ಹುಬ್ಬಳ್ಳಿ: ಅವಳಿ ನಗರ ಹುಬ್ಬಳ್ಳಿ-ಧಾರವಾಡ ದಿನೇ ದಿನೇ ಬೆಳೆಯುತ್ತಿದೆ. ನಗರಗಳು ಬೆಳೆದಂತೆ ಸ್ವಚ್ಛತೆ ದೊಡ್ಡ ತಲೆನೋವಾಗುತ್ತಿದೆ. ಮಹಾನಗರ ಪಾಲಿಕೆ ಕಸ ಎಸೆಯುವವರಿಗೆ ದಂಡ ಪ್ರಯೋಗ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಹೀಗಾಗಿ, ನಮ್ಮ ನಗರ-ಸ್ವಚ್ಛ ನಗರ ಎಂಬ ಧ್ಯೇಯದೊಂದಿಗೆ ಪಾಲಿಕೆ ಇದೀಗ ಕಸ ಹೀರುವ ಯಂತ್ರಗಳನ್ನು ಖರೀದಿಸಿದೆ.
ವ್ಯಾಕ್ಯೂಮ್ ಗಾರ್ಬೇಜ್ ಸಕ್ಷನ್ ಮಷಿನ್ (ಲಿಟ್ಟರ್ ಪಿಕ್ಕರ್) ಎಂದು ಕರೆಯಲ್ಪಡುವ ಈ ಯಂತ್ರದ ಪ್ರಾಯೋಗಿಕ ಚಾಲನೆಯನ್ನು ಈಗಾಗಲೇ ನಡೆಸಲಾಗಿದೆ. ಆದರೆ, ನಿರ್ವಾಹಕ ಸಿಬ್ಬಂದಿ ಇನ್ನಷ್ಟು ಪರಿಣತಿ ಸಾಧಿಸಬೇಕಿದೆ. ಆ ಬಳಿಕ ಪೂರ್ಣ ಪ್ರಮಾಣದಲ್ಲಿ ಕಸ ಹೀರುವ ಯಂತ್ರ ಕಾರ್ಯಾಚರಣೆ ನಡೆಸಲಿದೆ.
ಯಂತ್ರ ಹೇಗೆ ಕೆಲಸ ಮಾಡುತ್ತದೆ?: ಇದರಿಂದಾಗಿ, ಕಸವನ್ನು ಕೈಯಿಂದ ಅಥವಾ ಸಲಕರಣೆಗಳಿಂದ ಎತ್ತಿ ಆಟೋ ಟಿಪ್ಪರ್ ಅಥವಾ ಟ್ರ್ಯಾಕ್ಟರ್‌ಗಳಿಗೆ ತುಂಬುವ ಪ್ರಮೇಯವೇ ಇರುವುದಿಲ್ಲ. ರಸ್ತೆ ಬದಿ ಚೆಲ್ಲಿರುವ (ರಾಶಿ ಹಾಕಿರುವ) ಕಸವನ್ನು ಯಂತ್ರ ಶಕ್ತಿಯ ಮೂಲಕ 8ರಿಂದ 10 ಇಂಚು ಅಗಲದ ಪೈಪ್‌ನಿಂದ ಹೀರಿಕೊಳ್ಳಲಾಗುತ್ತದೆ. 1.5 ಕ್ಯೂಬಿಕ್ ಮೀಟರ್ ಕಂಟೇನರ್‌ನಲ್ಲಿ ಸುಮಾರು 2 ಟನ್‌ನಷ್ಟು ಕಸ ಸಂಗ್ರಹಿಸುವ ಸಾಮರ್ಥ್ಯ ಈ ಯಂತ್ರಕ್ಕಿದೆ.
ಎಲ್ಲೆಲ್ಲಿ ಕಾರ್ಯಾಚರಣೆ?: ಈ ಯಂತ್ರವು ಮಾರುಕಟ್ಟೆ ಪ್ರದೇಶದಲ್ಲಿ ಕಸ ಸಂಗ್ರಹಕ್ಕೆ ಸೂಕ್ತವಾಗಿದೆ. ಹುಬ್ಬಳ್ಳಿ ದುರ್ಗದಬೈಲ್, ಜನತಾ ಬಜಾರ್ ಹಾಗೂ ಧಾರವಾಡದ ಸುಭಾಶ ರಸ್ತೆ ಮಾರುಕಟ್ಟೆಯಲ್ಲಿ ನಿತ್ಯವೂ ತರಕಾರಿ, ಕಾಯಿಪಲ್ಲೆ ತ್ಯಾಜ್ಯಗಳು ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹವಾಗುತ್ತದೆ. ಆಟೋ ಟಿಪ್ಪರ್ ಹಾಗೂ ಟ್ರ್ಯಾಕ್ಟರ್ ಮೂಲಕ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ಕಸ ಸಂಗ್ರಹಿಸಲಾಗುತ್ತದೆ. ಮಾರುಕಟ್ಟೆ ಪ್ರದೇಶಗಳಲ್ಲಿ ರಾತ್ರಿ ವೇಳೆ ದೊಡ್ಡ ಪ್ರಮಾಣದಲ್ಲಿ ಕಸದ ರಾಶಿಯೇ ಚೆಲ್ಲಿರುತ್ತದೆ. ಇಂಥ ಕಡೆ ರಾತ್ರಿ ವೇಳೆ ವ್ಯಾಕ್ಯೂಮ್ ಗಾರ್ಬೇಜ್ ಸಕ್ಷನ್ ಮಷಿನ್ ಬಳಸಿ ಕಸ ವಿಲೇವಾರಿಗೆ ಪಾಲಿಕೆ ಮುಂದಾಗಿದೆ. ಈ ಯಂತ್ರ ತರಕಾರಿ, ಕಾಯಿಪಲ್ಲೆ ತ್ಯಾಜ್ಯದ ಜೊತೆಗೆ ಎಳನೀರು ಕಾಯಿ, ಪ್ಲಾಸ್ಟಿಕ್, ಹಸಿ-ಒಣ ಕಸ ಎಲ್ಲವನ್ನೂ ಹೀರಿಕೊಳ್ಳುತ್ತದೆ.
ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಬಹಳಷ್ಟು ಬಡಾವಣೆಗಳಿಗೆ ನಿತ್ಯ ಆಟೋ ಟಿಪ್ಪರ್ ಬರುವುದಿಲ್ಲ. 2 ಅಥವಾ 3 ದಿನಕ್ಕೊಮ್ಮೆ ಕಸ ಸಂಗ್ರಹಿಸಲು ಪಾಲಿಕೆ ವಾಹನ ಬರುತ್ತದೆ ಎಂಬ ದೂರುಗಳಿವೆ. ಇಂಥ ಸಂದರ್ಭದಲ್ಲಿ ಅಲ್ಲಿಯ ನಿವಾಸಿಗಳು ರಸ್ತೆ ಪಕ್ಕ, ಖಾಲಿ ಜಾಗದಲ್ಲಿ ಹಾಗೂ ನಾಲಾದಲ್ಲಿ ಕಸ ಚೆಲ್ಲಿ ಹೋಗುತ್ತಾರೆ. ಇವುಗಳನ್ನು ಪಾಲಿಕೆ ಬ್ಲ್ಯಾಕ್ ಸ್ಟಾಟ್‌ಗಳೆಂದು ಗುರುತಿಸುತ್ತದೆ. ಇಲ್ಲಿಯೂ ಕಸ ಎತ್ತಲೂ ವ್ಯಾಕ್ಯೂಮ್ ಗಾರ್ಬೇಜ್ ಸಕ್ಷನ್ ಮಷಿನ್ ಬಳಸಲು ನಿರ್ಧರಿಸಲಾಗಿದೆ.
ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಪ್ರತಿಕ್ರಿಯೆ: ''ಮಾರುಕಟ್ಟೆ ಪ್ರದೇಶ, ಸ್ವಚ್ಛತೆ ಇಲ್ಲದ ಪ್ರಮುಖ ಪ್ರದೇಶಗಳು, ರಸ್ತೆಗಳು, ಬ್ಲಾಕ್ ಸ್ಪಾಟ್‌ಗಳಲ್ಲಿ ಈ ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ. ಬೆಳಗಿನ ಅವಧಿಯಲ್ಲಿ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಾರೆ. ನಂತರದ ಅವಧಿಯಲ್ಲಿ ಈ ಯಂತ್ರಗಳ ಮೂಲಕ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತದೆ'' ಎಂದು ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಹೇಳಿದ್ದಾರೆ.
"ಯಂತ್ರಕ್ಕೆ ಅಳವಡಿಸಿರುವ 8-10 ಇಂಚು ಅಗಲದ ಪೈಪ್ ಕಸವನ್ನು ಹೀರಿಕೊಳ್ಳುತ್ತದೆ. 2 ಟನ್ ಕಸ ಸಂಗ್ರಹಿಸುವ ಸಾಮರ್ಥ್ಯವನ್ನು ಈ ಯಂತ್ರ ಹೊಂದಿದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮದಡಿ (ಎನ್ಕ್ಯಾಪ್ ) ಮಹಾನಗರ ಪಾಲಿಕೆಗೆ ಕಳೆದ ವರ್ಷ 10 ಕೋಟಿ ಅನುದಾನ ಬಂದಿತ್ತು. ಅದರಲ್ಲಿ ಈ ಯಂತ್ರಗಳನ್ನು ಖರೀದಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಮೂರು ಯಂತ್ರಗಳನ್ನು ಖರೀದಿಸುವ ಚಿಂತನೆ ಇದೆ'' ಎಂದು ಅವರು ಮಾಹಿತಿ ನೀಡಿದರು.
95 ಲಕ್ಷ ರೂ. ವೆಚ್ಚ: "ಪ್ರಾಯೋಗಿಕವಾಗಿ ಎನ್ಕ್ಯಾಪ್ ಯೋಜನೆಯಡಿ 95 ಲಕ್ಷ ರೂ. ವೆಚ್ಚದ ಎರಡು ವ್ಯಾಕ್ಯೂಮ್ ಗಾರ್ಬೇಜ್ ಸಕ್ಷನ್ ಮಷಿನ್‌ಗಳನ್ನು ಪಾಲಿಕೆ ಖರೀದಿಸಿದೆ. ಮುಂದಿನ ದಿನಗಳಲ್ಲಿ ಇನ್ನೂ ಇಂತಹ 3 ಯಂತ್ರಗಳನ್ನು ಖರೀದಿಸಲು ಪ್ರಕ್ರಿಯೆ ನಡೆದಿದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮ(ಎನ್‌ಸಿಎಪಿ)ದಡಿ ಪಾಲಿಕೆಗೆ ಕಳೆದ ವರ್ಷ 10 ಕೋಟಿ ರೂ. ಅನುದಾನ ಬಂದಿತ್ತು. ಅದರಲ್ಲಿ ಈ ಯಂತ್ರಗಳನ್ನು ಖರೀದಿಸಲಾಗಿದೆ" ಎಂದು ಅವರು ತಿಳಿಸಿದರು.
ಇದನ್ನೂ ಓದಿ: ನಗರದಲ್ಲಿ ಪ್ರತಿನಿತ್ಯ ಸರಿಸುಮಾರು 4,900 ಮೆಟ್ರಿಕ್ ಟನ್ ತ್ಯಾಜ್ಯ ಉತ್ಪತ್ತಿ!: ದಸರಾದ ಹೆಚ್ಚುವರಿ ತ್ಯಾಜ್ಯ ವಿಲೇವಾರಿ