ಮಗುವಿಗೆ ಚಿಕಿತ್ಸೆ ಸಿಗದೇ ಸಾವನ್ನಪ್ಪಿರುವ ಆರೋಪ: ಆಸ್ಪತ್ರೆ ಎದುರು ಶವ ಇಟ್ಟು ಪ್ರತಿಭಟಿಸಿದ ಪೋಷಕರು ಕಲಬುರಗಿ:ಕಲಬುರಗಿ ಜಿಲ್ಲೆ ಅಫಜಲಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಬಂದಿದ್ದ ಮಗುವೊಂದು ಚಿಕಿತ್ಸೆ ಸಿಗದೇ ಸಾವನ್ನಪ್ಪಿರುವ ಆರೋಪ ಕೇಳಿಬಂದಿದೆ. ಡಿಪಿಟಿ ಲಸಿಕೆ ಪಡೆದ 18 ತಿಂಗಳ ಮಗುವಿನ ಸ್ಥಿತಿ ಗಂಭೀರಗೊಂಡಿದ್ದು, ಚಿಕಿತ್ಸೆ ಪಡೆಯಲು ಮಗು ಕುಟುಂಬ ಆಸ್ಪತ್ರೆಗೆ ಬಂದಿತ್ತು. ಆ ಸಮಯದಲ್ಲಿ ಆಸ್ಪತ್ರೆಯಲ್ಲಿ ಡ್ಯೂಟಿ ಡಾಕ್ಟರ್ ಇಲ್ಲದೇ ಇರುವ ಕಾರಣಕ್ಕೆ ಮಗುವಿಗೆ ಚಿಕಿತ್ಸೆ ಲಭಿಸಲಿಲ್ಲ, ಇದರಿಂದ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ ಆಸ್ಪತ್ರೆ ಮುಂದೆ ಮಗುವಿನ ಶವವಿಟ್ಟು ಪೋಷಕರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲಬುರಗಿ ಜಿಲ್ಲೆ ಅಫಜಲಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಆಯುಷ್ ಎಂಬ 18 ತಿಂಗಳ ಕಂದಮ್ಮ ಮೃತಪಟ್ಟಿದೆ. ಮಾದಬಾಳ ತಾಂಡಾ ನಿವಾಸಿಯಾದ ಪುಟ್ಟ ಕಂದಮ್ಮಗೆ ಡಿಪಿಟಿ ಲಸಿಕೆ ಹಾಕಿಸಿದ್ದಾರೆ. ಡಿಪಿಟಿ ಲಸಿಕೆ ಹಾಕಿಸಿದ ನಂತರ ಮಗುವಿನಲ್ಲಿ ತೀವ್ರ ಜ್ವರ ಕಾಣಿಸಿಕೊಂಡಿದೆ. ಈ ವೇಳೆ ಮಗುವಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಮಾತ್ರೆ ಕೊಟ್ಟಿದ್ದಾರೆ. ಮಾತ್ರೆ ನೀಡಿದ ನಂತರವೂ ಮಗುವಿನ ಜ್ವರ ನಿಂತಿಲ್ಲ.
ಮಗುವಿಗೆ ತೀವ್ರ ಜ್ವರ ಕಾಣಿಸಿಕೊಂಡ ನಂತರ ಕೂಡಲೇ ಪೋಷಕರು ಅಫಜಲಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ಈ ವೇಳೆ ಆಸ್ಪತ್ರೆಯಲ್ಲಿ ವೈದ್ಯರು ಇರಲಿಲ್ಲ. ಸಕಾಲಕ್ಕೆ ಚಿಕಿತ್ಸೆ ಸಿಗದ ಕಾರಣಕ್ಕೆ ಮಗು ಸಾವನ್ನಪ್ಪಿದೆ ಎಂದು ಪೋಷಕರು ಆರೋಪಿಸಿದರು. ''ನಮ್ಮ ಮಗು ಸಾವಿಗೆ ಆಸ್ಪತ್ರೆ ವೈದ್ಯರೇ ಕಾರಣ'' ಎಂದು ಆರೋಪಿಸಿ ಮಗುವಿನ ಮೃತದೇಹವನ್ನು ಆಸ್ಪತ್ರೆ ಮುಂದೆ ಇಟ್ಟು ನಿನ್ನೆ (ಸೋಮವಾರ) ರಾತ್ರಿ 11 ಗಂಟೆಯಿಂದ ಇಂದು (ಮಂಗಳವಾರ) ಬೆಳಗಿನ ಜಾವದವರೆಗೆ ಪ್ರತಿಭಟನೆ ನಡೆಸಿದ್ದಾರೆ.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ರತಿಕಾಂತ್‌ಸ್ವಾಮಿ ಹೇಳಿಕೆ:ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರತಿಕಾಂತ್‌ಸ್ವಾಮಿ ಅವರು, ''ಡಿಪಿಟಿ ಲಸಿಕೆ ಕೇವಲ ಒಂದೇ ಮಗುವಿಗೆ ನೀಡಿಲ್ಲ. ಬೇರೆ ಬೇರೆ ಮಕ್ಕಳಿಗೂ ಸಹ ಲಸಿಕೆ ನೀಡಲಾಗಿದೆ. ಜ್ವರ ಬಂದಿರುವ ಮಗುವಿಗೆ ಮಾತ್ರೆ ಸಹ ಕೊಡಲಾಗಿತ್ತು. ಮಗುವಿನ ಸಾವಿನ ವಿಚಾರಕ್ಕೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ ಅಲ್ಲ'' ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:ಸಾರಿಗೆ ನೌಕರರಿಗೆ ಕೂಡಲೇ ಸರಿ ಸಮಾನ ವೇತನ, ಸವಲತ್ತುಗಳನ್ನು ನೀಡುವಂತೆ ಆಗ್ರಹ