತಪ್ಪಿದಕ್ಕಲ್ಲ, ಸ್ವಾಭಿಮಾನಕ್ಕೆ ಧಕ್ಕೆಯಾದ್ದರಿಂದ ಪಾರ್ಟಿ ತೊರೆದಿದ್ದೇನೆಂದು ಸಂಗಣ್ಣ ಕರಡಿ ಸ್ಪಷ್ಟನೆ ನೀಡಿದ್ದಾರೆ.

ಸಂಗಣ್ಣ ಕರಡಿ
ಸಂಗಣ್ಣ ಕರಡಿ

By ETV Bharat Karnataka Team

Published : Apr 18, 2024, 2:28 PM IST

ಸಂಗಣ್ಣ ಕರಡಿ

ಕೊಪ್ಪಳ:ಪಕ್ಷ ಬಿಡಲು ಟಿಕೆಟ್ ಸಿಗದಿರುವುದು ಕಾರಣವಲ್ಲ. ನನ್ನ ಸ್ವಾಭಿಮಾನಕ್ಕೆ ದಕ್ಕೆಯಾಗಿರುವುದರಿಂದ ಬಿಜೆಪಿ ಪಕ್ಷ ತೊರೆದಿದ್ದೇನೆ ಎಂದು ಸಂಗಣ್ಣ ಕರಡಿ ಹೇಳಿದ್ದಾರೆ.

ಕೊಪ್ಪಳದ ತಮ್ಮ ನಿವಾಸದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ವೇಳೆ 'ಪೂಜಾರಿ ಪಕ್ಷ ಬಿಟ್ಟಿದ್ದಾನೆ, ದೇವರು ಎಲ್ಲಿಯೂ ಹೋಗಿಲ್ಲ' ಎಂಬ ಸಿ.ಟಿ.ರವಿ ಹೇಳಿಕೆಗೆ ಉತ್ತರಿಸಿದ ಅವರು, "ಯೋಜನೆಗಳೇ ಜಾರಿಯಾಗೋದಾದರೇ ಅಭ್ಯರ್ಥಿಯನ್ನು ಯಾಕೆ ನಿಲ್ಲಿಸಬೇಕಿತ್ತು ಎಂದು ತಿರುಗೇಟು ನೀಡಿದರು.

"2018ರ ಚುನಾವಣೆಯಲ್ಲಿ ಸಿ.ವಿ. ಚಂದ್ರಶೇಖರ ಅವರಿಗೆ ಟಿಕೆಟ್ ಘೋಷಣೆ ಮಾಡಿದಾಗ ನಮ್ಮ ಅಭಿಪ್ರಾಯ ಕೇಳಲಿಲ್ಲ. 2023ರ ಚುನಾವಣೆಯಲ್ಲಿ ನನ್ನ ಹೊರತುಪಡಿಸಿ ಕುಟುಂಬದ ಯಾವ ಸದಸ್ಯರು ಸ್ಪರ್ಧೆ ಮಾಡಬಾರದು ಎಂದು ನಿರ್ಧಾರ ಮಾಡಿದ್ದೆ. ಆದರೆ, ಮಹಿಳಾ ಕೂಟದಲ್ಲಿ ಸೊಸೆಗೆ ಶೋಭಾ ಕರಂದ್ಲಾಜೆ ಅವರು ಟಿಕೆಟ್ ನೀಡುತ್ತೇವೆ ಎಂದು ಹೇಳಿದರು. ಆಗ ನಮಗೆ ಸ್ಪರ್ಧೆ ಮಾಡಬೇಕೆಂಬ ಯಾವ ಉದ್ದೇಶ ಇರಲಿಲ್ಲ. ಪಂಚಮಸಾಲಿ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂಬ ಉದ್ದೇಶದಿಂದ ಸೊಸೆ ಮಂಜುಳಾ ಕರಡಿಗೆ ಟಿಕೆಟ್​ ನೀಡಿದರು. ಆದರೆ, ಬಿಜೆಪಿಯಲ್ಲಿನ ಕೆಲ ಮುಖಂಡರು ನಮ್ಮ‌ಮೇಲೆ ಆರೋಪ ಮಾಡುವ ಮೂಲಕ ಎರಡು ಚುನಾವಣೆಯಲ್ಲಿ ನಮ್ಮನ್ನು ವಿಲನ್ ಮಾಡಿದರು. ಇದಕ್ಕೆ ಮೊದಲು ಸಿ.ಟಿ.ರವಿ ಉತ್ತರ ಕೊಡಲಿ" ಎಂದು ಸವಾಲು ಹಾಕಿದರು.

ಮುಂದುವರೆದು, "ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್​ ಅವರ ನೇತೃತ್ವದಲ್ಲಿ ಬುಧವಾರ ಬೆಂಗಳೂರಿನಲ್ಲಿ ಯಾವುದೇ ಷರತ್ತು ಇಲ್ಲದೇ ಕಾಂಗ್ರೆಸ್​ ಸೇರಿದ್ದೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆ, ಟಿಪ್ಪಣಿ ಸಾಮಾನ್ಯ. ಎಲ್ಲವನ್ನೂ ಸ್ವೀಕರಿಸುವೆ. ಟಿಕೆಟ್ ಸಿಗೋದು, ಸಿಗದೇ ಇರುವುದು ಮುಖ್ಯವಲ್ಲ. ಕುಟುಂಬದಲ್ಲಿ ಸೌಜನ್ಯತೆ ಇಲ್ಲ. ಪಕ್ಷ ಸಂಘಟನೆ, ಅಭಿವೃದ್ಧಿ ಹೇಗೆ ಮಾಡಬೇಕೆಂಬ ಚರ್ಚೆ ಮಾಡದೇ ಇರುವುದು ನೋವುಂಟು ಮಾಡಿದೆ. ಸ್ವಾಭಿಮಾನಕ್ಕೆ ಧಕ್ಕೆಯಾದರಿಂದ ಪಾರ್ಟಿ ತೊರೆದಿದ್ದೇನೆ. ಟಿಕೆಟ್ ಕೈತಪ್ಪಿದಕ್ಕಲ್ಲ" ಎಂದು ಸ್ಪಷ್ಟಪಡಿಸಿದರು.

ಹಾಗೇ "ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ನೂರಕ್ಕೆ ನೂರು ಗೆಲುವು ಸಾಧಿಸುವ ವಿಶ್ವಾಸವಿದೆ. ಸಿಂಗಟಾಲೂರು ಏತ ನೀರಾವರಿ, ರಾಯಚೂರುವರೆಗೆ ರೇಲ್ವೆ ವಿಸ್ತರಣೆ ಮತ್ತು ವಿಮಾನ ನಿಲ್ದಾಣ ಸೇರಿದಂತೆ ಅನೇಕ ಯೋಜನೆ ಕಾರ್ಯಗತಗೊಳಿಸುವ ಉದ್ದೇಶ ನಮ್ಮದಾಗಿದ್ದು, ಬರುವ ದಿನಗಳಲ್ಲಿ ಎಲ್ಲರೂ ಒಗ್ಗೂಡಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇವೆ" ಎಂದರು‌.

ಕಾರ್ಯಕರ್ತರ ವನವಾಸ ಮುಗಿದಿದೆ ಎಂಬ ಸಿ.ವಿ. ಚಂದ್ರಶೇಖರ್ ಹೇಳಿಕೆಗೆ ಉತ್ತರಿಸಿದ ಸಂಗಣ್ಣ , "ಚಂದ್ರಶೇಖರ್ ಅವರಿಗೆ ಒಳ್ಳೆದಾಗಲಿ. ಕಾರ್ಯಕರ್ತರಿಗೂ ಅವಕಾಶ ಸಿಗಲಿ. ಎರಡು ಬಾರಿ ಸಂಸದ ಮತ್ತು ಶಾಸಕರಾದರೂ ನನಗೆ ದುರಾದೃಷ್ಟ ಮಂತ್ರಿ ಸ್ಥಾನ ಸಿಗಲಿಲ್ಲ. ಅವಾಗ ನಾನು ಯಾಕೆ ಸಚಿವ ಸ್ಥಾನ ನೀಡಲ್ಲ ಎಂದು ಟೀಕೆ ಮಾಡಬಹುದಿತ್ತು. 1978 ರಲ್ಲೇ ಮಾಜಿ ಸಂಸದ ಎಚ್.ಜಿ. ರಾಮುಲು ಮತ್ತು ಖಾದರಿಯವರು ನನಗೆ ಕಾಂಗ್ರೆಸ್​ನಲ್ಲಿ ಟಿಕೆಟ್ ನೀಡಿದರು. ಅಂದೇ ಕಾಂಗ್ರೆಸ್ ಪಕ್ಷದಲ್ಲಿದ್ದೆ ಎಂದು ಕಾಂಗ್ರೆಸ್ ಸೇರ್ಪಡೆ ಕುರಿತು ಸಮರ್ಥಿಸಿಕೊಂಡರು.

ಇದನ್ನೂ ಓದಿ:'ಕಾಂಗ್ರೆಸ್ ಸೇರ್ಪಡೆಯಾಗಲು ಲಕ್ಷ್ಮಣ್ ಸವದಿ ಕಾರಣ' : 'ಕೈ' ಹಿಡಿದ ಕರಡಿ ಸಂಗಣ್ಣ - Karadi Sanganna Joins Congress

ABOUT THE AUTHOR

...view details