ಕರ್ನಾಟಕ

karnataka

ETV Bharat / state

ಸಂವಿಧಾನ ಬದಲಾದಲ್ಲಿ ಮೊದಲು ಸಮಸ್ಯೆಗೆ ಸಿಲುಕುವುದೇ ನ್ಯಾಯಾಂಗ ವ್ಯವಸ್ಥೆ: ನಿವೃತ್ತ ನ್ಯಾ.ನಾಗಮೋಹನ್ ದಾಸ್

ಹೈಕೋರ್ಟ್‌ನಲ್ಲಿ ಏರ್ಪಡಿಸಲಾಗಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ಭಾಗವಹಿಸಿ ಮಾತನಾಡಿದರು.

Constitution Day Celebration
ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೆಚ್​.ಎನ್.ನಾಗಮೋಹನ್ ದಾಸ್ (ETV Bharat)

By ETV Bharat Karnataka Team

Published : Nov 27, 2024, 7:46 AM IST

ಬೆಂಗಳೂರು: ಪ್ರಸ್ತುತ ದಿನಗಳಲ್ಲಿ ಸಂವಿಧಾನದಲ್ಲಿರುವ ಹಲವು ಅಂಶಗಳು ಅಪ್ರಸ್ತುತ ಎಂದು ಹೇಳುವ ಮೂಲಕ ಇಡೀ ಸಂವಿಧಾನವನ್ನೇ ಬದಲಾವಣೆ ಮಾಡುವ ಹುನ್ನಾರ ನಡೆಯುತ್ತಿದೆ. ಅದು ಆದಲ್ಲಿ ಮೊದಲು ಸಮಸ್ಯೆಗೆ ಸಿಲುಕುವುದೇ ನ್ಯಾಯಾಂಗ ವ್ಯವಸ್ಥೆ ಎಂದು ಹೈಕೋರ್ಟ್​ ನಿವೃತ್ತ ನ್ಯಾಯಮೂರ್ತಿ ಹೆಚ್​.ಎನ್.ನಾಗಮೋಹನ್ ದಾಸ್ ಕಳವಳ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಹೈಕೋರ್ಟ್, ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಮತ್ತು ಕರ್ನಾಟಕ ಬಾರ್ ಕೌನ್ಸಿಲ್​ ವತಿಯಿಂದ ನಗರದ ಹೈಕೋರ್ಟ್‌ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಭಾರತಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಸುಮಾರು ಎರಡು ವರ್ಷಗಳ ಕಾಲ ನೂರಾರು ಮಂದಿ ಶ್ರಮಿಸಿ ಸಂವಿಧಾನವನ್ನು ರಚನೆ ಮಾಡಿದ್ದಾರೆ. ಭಾರತದ ಸಂವಿಧಾನವನ್ನು ವಿಶ್ವದ ಎಲ್ಲ ದೇಶಗಳ ನ್ಯಾಯಶಾಸ್ತ್ರಜ್ಞರು ಅತ್ಯಂತ ಪ್ರಸ್ತುತವಾದ ಸಂವಿಧಾನವೆಂದು ಹೇಳುತ್ತಿದ್ದಾರೆ. ಆದರೆ, ನಮ್ಮ ದೇಶದಲ್ಲಿ ಸಂವಿಧಾನದ ಹಲವು ಪರಿಚ್ಛೇದಗಳು ಅಪ್ರಸ್ತುತವೆಂದು ಹೇಳುತ್ತಿದ್ದಾರೆ. ಸಂವಿಧಾನ ಬದಲಾವಣೆ ಮಾಡಬೇಕು ಎಂಬ ಕೂಗೂ ಬರುತ್ತಿದೆ. ಈ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಸಂವಿಧಾನ ಬದಲಾದರೆ, ಅದಕ್ಕೆ ಪರ್ಯಾಯ ಏನು ಎಂಬುದನ್ನು ಹೇಳುತ್ತಿಲ್ಲ. ಈ ಸಂದರ್ಭದಲ್ಲಿ ನ್ಯಾಯಾಂಗ ಅತ್ಯಂತ ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಣೆ ಮಾಡಬೇಕಾಗುತ್ತದೆ. ಹಿಂದೆ ಸರಿದಲ್ಲಿ ಅಪವ್ಯಾಖ್ಯಾನ ಪ್ರಾರಂಭವಾಗಲಿದ್ದು, ದೇಶದಲ್ಲಿ ಅರಾಜಕತೆ ಉಂಟಾಗಲಿದೆ. ಅದರಿಂದ ತೊಂದರೆಗೆ ಸಿಲುಕುವುದು ಮೊದಲು ನ್ಯಾಯಾಂಗ ವ್ಯವಸ್ಥೆ. ಆಗ ಎಲ್ಲ ನ್ಯಾಯಾಧೀಶರನ್ನು ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕ ಹೈಕೋರ್ಟ್ (ETV Bharat)

ಆದ್ದರಿಂದ ದೇಶದ ಸಂವಿಧಾನ ಉಳಿಸುವ ಕಾರ್ಯ ನ್ಯಾಯಾಂಗಕ್ಕೆ ಸೇರಿದೆ. ಕೇಶವ ಭಾರತಿ ಪ್ರಕರಣದಿಂದಾಗಿ ಇಂದಿಗೂ ಸಂವಿಧಾನದ ಮೂಲ ತತ್ವಗಳು ಉಳಿದುಕೊಂಡಿವೆ. ಹೀಗಾಗಿ ಪ್ರತಿಯೊಂದು ನ್ಯಾಯಾಧೀಶರು ತಮ್ಮ ಆದೇಶದಲ್ಲಿ ಉಲ್ಲೇಖಿಸಬೇಕಾಗಿದೆ ಎಂದು ಅವರು ತಿಳಿಸಿದರು.

ನ್ಯಾಯಮೂರ್ತಿಗಳ ನೇಮಕ ಸಂಬಂಧಿಸಿದಂತೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ವ್ಯವಸ್ಥೆಯಿಂದ ಕಳೆದ ನಾಲ್ಕು ವರ್ಷಗಳಲ್ಲಿ ನೇಮಕವಾಗಿರವ ನ್ಯಾಯಮೂರ್ತಿ ಬಹುತ್ಯೇಕರು ಸಾಮಾನ್ಯ ವರ್ಗಕ್ಕೆ ಸೇರಿದವರಾಗಿದ್ದಾರೆ. ಆದರೆ, ಮಹಿಳಾ ನ್ಯಾಯಾಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಇಲ್ಲ. ಹೀಗಾಗಿ ಈ ರೀತಿಯ ಗೊಂದಲವವನ್ನು ಸರಿಪಡಿಸಿಕೊಳ್ಳಬೇಕು ಎಂದು ಅವರು ವಿವರಿಸಿದರು.

ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ, ನ್ಯಾಯಮೂರ್ತಿ ಕಾಮೇಶ್ವರ ರಾವ್, ನ್ಯಾಯಮೂರ್ತಿ ಅನು ಸಿವರಾಮನ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಇಂದು ರಾಷ್ಟ್ರೀಯ ಸಂವಿಧಾನ ದಿನ: ಅಮೃತಮಹೋತ್ಸವ ಸಂಭ್ರಮದಲ್ಲಿ ನಮ್ಮ 'ಸಂವಿಧಾನ'

ABOUT THE AUTHOR

...view details