ರಾಮನಗರ:ಗುರುವಾರ ನಿಧನರಾದನಿವೃತ್ತ ಐಎಎಸ್ ಅಧಿಕಾರಿ, ನಟ ಕೆ.ಶಿವರಾಮ್ ಅವರ ಅಂತ್ಯಕ್ರಿಯೆ ಹುಟ್ಟೂರಾದ ರಾಮನಗರ ತಾಲೂಕಿನ ಬಿಡದಿ ಹೋಬಳಿಯ ಉರಗಹಳ್ಳಿಯ ತೋಟದಲ್ಲಿ ಇಂದು ಸಂಜೆ ನಡೆಯಿತು. ಬೆಂಗಳೂರಿನಿಂದ 6 ಗಂಟೆಗೆ ತೋಟದ ಮನೆಗೆ ಪಾರ್ಥೀವ ಶರೀರ ಆಗಮಿಸಿತು. ನಂತರ ಅಂತಿಮ ವಿಧಿ-ವಿಧಾನಗಳ ಮೂಲಕ ಅಂತ್ಯಸಂಸ್ಕಾರ ಜರುಗಿತು. ಕುಟುಂಬಸ್ಥರು ಸೇರಿದಂತೆ ನೂರಾರು ಅಭಿಮಾನಿ ಬಳಗದವರು ಕಣ್ಣೀರಿನ ವಿದಾಯ ಹೇಳಿದರು.
ಶಿವರಾಮ್ ಹೃದಯಾಘಾತದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು. ಇಂದು ಬೆಳಗ್ಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಂ.ಸುರೇಶ್, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ನಿರ್ಮಾಪಕ ಸಾ.ರಾ ಗೋವಿಂದ್,ನಿರ್ದೇಶಕ ತರುಣ್ ಸುಧೀರ್, ನಿರ್ದೇಶಕ ಮದನ್ ಪಟೇಲ್, ನಟ ದುನಿಯಾ ವಿಜಯ್ ಅಂತಿಮ ದರ್ಶನ ಪಡೆದರು.
ರಾಜಕೀಯ ಗಣ್ಯರಾದ ಸಂಸದ ಡಿ.ಕೆ.ಸುರೇಶ್, ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಚಿವ ಹೆಚ್.ಆಂಜನೇಯ ಸೇರಿದಂತೆ ಹಲವರು ಅಂತಿಮ ನಮನಗಳನ್ನು ಸಲ್ಲಿಸಿದರು.
ಅಭಿಮಾನಿಗಳ ಅಕ್ರೋಶ:ಇದಕ್ಕೂ ಮುನ್ನ ಕೆಂಗೇರಿಯಲ್ಲಿರುವ ಛಲವಾದಿ ಸಭಾಂಗಣದ ಆವರಣದಲ್ಲಿ ಶಿವರಾಮ್ ಅಂತ್ಯಕ್ರಿಯೆ ನೆರವೇರಿಸಲು ಅವಕಾಶ ನೀಡಬೇಕೆಂಬ ಒತ್ತಾಯ ವ್ಯಕ್ತವಾಗಿತ್ತು. ಇದಕ್ಕೆ ಅನುಮತಿ ಸಿಗದೇ ಇದ್ದಾಗ ಸರ್ಕಾರದ ವಿರುದ್ಧ ಶಿವರಾಮ್ ಕುಟುಂಬಸ್ಥರು, ಛಲವಾದಿ ಸಮುದಾಯ, ಅಭಿಮಾನಿಗಳು ಆಕ್ರೋಶ ಹೊರಹಾಕಿದರು.