ಶಿವಮೊಗ್ಗ: ಗೀತಾ ಶಿವರಾಜ್ ಕುಮಾರ್ ಅವರನ್ನು ನನ್ನ ಸಹೋದರಿ ಅಂತಾ ಹೇಳಿದ್ದೇನೆ. ವೈಯಕ್ತಿಕವಾಗಿ ಅವರ ಮೇಲೆ ಟೀಕೆ ಮಾಡಲು ನನ್ನ ಬಳಿ ಯಾವುದೇ ಅಸ್ತ್ರ ಇಲ್ಲ ಎಂದು ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ಯಡಿಯೂರಪ್ಪನವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ವಿಜಯೇಂದ್ರನನ್ನು ಗೆಲ್ಲಿಸಿಕೊಂಡರು. ಅದೇ ರೀತಿ ಲೋಕಸಭಾ ಚುನಾವಣೆಯಲ್ಲಿ ರಾಘವೇಂದ್ರ ಅವರನ್ನು ಗೆಲ್ಲಿಸುವ ಪ್ರಯತ್ನ ನಡೆಸಿದ್ದರು. ಅದಕ್ಕೆ ಕಾಂಗ್ರೆಸ್ನಿಂದ ಡಮ್ಮಿ ಕ್ಯಾಂಡಿಡೇಟ್ ಹಾಕಿಸಿಕೊಂಡು ಬಂದರು. ಶಿವಮೊಗ್ಗ ಕ್ಷೇತ್ರದಲ್ಲಿ ಡಮ್ಮಿ ಕ್ಯಾಂಡಿಡೇಟ್ ಹಾಕಿದ್ದಕ್ಕೆ ಆಕ್ರೋಶಗೊಂಡ ಕಾಂಗ್ರೆಸ್ನವರು ನನಗೆ ಬೆಂಬಲ ಕೊಟ್ಟಿದ್ದಾರೆ. ಅದರಿಂದಾಗಿ ನಾನು ಗೆಲ್ಲುತ್ತೇನೆ ಎಂದು ಹೇಳಿದ್ದೇನೆ. ಇದರಲ್ಲಿ ನಾನು ಗೀತಾ ಶಿವರಾಜ್ಕುಮಾರ್ ಅವರನ್ನು ವೈಯಕ್ತಿಕವಾಗಿ ಟೀಕಿಸಿದ್ದೇನೆ ಎಂದು ಹೇಗಾಗುತ್ತದೆ ಎಂದು ಪ್ರಶ್ನಿಸಿದರು.
ಗೀತಾ ಶಿವರಾಜ್ಕುಮಾರ್ ಅವರ ಜೊತೆ ಓಡಾಡುತ್ತಿರುವ ಅನೇಕ ಕಾಂಗ್ರೆಸಿಗರು, ಬಿ.ವೈ.ರಾಘವೇಂದ್ರ ಅವರೊಂದಿಗೆ ಓಡಾಡುತ್ತಿರುವ ಬಿಜೆಪಿಯ ಪ್ರಮುಖ ಕಾರ್ಯಕರ್ತರು "ನಮ್ಮ ತಾಯಿ ಆಣೆ ನಮ್ಮ ವೋಟ್ ನಿಮಗೆ" ಎಂದು ಫೋನ್ ಮಾಡಿ ಹೇಳುತ್ತಿದ್ದಾರೆ. ಅವರು ಈಶ್ವರಪ್ಪ ಎಂದು ವೈಯಕ್ತಿಕವಾಗಿ ಬೆಂಬಲ ಕೊಡುತ್ತಿಲ್ಲ. ಹಿಂದುತ್ವ ಉಳಿಸುತ್ತಾರೆ, ಅಪ್ಪ-ಮಕ್ಕಳ ಹಿಡಿತದಿಂದ ಪಕ್ಷವನ್ನು ಹೊರಗೆ ತರುತ್ತಾರೆ, ರಾಜ್ಯದ ಎಲ್ಲಾ ಕಾರ್ಯಕರ್ತರ ನೋವಿಗೆ ಸ್ಪಂದಿಸುತ್ತಿದ್ದಾರೆ ಎಂದು ನನಗೆ ವೋಟ್ ಕೊಡುತ್ತಾರೆ, ನನ್ನ ಪರವಾಗಿ ನಿಲ್ಲುತ್ತಾರೆ ಎಂದರು.
ಗೆದ್ದ ತಕ್ಷಣ ನನ್ನ ತಾಯಿ ಬಳಿ ಹೋಗುತ್ತೇನೆ: ಬಿಜೆಪಿ ನನ್ನದೇ ಪಕ್ಷ. ನಾನು ತಪಸ್ಸು ಮಾಡಿ ಕಟ್ಟಿರೋದು. ನನ್ನ ಜೊತೆಗೆ ಡಿ.ಎಸ್.ಶಂಕರಮೂರ್ತಿ, ರಾಮಚಂದ್ರೇಗೌಡರು ಸೇರಿದಂತೆ ಇನ್ನೂ ಅನೇಕ ಹಿರಿಯರಿದ್ದಾರೆ. ಸದ್ಯ ಮೂಲೆಗೆ ತಳ್ಳಿರುವ ಸಿ.ಟಿ.ರವಿ, ಪ್ರತಾಪ್ ಸಿಂಹ, ನಳೀನ್ ಕುಮಾರ್ ಕಟೀಲ್, ಬಸನಗೌಡ ಪಾಟೀಲ್ ಯತ್ನಾಳ್, ಅನಂತ್ಕುಮಾರ್ ಹೆಗ್ಡೆ ಅವರು ಈ ಪಕ್ಷ ಕಟ್ಟಿದ್ದಾರೆ. ಇವರೆಲ್ಲರೂ ಬಿಜೆಪಿಯನ್ನು ತಾಯಿ ಎಂದುಕೊಂಡಿದ್ದಾರೆ. ನಾನು ಚುನಾವಣೆಯಲ್ಲಿ ಗೆದ್ದ ತಕ್ಷಣ ನನ್ನ ತಾಯಿ ಬಳಿ ಹೋಗುತ್ತೇನೆ, ಗೆದ್ದ ತಕ್ಷಣ ನರೇಂದ್ರ ಮೋದಿಯವರ ಕೈ ಎತ್ತುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ:ಭಾರತ್ ಜೋಡೋದಲ್ಲಿ ಭಾಗವಹಿಸಿದ್ದ ಡಾ.ಸುಶ್ರುತ್ ಗೌಡ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ - Sushruth Gowda Joins BJP