ಮೈಸೂರು: ರಾಜ್ಯದಲ್ಲಿ ವರುಣನ ಆರ್ಭಟ ಮುಂದುವರೆದಿದ್ದು ಹೆಚ್.ಡಿ. ಕೋಟೆ ತಾಲೂಕಿನ ಬಿಚ್ಚನಹಳ್ಳಿ ಬಳಿಯ ಕಬಿನಿ ಜಲಾಶಯ ಬಹುತೇಕ ಭರ್ತಿಯಾಗಿದೆ. ಅಣ್ಣೆಕಟ್ಟೆಯಿಂದ ಅಪಾರ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ. ಹಾಗಾಗಿ ನದಿ ಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜಿಲ್ಲಾಡಳಿತ ತಿಳಿಸಿದೆ.
ಕೇರಳದ ವಯಾನಾಡಿನಲ್ಲಿ ಕಳೆದ 4 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಕಬಿನಿ ಜಲಾಶಯಕ್ಕೆ ಭಾರೀ ಪ್ರಮಾಣದ ನೀರು ಬರುತ್ತಿದೆ. ಪರಿಣಾಮ 84 ಅಡಿ ಸಾಮರ್ಥ್ಯದ ಕಬಿನಿ ಜಲಾಶಯ ಬಹುತೇಕು ಭರ್ತಿಯಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸುಮಾರು 50 ಸಾವಿರ ಕ್ಯೂಸೆಕ್ಗೂ ಹೆಚ್ಚಿನ ನೀರನ್ನು ಕಪಿಲಾ ನದಿಗೆ ಬಿಡಲಾಗುತ್ತಿದೆ. ಈ ಹಿನ್ನೆಲೆ ಹೆಚ್.ಡಿ.ಕೋಟೆ ತಾಲೂಕಿನ ಚೆಕ್ಕೂರು ಗ್ರಾಮದ ಮಾರ್ಗವಾಗಿ, ಕೆ.ಬೆಳ್ತೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಹಾಗೂ ತಾಲೂಕಿನ ತುಂಬುಸೋಗೆ ಸೇತುವೆ ಮುಳುಗಡೆಯಾಗಿದೆ. ಗ್ರಾಮಸ್ಥರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಜತೆಗೆ ದಕ್ಷಿಣ ಕಾಶಿ ನಂಜನಗೂಡಿನ ಬಳಿಯ ಸ್ನಾನಘಟ್ಟ ಕೂಡ ಸಂಪೂರ್ಣ ಮುಳುಗಡೆಯಾಗಿದ್ದು, ಭಕ್ತರು ಪುಣ್ಯಸ್ನಾನಕ್ಕಾಗಿ ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ನಂಜನಗೂಡಿನ ಸಂಚಾರಿ ಪೊಲೀಸರು ಬ್ಯಾರಿಕೇಡ್ ಹಾಕಿ, ಮೈಕ್ಗಳ ಮೂಲಕ ಜನರಿಗೆ ಎಚ್ಚರಿಕೆ ಸಂದೇಶ ನೀಡುತ್ತಿದ್ದಾರೆ. ಇನ್ನೂ 3-4 ದಿನ ಮಳೆ ಹೀಗೆಯೇ ಮುಂದುವರೆಯಲಿದ್ದು, ಕಬಿನಿ ಜಲಾಶಯದಿಂದ ಇನ್ನೂ ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಬಿಡುವ ಸಾಧ್ಯತೆ ಇದೆ. ಆದ್ದರಿಂದ ನದಿ ಪಾತ್ರದ ಜನರು ಸುರಕ್ಷಿತವಾಗಿ ಇರುವಂತೆ ಜಿಲ್ಲಾಡಳಿತ ಮುನ್ಸೂಚನೆ ನೀಡಿದೆ.
113 ಅಡಿ ದಾಟಿದ ಕೆಆರ್ಎಸ್ ನೀರಿನ ಮಟ್ಟ:ಕನ್ನಡ ನಾಡಿನ ಜೀವನದಿ ಕಾವೇರಿ ನದಿಗೆ ಕಟ್ಟಲಾದ ನಾಡಿನ ಪ್ರಮುಖ ಜಲಾಶಯಗಳಲ್ಲಿ ಒಂದಾದ ಕೆಆರ್ಎಸ್ ಜಲಾಶಯದ ಗರಿಷ್ಠ ಮಟ್ಟ 124 ಅಡಿಯಾಗಿದ್ದು, ಜಲಾಶಯಕ್ಕೆ 36,772 ಕ್ಯೂಸೆಕ್ ನೀರು ಒಳ ಹರಿವು ಬರುತ್ತಿದೆ. ಇದರಿಂದ ಜಲಾಶಯದ ಇಂದಿನ ಮಟ್ಟ 113 ಅಡಿಗೆ ತಲುಪಿದೆ. ಜಲಾಶಯ ತುಂಬಲು ಕೇವಲ 13 ಅಡಿ ಬಾಕಿ ಇದೆ. ಮಂಡ್ಯ, ಮೈಸೂರು ಸೇರಿದಂತೆ ಕಾವೇರಿ ಪ್ರದೇಶದ ಜನರ ಮೊಗದಲ್ಲಿ ಸಂತಸ ಮನೆ ಮಾಡಿದೆ.