ಬೆಂಗಳೂರು: ನಾನು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ವೈದ್ಯರು 10 ದಿನ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಹೀಗಾಗಿ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಅಗತ್ಯವಾದರೆ ಮಠಕ್ಕೆ ಬಂದು ಹೇಳಿಕೆ ದಾಖಲಿಸಿಕೊಳ್ಳಬಹುದು ಎಂದು ಉಪ್ಪಾರಪೇಟೆ ಪೊಲೀಸರಿಗೆ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಚಂದ್ರಶೇಖರನಾಥ ಸ್ವಾಮೀಜಿ ಪತ್ರ ಬರೆದಿದ್ದಾರೆ.
ಪತ್ರದ ಸಾರಾಂಶ: ಇಂದು ವಿಚಾರಣೆ ಹಾಜರಾಗುವಂತೆ ಪೊಲೀಸರು ಕಳುಹಿಸಿದ್ದ ನೋಟಿಸ್ಗೆ ಉತ್ತರಿಸಿರುವ ಸ್ವಾಮೀಜಿ, ನಾನು 81 ವರ್ಷದ ವೃದ್ಧ. ಮಾರಕ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದೇನೆ. ವೈದ್ಯರು ಸುಮಾರು ಹತ್ತು ದಿನಗಳ ಕಾಲ ವಿಶ್ರಾಂತಿ ಪಡೆಯಲು ತಿಳಿಸಿದ್ದಾರೆ. ಆದ ಕಾರಣ ಇಂದು ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಗುಣಮುಖನಾದರೆ ಇದೇ ತಿಂಗಳು 18ರಂದು ಮಧ್ಯಾಹ್ನ 3 ಗಂಟೆಗೆ ಹಾಜರಾಗುತ್ತೇನೆ. ಅನಾನುಕೂಲವಾದಲ್ಲಿ ತನಿಖಾಧಿಕಾರಿಗಳೇ ಮಠಕ್ಕೆ ಬಂದು ಹೇಳಿಕೆ ದಾಖಲಿಸಬಹುದು. ಈ ಬಗ್ಗೆ ನಮ್ಮ ಕಡೆಯಿಂದ ಯಾವುದೇ ಅಭ್ಯಂತರವಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಮುಸ್ಲಿಮರಿಗೆ ಮತದಾನದ ಹಕ್ಕು ರದ್ದುಪಡಿಸಿ ಎಂದು ಬಾಯಿತಪ್ಪಿ ನೀಡಿದ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದು, ಸಾಮಾಜಿಕ ಸ್ವಾಸ್ಥ್ಯ ಮತ್ತು ಶಾಂತಿಯ ದೃಷ್ಠಿಯಿಂದ ಈ ಪ್ರಕರಣ ಇಲ್ಲಿಗೆ ಮುಕ್ತಾಯಗೊಳಿಸಲು ಸ್ವಾಮೀಜಿ ಮನವಿ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸ್ವಾಮೀಜಿ, ರೈತರು ಬೆಳೆಯಬೇಕು. ದೇಶಕ್ಕೆ ಒಳ್ಳೆಯದಾಗಬೇಕು. ಏನಾದರೂ ಆಗಲಿ, ನಾನು ರೆಡಿ ಇದ್ದೇನೆ. ಪ್ರಕರಣದ ತನಿಖೆ ಎದುರಿಸುತ್ತೇನೆ ಎಂದಿದ್ದಾರೆ.
ದೂರಿನ ವಿವರ: ತಾವು ಫೇಸ್‌ಬುಕ್‌ನಲ್ಲಿ ನೋಡುತ್ತಿರುವಾಗ 'ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು' - ಚಂದ್ರಶೇಖರನಾಥ ಸ್ವಾಮೀಜಿ ಎಂಬ ಶೀರ್ಷಿಕೆಯಿದ್ದ ಲಿಂಕ್ ಗಮನಿಸಿದೆ. ಲಿಂಕ್ ತೆರೆದಾಗ, ಭಾರತೀಯ ಕಿಸಾನ್ ಸಂಘದ ವತಿಯಿಂದ ನವೆಂಬರ್ 26ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಚಂದ್ರಶೇಖರನಾಥ ಸ್ವಾಮೀಜಿ ಅವರು ಆ ರೀತಿ ಮಾತನಾಡಿರುವುದು ಕಂಡುಬಂದಿದೆ. ಸ್ವಾಮೀಜಿ ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು, ದೇಶದಲ್ಲಿ ವಕ್ಫ್ ಮಂಡಳಿಯೇ ಇಲ್ಲದಂತೆ ಮಾಡಬೇಕು, ಆಗ ಭಾರತೀಯರೆಲ್ಲರೂ ನೆಮ್ಮದಿಯಿಂದಿರಲು ಸಾಧ್ಯ. ರೈತರ ಜಮೀನು ಉಳಿಸಲು ಎಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸುವ ತುರ್ತು ಸಂದರ್ಭ ಎದುರಾಗಿದೆ. ಸರ್ಕಾರ ಹೋದರೂ ತೊಂದರೆ ಇಲ್ಲ. ವಕ್ಫ್ ಮಂಡಳಿ ರದ್ದು ಮಾಡುವ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಭಾರತೀಯ ಪ್ರಜೆಗಳಾದ ನಾವು ಸಂವಿಧಾನಕ್ಕೆ ಬದ್ಧರಾಗಿ ದೇಶದಲ್ಲಿ ಜೀವನ ಸಾಗಿಸುತ್ತಿದ್ದೇವೆ. ಆದರೆ, ಸ್ವಾಮೀಜಿ ಮುಸ್ಲಿಂ ಧರ್ಮವನ್ನು ಗುರಿಯಾಗಿಸಿಕೊಂಡು ಮಾತನಾಡುವ ಮೂಲಕ ನಮ್ಮ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ. ಧರ್ಮಗಳ ನಡುವೆ ಮತೀಯ ದ್ವೇಷ, ವೈರತ್ವ ಮೂಡುವಂತೆ ಪ್ರಚೋದನಕಾರಿ ಭಾಷಣ ಮಾಡಿರುವ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೈಯದ್ ಅಬ್ಬಾಸ್ ಎಂಬವರು ತಮ್ಮ ದೂರಿನಲ್ಲಿ ಒತ್ತಾಯಿಸಿದ್ದರು.
ಇದನ್ನೂ ಓದಿ: ಸರ್ಕಾರ ಸ್ವಾಮೀಜಿಗಳಿಗೆ ಬೆದರಿಕೆ ಹಾಕುವುದು ಸರಿಯಲ್ಲ, ಅವರ ಪರ ನಾವಿದ್ದೇವೆ: ವಿಜಯೇಂದ್ರ