ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಂಡ್ಯ :ಇವತ್ತು ನಾನು ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದರೆ ಬೇರೆ ಕ್ಷೇತ್ರಗಳಿಗೆ ಓಡಾಟ ಮಾಡಲು ಆಗುವುದಿಲ್ಲ. ಇದೊಂದೇ ಕಾರಣಕ್ಕೆ ತಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ತಲೆಬಾಗುತ್ತೇನೆ. ನಿಮ್ಮೆಲ್ಲರ ಜೊತೆ ಇರುತ್ತೇನೆ. ನಾನು ಎಲ್ಲಿಯೂ ಹೋಗುವುದಿಲ್ಲ. ಪ್ರತಿ ಹಳ್ಳಿಗೂ ನಾನು ಬರುತ್ತೇನೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
ಮಂಡ್ಯದಲ್ಲಿ ನಡೆದ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನಾನು ಈ ಪ್ರಾದೇಶಿಕ ಪಕ್ಷದ ಜವಾಬ್ದಾರಿಯನ್ನು ಪಕ್ಷದ ಕಾರ್ಯಕರ್ತನಾಗಿ ತೆಗೆದುಕೊಂಡು, ಪ್ರತಿ ಹಳ್ಳಿ ಹಳ್ಳಿಗೂ ನಿಮ್ಮ ಜೊತೆಯಲ್ಲಿ ನಿಂತು, ಪ್ರವಾಸವನ್ನು ಮಾಡಿ, ಜಾತ್ಯತೀತ ಜನಾತದಳದ ಹೊಸ ಅಧ್ಯಾಯವನ್ನು ಶುರು ಮಾಡುತ್ತೇನೆ. ನಿಮ್ಮ ಮನಸ್ಸಿನಲ್ಲಿ ಕುಮಾರಣ್ಣ ಅವರು ಈ ಜಿಲ್ಲೆಗೆ ಬರಬೇಕು, ಅವರು ಬಂದರೆ ಈ ಜಿಲ್ಲೆ ಅಭಿವೃದ್ದಿಯಾಗುತ್ತದೆ ಎಂದು ಅತ್ಯಂತ ಪ್ರೀತಿಯಿಂದ ಕರೆಯುತ್ತಿದ್ದೀರಿ. ಕಳೆದ 2019ರ ಲೋಕಸಭೆ ಚುನಾವಣೆಯ ಸೋಲಿಗೆ ಈ ಬಾರಿ ತಕ್ಕ ಉತ್ತರವನ್ನು ಕೊಟ್ಟು ಸಂದೇಶವನ್ನು ಸಾರಬೇಕು ಎನ್ನುವ ಹಿನ್ನೆಲೆಯಲ್ಲಿ ನನ್ನ ಮೇಲೂ ವಿಶ್ವಾಸ ಇಟ್ಟುಕೊಂಡಿದ್ದೀರಿ ಎಂದರು.
ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಎಂಬುದನ್ನು ಬದಿಗಿಟ್ಟು, ಪಕ್ಷದ ಕಾರ್ಯಕರ್ತನಾಗಿ, ದೇವೇಗೌಡರ ಹೋರಾಟದ ಫಲವಾಗಿ ಕಟ್ಟಿರುವ ಈ ಪ್ರಾದೇಶಿಕ ಪಕ್ಷವನ್ನು ಬೆಳೆಸಲು ಪ್ರತಿ ಹಳ್ಳಿ ಹಳ್ಳಿಗೂ ಹೋಗುತ್ತೇವೆ. ಈ ಬಾರಿ ನಾವು ಸ್ಪರ್ಧಿಸುವ ಪ್ರತಿ ಕ್ಷೇತ್ರದಲ್ಲೂ ಗೆಲ್ಲುವುದು ಅತ್ಯವಶ್ಯಕವಾಗಿದೆ ಎಂದರು.
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಎಲ್ಲರ ಅಭಿಪ್ರಾಯ ಸಂಗ್ರಹ ಮಾಡಿದ ನಂತರ ಮಾತನಾಡಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ನಿಖಿಲ್ ಒಪ್ಪಿಸಲು ನಾನು ಮುಂದಾಗ್ತೀನಿ. ನಿಮ್ಮ ಅಭಿಪ್ರಾಯಕ್ಕೆ ಧಕ್ಕೆ ತರುವುದಿಲ್ಲ. ನಿಮ್ಮ ಭಾವನೆ, ನಿಮ್ಮ ಆಸೆ ಮತ್ತು ನಿಮ್ಮಗಳ ಪ್ರೀತಿಗೆ ನಿರಾಸೆ ಮಾಡುವುದಿಲ್ಲ ಎಂದು ಪದೇ ಪದೇ ಒತ್ತಿ ಹೇಳಿದರು. ಪಕ್ಷದ ನಾಯಕರೆಲ್ಲ ಸೇರಿ ಅಭ್ಯರ್ಥಿ ಯಾರು ಎಂಬುದನ್ನು ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
ಮೂರನೇ ಬಾರಿ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಿದ್ದೇನೆ. ಇದೇ ತಿಂಗಳ 21ರಂದು ಶಸ್ತ್ರ ಚಿಕಿತ್ಸೆ ನಡೆಯಲಿದೆ. ಇದಕ್ಕಾಗಿ 19 ರಂದು ತೆರಳಿ 25 ರಂದು ವಾಪಸ್ ಆಗುತ್ತೇನೆ. ಈ ಜೀವ ಅಷ್ಟು ಸುಲಭವಾಗಿ ಮಣ್ಣಿಗೆ ಹೋಗಲ್ಲ. ಬದುಕಿ ಬರುತ್ತೇನೆ. ಜಿಲ್ಲೆಯ ಜನತೆ ಆತಂಕ ಪಡಬೇಡಿ. ನನಗೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 84 ವರ್ಷ ಆಯಸ್ಸು. ಮಣ್ಣಿಗೆ ಹೋಗುವ ಮುಂಚೆ ರೈತರ ಪಕ್ಷವನ್ನು ಶ್ರಮವಹಿಸಿ ಸಂಘಟಿಸುತ್ತೇನೆ ಎಂದರು.
ಪ್ರತಿಪಕ್ಷ ಕಾಂಗ್ರೆಸ್ ಆಸೆಯಂತೆ ನಾಟಿ ಸ್ಟೈಲಲ್ಲೇ ಚುನಾವಣೆ ಮಾಡೋಣ. ಪಕ್ಷದ ಹಿರಿಯ ನಾಯಕರು ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಮತದ ತೀರ್ಮಾನ ಮಾಡಲಿದ್ದಾರೆ. ನಿಮ್ಮ ಭಾವನೆಗೆ ನಿರಾಶೆ ಮಾಡಲ್ಲ ಎಂದಷ್ಟೇ ಹೇಳಿದರು. ಇದೇ ತಿಂಗಳ 25ಕ್ಕೆ ಘೋಷಣೆ ಮಾಡುತ್ತೇನೆ ಎನ್ನುವ ಮೂಲಕ ಅಭ್ಯರ್ಥಿ ಯಾರು ಎಂದು ತಿಳಿಸದೇ ನಿಖಿಲ್ ಸ್ವರ್ಧೆ ಮಾಡುತ್ತಾರೆ ಎಂದು ಸುಳಿವು ಬಿಟ್ಟುಕೊಟ್ಟಿದ್ದಾರೆ.
ಇದನ್ನೂ ಓದಿ :ನಾನು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲ್ಲ: ನಿಖಿಲ್ ಕುಮಾರಸ್ವಾಮಿ ಸ್ಪಷ್ಟನೆ