ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಸರ್ಕಾರ ಅಧಿಕಾರಿಗಳನ್ನ ಬಿಟ್ಟು ನಮ್ಮನ್ನು ಹೆದರಿಸುವ ಪ್ರಯತ್ನ ಮಾಡುತ್ತಿದೆ: ಹೆಚ್.ಡಿ.ರೇವಣ್ಣ - H D Revanna - H D REVANNA

ವಿಚಾರಣೆ ನೆಪದಲ್ಲಿ ನಮಗೆ ಯಾವ ರೀತಿ ತೊಂದರೆ ಕೊಡಲಾಗಿದೆ ಎಂಬುದರ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಎಲ್ಲವನ್ನೂ ಎಳೆಎಳೆಯಾಗಿ ವಿವರಿಸುತ್ತೇನೆ ಎಂದು ಜೆಡಿಎಸ್​ ಶಾಸಕ ಹೆಚ್.ಡಿ.ರೇವಣ್ಣ ತಿಳಿಸಿದ್ದಾರೆ.

h d revanna
ಹೆಚ್.ಡಿ.ರೇವಣ್ಣ (ETV Bharat)

By ETV Bharat Karnataka Team

Published : Sep 13, 2024, 5:08 PM IST

ಬೆಂಗಳೂರು:ಕಾಂಗ್ರೆಸ್ ಸರ್ಕಾರ ಅಧಿಕಾರಿಗಳನ್ನು ಬಿಟ್ಟು ನಮ್ಮನ್ನು ಹೆದರಿಸುವ ಪ್ರಯತ್ನ ಮಾಡುತ್ತಿದೆ. ನಾನು 40 ವರ್ಷದಿಂದ ರಾಜಕಾರಣದಲ್ಲಿದ್ದೇನೆ, 25 ವರ್ಷ ಶಾಸಕನಾಗಿದ್ದೇನೆ. ಯಾವುದಕ್ಕೂ ಹೆದರುವುದಿಲ್ಲ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮಗೆ ದೇವರ ಮೇಲೆ ನಂಬಿಕೆ, ಕಾನೂನಿನ ಮೇಲೆ ನಂಬಿಕೆ, ನ್ಯಾಯಾಂಗದ ಬಗ್ಗೆ ಗೌರವವಿದೆ. ನಮ್ಮ ಮೇಲಿನ ಆರೋಪಗಳ ಬಗ್ಗೆ ನ್ಯಾಯಾಲಯದ ಮೂಲಕವೇ ಹೋರಾಟ ನಡೆಸಿದ್ದೇವೆ ಎಂದು ತಿಳಿಸಿದರು.

ತಪ್ಪು ಮಾಡಿದ್ದರೆ ನೇಣಿಗೆ ಹಾಕಲಿ: ಒಂದು ವೇಳೆ ತಪ್ಪು ಮಾಡಿದ್ದರೆ ನ್ಯಾಯಾಲಯ ನೇಣಿಗೆ ಹಾಕಲಿ. ವಿಧಾನಸಭೆಯಲ್ಲಿ ಶಾಸಕನಾಗಿ, ಸಚಿವನಾಗಿ ನನ್ನ ವಿರುದ್ಧ ತನಿಖೆ ಮಾಡಿ ಎಂದು ಸಭಾಧ್ಯಕ್ಷರಿಗೆ ಮನವಿ ಮಾಡಿದ್ದೇನೆ. ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರ ಮೇಲೆಯೂ ಸಿಒಡಿ ತನಿಖೆ ಮಾಡಿಸಿದ್ದರು. ಬಳಿಕ ಅದೇ ಅಧಿಕಾರಿ ದೇವೇಗೌಡರ ಕಾಲು ಕಟ್ಟಿದ್ದರು ಎಂದು ಹೇಳಿದರು.

ವಿಚಾರಣೆ ನೆಪದಲ್ಲಿ ನಮ್ಮ ಮನೆಯ ಕೆಲಸಗಾರರು, ಅಡುಗೆಯವರು ಹಾಗೂ ಆಪ್ತ ಸಹಾಯಕರನ್ನೂ ಬಿಟ್ಟಿಲ್ಲ. ಎಲ್ಲರ ವಿಚಾರಣೆ ಮಾಡಿದ್ದಾರೆ. ಕಾಂಗ್ರೆಸ್ ಅನ್ನು ನಂಬಬೇಡಿ ಎಂದು ಈ ಹಿಂದೆಯೇ ಬಿಜೆಪಿ ನಾಯಕರು ಹೇಳಿದ್ದರು. ವಿಚಾರಣೆ ನೆಪದಲ್ಲಿ ನಮಗೆ ಯಾವ ರೀತಿ ತೊಂದರೆ ಕೊಟ್ಟರು ಎಂಬುದನ್ನು ಎಳೆಎಳೆಯಾಗಿ ವಿಧಾನಸಭೆ ಅಧಿವೇಶನದಲ್ಲಿ ಹೇಳುತ್ತೇನೆ. ಎಸ್ಐಟಿ ಯಾವ ರೀತಿ ತನಿಖೆ ನಡೆಸುತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜ್ವಲ್ ರೇವಣ್ಣ ಅವರ ವಿರುದ್ಧ 2ನೇ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗುತ್ತಿದೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರೇವಣ್ಣ, ನ್ಯಾಯಾಲಯಕ್ಕೆ ಸಲ್ಲಿಸುವ ಮುನ್ನವೇ ದೋಷಾರೋಪ ಪಟ್ಟಿ ಸೋರಿಕೆಯಾಗುತ್ತಿದೆ ಎಂದು ಹೇಳಿದರು.

ಚಾರ್ಜ್​ಶೀಟ್ ಸೋರಿಕೆ ಮಾಡುತ್ತಿರುವವರು ಯಾರು?:ಸರ್ಕಾರದ ನ್ಯೂನತೆ, ಲೋಪದೋಷಗಳನ್ನು ಮುಚ್ಚಿಕೊಳ್ಳಲು ಏನೇನು ನಡೆಯುತ್ತಿದೆ ಎಂಬುದು ಗೊತ್ತಿದೆ. ಸೋರಿಕೆಯಾದ ವಿಚಾರಗಳು ಯಾರ್ಯಾರ ಕೈ ಸೇರುತ್ತಿದೆ ಎನ್ನುವುದೂ ಗೊತ್ತಿದೆ. ನ್ಯಾಯಾಲಯಕ್ಕೆ ಚಾರ್ಜ್​ಶೀಟ್ ಸಲ್ಲಿಸುವ ಮುನ್ನ ಸೋರಿಕೆ ಮಾಡುತ್ತಿರುವವರು ಯಾರು?, ನ್ಯಾಯ ಕೊಡಿಸುವವರು ಯಾರು? ಎಂದು ಪ್ರಶ್ನಿಸಿದರು.

ವಾಲೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಇ.ಡಿ, ಮಾಜಿ ಸಚಿವ ನಾಗೇಂದ್ರ ಅವರನ್ನು ಎ1 ಆರೋಪಿ ಎಂದು ಹೇಳಿದೆ. ಆದರೆ, ಎಸ್ಐಟಿ ಆ ರೀತಿ ಆರೋಪಿಯನ್ನಾಗಿ ಮಾಡಲಿಲ್ಲ ಎಂದು ಹೇಳಿದರು.

ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ: ನಾಗಮಂಗಲದ ಗಣೇಶ ಮೂರ್ತಿ ನಿಮಜ್ಜನ ಮೆರವಣಿಗೆ ವೇಳೆ ನಡೆದಿರುವ ಘಟನೆಗೆ ಪೊಲೀಸರ ವೈಫಲ್ಯವೇ ಕಾರಣ. ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ರೇವಣ್ಣ ಆರೋಪಿಸಿದರು. ಕಳೆದ ಬಾರಿಯೂ ಗಲಾಟೆಯಾಗಿತ್ತು. ಆದರೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಿಲ್ಲ, ಬಿಗಿ ಪೊಲೀಸ್ ವ್ಯವಸ್ಥೆ ಮಾಡಬೇಕಿತ್ತು, ಮಾಡಿಲ್ಲ. ಆದರೂ ಗೃಹ ಸಚಿವರು ಈ ಘಟನೆ ಸಣ್ಣದು ಅಂತ ಹೇಳುತ್ತಾರೆ ಎಂದು ಟೀಕಿಸಿದರು.

ಇದನ್ನೂ ಓದಿ:ನಾಗಮಂಗಲ ಘಟನೆ: ಬಿಜೆಪಿ ಸತ್ಯಶೋಧನಾ ಸಮಿತಿ ರಚನೆ; ಹಳ್ಳಿಗಳಲ್ಲೂ ಪ್ರತಿಭಟನೆ ಎಚ್ಚರಿಕೆ ನೀಡಿದ ಸಂಸದ ತೇಜಸ್ವಿ ಸೂರ್ಯ - BJP Fact Finding Committee

ABOUT THE AUTHOR

...view details