ಹುಬ್ಬಳ್ಳಿ: ಇಲ್ಲಿನ ರೈಲ್ವೆ ನಿಲ್ದಾಣದ ಬಳಿ ಗಾಂಜಾ ಮಾರಾಟ ಮಾಡಲು ಮುಂದಾಗಿದ್ದ ರಾಜಸ್ಥಾನ ಮೂಲದ ಅಂತಾರಾಜ್ಯ ಗಾಂಜಾ ಮಾರಾಟಗಾರನನ್ನು ಬಂಧಿಸುವಲ್ಲಿ ಶಹರ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಹೇಳಿದರು.
ಇಂದು ಈ ಕುರಿತು ಮಾಧ್ಯಮಗೋಷ್ಟಿಯಲ್ಲಿ ವಿವರ ನೀಡಿದ ಅವರು, ರಾಜಸ್ಥಾನ ಮೂಲದ ವ್ಯಕ್ತಿಯೋರ್ವ ನಗರದ ರೈಲ್ವೆ ನಿಲ್ದಾಣ ಬಳಿಯಿರುವ ಖಾಸಗಿ ಹೋಟೆಲ್ ಬಳಿ ಮಾರಾಟ ಮಾಡಲು ಬರುತ್ತಿದ್ದಾನೆಂಬ ಖಚಿತ ಮಾಹಿತಿ ಮೇರೆಗೆ ಎಸಿಪಿ ದಕ್ಷಿಣ ಅವರ ನೇತೃತ್ವದಲ್ಲಿ ಶಹರ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಎಮ್.ಎಮ್. ತಹಶೀಲ್ದಾರ್, ಪಿಎಸ್ಐ ಮಾರುತಿ ಅವರನ್ನು ಒಳಗೊಂಡ ತಂಡ ಮಾಹಿತಿ ಬಂದ ಸ್ಥಳದ ಮೇಲೆ ದಾಳಿ ಮಾಡಿ ಬಂಧನ ಮಾಡಿದ್ದಾರೆ.
ರಾಜಸ್ಥಾನ ಮೂಲದ ಓಂಪ್ರಕಾಶ್ ವೀರಮಾರಾಮ ಬಾರಮೇರ ಎಂಬಾತನನ್ನು ಬಂಧಿಸಲಾಗಿದ್ದು, ಆತನಿಂದ 85,000 ರೂ. ಮೌಲ್ಯದ 888 ಗ್ರಾಂ ಗಾಂಜಾ, 9 ಲಕ್ಷ ರೂ. ಮೌಲ್ಯದ ಒಂದು ಕಾರು, 50,000 ರೂ. ಮೌಲ್ಯದ ಒಂದು ಐಫೋನ್, ವಿವಿಧ ಬ್ಯಾಂಕಿನ 30 ಎಟಿಎಂ, ವಿವಿಧ ಬ್ಯಾಂಕಿನ 36 ಚೆಕ್ ಬುಕ್, 4 ಪಾಸ್ ಬುಕ್, 9 ಪಾನ್ ಕಾರ್ಡ್, 7 ವಿವಿಧ ರಬ್ಬರ್ ಸ್ಟಾಂಪ್, 6 ಸ್ಟಾಪಿಂಗ್ ಮಷಿನ್ಗಳನ್ನು ಹಾಗೂ 96,50,000 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆಯಾಗಿ ಬಂಧಿತನಿಂದ 1,06,85,000 ರೂ. ಮೌಲ್ಯದ ಹಣ ಹಾಗೂ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.