ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿದರು. (ETV Bharat) ಬಾಗಲಕೋಟೆ:''ಸಿಎಂ ಬದಲಾವಣೆ ಅಂತ ಯಾರೋ ಸುಳ್ಳು ಹೇಳುತ್ತಾರೆ. ಈಗ ಸಿದ್ದರಾಮಯ್ಯ ಸಿಎಂ ಇದ್ದಾರೆ. ಅವರು ಸಮರ್ಥವಾಗಿದ್ದು, ಆಡಳಿತವು ಉತ್ತಮವಾಗಿ ನಡೆಯುತ್ತಿದೆ'' ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ತಿಳಿಸಿದ್ದಾರೆ.
ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಂಡಿ ಗ್ರಾಮದಲ್ಲಿರುವ ಎಸ್.ಆರ್. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಹಾಗೂ ಸಂಶೋಧನೆ ಕೇಂದ್ರದ ಉದ್ಘಾಟನೆ ಸಮಾರಂಭಕ್ಕೆ ಆಗಮಿಸಿದ್ದ ಸಮಯದಲ್ಲಿ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡಿದ ಅವರು, ''ಸರ್ಕಾರ ಐದು ವರ್ಷ ಇರುವ ಬಗ್ಗೆ ಅನುಮಾನ ಇದೆಯಾ? ನಮ್ಮ ಸರ್ಕಾರ ಐದು ವರ್ಷ ಇರುತ್ತೆ. ಒಳ್ಳೆಯ ಆಡಳಿತ ಕೊಡುತ್ತೇವೆ ಅಂತ ಜನರಿಗೆ ಮಾತು ಕೊಟ್ಟಿದ್ದೇವೆ. ನಿಮ್ಮ ಊಹೆಗೆ ನಾನು ಉತ್ತರ ಕೊಡಲು ಆಗಲ್ಲ'' ಎಂದರು.
ಸಿದ್ದರಾಮಯ್ಯ ಐದು ವರ್ಷ ಇರ್ತಾರೆ ಅಂತ ಗ್ಯಾರಂಟಿಯಾಗಿ ತಿಳಿಸಿ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ''ಐದು ವರ್ಷ ಸರ್ಕಾರ ಇರುತ್ತೆ. ನಾನು ಹಿಂದೆ ಅಧ್ಯಕ್ಷ ಆಗಿದ್ದಾಗ ಸೋತಿದ್ದು, ಇವಾಗ ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಬಾರದು ಅಂತ ಇದೆಯಾ? ನಮ್ಮನಲ್ಲಿ ಈ ಬಗ್ಗೆ ಚರ್ಚೆ ಆಗುತ್ತಿಲ್ಲ. ಸಿಎಂ ಬದಲಾವಣೆ ನಿಮ್ಮ ಊಹೆ ಅಷ್ಟೆ'' ಎಂದು ಹೇಳಿದರು.
ದರ್ಶನ್‌ಗೆ ಮನೆ ಊಟ ಕೊಡುವ ವಿಚಾರವಾಗಿ ಮಾತನಾಡಿ, ''ಕಾರಾಗೃಹದ ಮ್ಯಾನ್ಯುವಲ್ ಇರುತ್ತೆ. ಮ್ಯಾನ್ಯುವಲ್ ಮೂಲಕ ಒಬ್ಬ ಕೈದಿಗೆ ಏನು ಮಾಡಬೇಕು ಅಂತ ಕಾನೂನನಲ್ಲಿ ಬರೆದಿಟ್ಟಿದ್ದಾರೆ. ಕಾರಾಗೃಹದಲ್ಲಿನ ಊಟವೇ ಕೈದಿಗಳು ಮಾಡಬೇಕು ಅಂತಿದೆ. ಕೆಲವು ಸಂದರ್ಭಗಳಲ್ಲಿ ಆರೋಗ್ಯ ದೃಷ್ಟಿಯಿಂದ ಕೋರ್ಟ್‌ಗೆ ಕೇಳಿಕೊಳ್ತಾರೆ. ಅವರ ಆರೋಗ್ಯ ಸರಿ ಇಲ್ಲದ ಕಾರಣಕ್ಕೆ ಮನೆ ಊಟ ಬೇಕು ಅಂತ ಆದೇಶ ನೀಡಿದರೆ, ಕೊಡಬಹುದು ಹೊರತು, ಇಲ್ಲದಿದ್ದರೆ ಕೊಡಲು ಆಗುವುದಿಲ್ಲ ಎಂದು ಸಚಿವ ಜಿ. ಪರಮೇಶ್ವರ್ ತಿಳಿಸಿದರು.
ಮುಡಾ ಹಗರಣ ಹಾಗೂ ಬಿಜೆಪಿ ಪಾದಯಾತ್ರೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ''ಅನಾವಶ್ಯಕ ರಾಜಕಾರಣ ಮಾಡುವುದು ಬಿಡಿ. ನಾವು ಈಗಾಗಲೇ ತನಿಖೆಗೆ ಆದೇಶ ಮಾಡಿದ್ದೇವೆ. ವಾಲ್ಮೀಕಿ ಹಗರಣದ ಕುರಿತು ಇಡಿ, ಸಿಬಿಐ, ಸಿಐಡಿ, ಎಸ್‌ಐಟಿ ತನಿಖೆ ನಡೆಸಿವೆ ಎಂದರು. ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಾಧೀಶ ದೇಸಾಯಿ ನೇತೃತ್ವದಲ್ಲಿ ಆಯೋಗ ಮಾಡಿದ್ದೇವೆ. ಆಯೋಗದಿಂದ ತನಿಖೆ ನಡೆದ ನಂತರ ಸತ್ಯಾಂಶ ಹೊರಬರುತ್ತೆ'' ಎಂದು ತಿಳಿಸಿದರು.
''ಸುಮ್ಮನೆ ಬಿಜೆಪಿ, ಜೆಡಿಎಸ್‌ನವರು ರಾಜಕೀಯ ಮಾಡುತ್ತಾರೆ. ಪಾದಯಾತ್ರೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ, ಜೆಡಿಎಸ್‌ನವರಲ್ಲಿ ಒಡಕು ಮೂಡಲು ಆರಂಭವಾಗಿದೆ. ನಾವು ಮಾಡುತ್ತೇನೆ ಅಂತ ಬಿಜೆಪಿ, ಬೇಡ ಅಂತ ಜೆಡಿಎಸ್ ಅಂತಿದ್ದಾರೆ. ಪಾದಯಾತ್ರೆ ಮಾಡ್ತಾರೋ ಅಥವಾ ಇಲ್ವೊ ಅಂತ ನೋಡೋಣ'' ಎಂದರು.
ಬಿಜೆಪಿ ನಾಯಕರ ವಿರುದ್ದ ಹೆಚ್‌ಡಿಕೆ ಅಸಮಾಧಾನ ವಿಚಾರ ಬಗ್ಗೆ ಮಾತನಾಡಿದ ಗೃಹ ಸಚಿವರು, ''ಅವರಿಬ್ಬರ ಮಧ್ಯದಲ್ಲಿ ಯಾವ ರೀತಿ ಬೆಳವಣಿಗೆ ಆಗುತ್ತೆ ಎಂದು ರಾಜ್ಯದ ಜನತೆ ಕಾಯ್ದು ನೋಡಬೇಕಾಗುತ್ತೆ'' ಎಂದರು.
ರಾಜ್ಯಪಾಲರ ಮೂಲಕ ಸರ್ಕಾರ ಉರುಳಿಸಲು ಬಿಜೆಪಿ ಮುಂದಾಗಿದೆ ಎಂದು ಕೃಷ್ಣ ಬೈರೇಗೌಡ ಹೇಳಿಕೆ ವಿಚಾರವಾಗಿ ಮಾತನಾಡಿ, ''ಸಂವಿಧಾನಾತ್ಮಕವಾಗಿ ಕೆಲವು ಅಧಿಕಾರ ಕೊಟ್ಟಿದ್ದಾರೆ. ಆ ಚೌಕಟ್ಟಿನಲ್ಲಿ ಮಾತ್ರ ಕೆಲಸ ಮಾಡಬೇಕು. ಚೌಕಟ್ಟು ಮೀರಿ ಹೋದರೆ ಸ್ವಾಭಾವಿಕವಾಗಿ ಅನುಮಾನ ಬರುತ್ತೆ. ರಾಜಕೀಯ ಆಗ್ತಿದೆ ಎಂಬ ಸಂಶಯ ಬರುತ್ತೆ. ರಾಜ್ಯಪಾಲರು ಸಿಎಂ ಅವರಿಗೆ ಶೋಕಾಸ್ ನೋಟಿಸ್ ಕೊಡಲು ಹೊರಟಿದ್ದು, ರಾಜಕೀಯ ಪ್ರೇರಣೆ ಆಗಿದೆ'' ಎಂದು ಸಚಿವ ಡಾ.ಜಿ. ಪರಮೇಶ್ವರ ತಿಳಿಸಿದರು.
ಇದನ್ನೂ ಓದಿ:ಠಾಣೆ ಮುಂದೆ ಪ್ರತಿಭಟಿಸಿದ್ದ ಬಿಜೆಪಿ ಮುಖಂಡ ಪ್ರತಾಪ್ ಸಿಂಹ, ಹರೀಶ್ ಪೂಂಜಾ ಮತ್ತಿತರರ ವಿರುದ್ಧ ಎಫ್ಐಆರ್ - FIR against former MP Pratap Simha