ಹಾವೇರಿ: ಕಳೆದ ವರ್ಷದ ಮಳೆ ಇಲ್ಲದೆ ಬರಡಾಗಿದ್ದ ಹಳ್ಳಕೊಳ್ಳಗಳು, ನದಿ, ಕೆರೆಗಳಿಗೆ ಈ ವರ್ಷದ ಮುಂಗಾರು ಮಳೆಯಿಂದ ಜೀವಕಳೆ ಬಂದಿದೆ. ಜಲಮೂಲಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ರೈತರ ಬೆಳೆಗಳು ಹಚ್ಚಹಸುರಿನಿಂದ ಕಂಗೊಳಿಸುತ್ತಿವೆ.
ಹೌದು, ಈ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯಲ್ಲಿ ವರದಾ, ಕುಮದ್ವತಿ, ಧರ್ಮಾ, ತುಂಗಭದ್ರಾ ನದಿಗಳು ಮೈದುಂಬಿ ಹರಿಯುತ್ತಿವೆ. ನಾಲ್ಕು ನದಿಗಳು ಹರಿಯುವ ಸ್ಥಳಗಳಲ್ಲಿ ಚಿಕ್ಕ ಚಿಕ್ಕ ಜಲಪಾತಗಳು ಸೃಷ್ಟಿಯಾಗಿದ್ದು, ಎಲ್ಲರ ಗಮನ ಸೆಳೆಯುತ್ತಿವೆ. ಹಾನಗಲ್ ತಾಲೂಕಿನ ಕಂಚಿನೆಗಳೂರು ಗ್ರಾಮದಲ್ಲಿನ ಧರ್ಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಒಡ್ಡಿನಲ್ಲಿ ಚಿಕ್ಕದಾದ ಜಲಪಾತ ಸೃಷ್ಟಿಯಾಗಿದೆ. ಸುಮಾರು 10 ಮೀಟರ್ ಎತ್ತರದಿಂದ ನೀರು ಧುಮ್ಮಿಕ್ಕುತ್ತಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ.
ಈ ಜಲಪಾತದ ಸೌಂದರ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು ಆಗಮಿಸುತ್ತಿದೆ. ಪ್ರವಾಸಿಗರು ಜಲಪಾತದ ಬಳಿ ಸೆಲ್ಫಿ ಕ್ಲಿಕ್ಲಿಸಿಕೊಂಡು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಮಳಗಿ ಬಳಿ ಧರ್ಮಾ ನದಿಗೆ ಜಲಾಶಯ ನಿರ್ಮಿಸಲಾಗಿದೆ. ಈ ಜಲಾಶಯದಿಂದ ನೀರು ಹಾವೇರಿ ಜಿಲ್ಲೆಯ ಹಳ್ಳಕೊಳ್ಳಗಳನ್ನು ಸೇರುತ್ತಿದೆ. ಆದರಂತೆ ಕಂಚಿನೆಗಳೂರಿನ ಒಡ್ಡಿಗೂ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಚಿಕ್ಕ ಜಲಪಾತ ಸೃಷ್ಟಿಯಾಗಿದೆ. ಮಳೆಗಾಲದಲ್ಲಿ ಮಾತ್ರ ಈ ಜಲಪಾತ ನೋಡಲು ಕಾಣಸಿಗುತ್ತದೆ.