ಬೆಂಗಳೂರು:ಭಾರತದ ಒಂದು ಕೋಟಿ ಮನೆಗಳ ಮಲ್ಛಾವಣಿಯಲ್ಲಿ ಸೋಲಾರ್ ಫಲಕಗಳನ್ನು ಅಳವಡಿಸುವ 'ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ'ಯನ್ನು ಜಾರಿಗೊಳಿಸಲಾಗಿದೆ. ದೇಶದ ಬಡ ಹಾಗೂ ಮಧ್ಯಮ ವರ್ಗದವರ ವಿದ್ಯುತ್ ಬಿಲ್ ಕಡಿಮೆಗೊಳಿಸುವ, ಅಂದರೆ ಉಚಿತ ವಿದ್ಯುತ್ ಒದಗಿಸುವ ಯೋಜನೆ ಇದಾಗಿದೆ. ಇದರಿಂದ ಮನೆಗಳಿಗೆ ಪ್ರತಿ ತಿಂಗಳು 300 ಯೂನಿಟ್ ವಿದ್ಯುತ್ ಉಚಿತವಾಗಿ ಸಿಗಲಿದೆ. ಇದೀಗ ರಾಜ್ಯದಲ್ಲಿ ಈ ಕುರಿತ ಪ್ರಚಾರಕ್ಕೆ ಇಂಧನ ಇಲಾಖೆ ಚಾಲನೆ ನೀಡಿದೆ.
ಸೂರ್ಯ ಘರ್ ಯೋಜನೆಯ ಹೊಸ ಮತ್ತು ನವೀಕರಿಸಬಹುದಾದದ ಇಂಧನ ಸಚಿವಾಲಯದ 'ಸೂರ್ಯ ರಥ ಯಾತ್ರೆ'ಗೆ ಹಸಿರು ನಿಶಾನೆ ನೀಡಿರುವ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರು, "ಯೋಜನೆ ಅನುಷ್ಠಾನಕ್ಕೆ ಆಸಕ್ತಿ ತೋರಿ ರಾಜ್ಯದಲ್ಲಿ ಈವರೆಗೆ 10 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಈ ಯೋಜನೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲು ಆಸಕ್ತಿ ಹೊಂದಿದ್ದು, ಅದಕ್ಕಾಗಿ ವ್ಯಾಪಕ ಪ್ರಚಾರ ಕೈಗೊಳ್ಳಲಾಗುತ್ತದೆ. ಕೇಂದ್ರ ಸರ್ಕಾರದ pmsuryaghar.gov.in ವೆಬ್‌ಸೈಟ್‌ನಲ್ಲಿ ರೂಫ್ ಟಾಪ್ ಸೋಲಾರ್ ವ್ಯವಸ್ಥೆಗೆ ಗೃಹ ಬಳಕೆದಾರರು ಅರ್ಜಿ ಸಲ್ಲಿಸಬಹುದು. ಯೋಜನೆ ಅನುಷ್ಠಾನಕ್ಕೆ ರಾಜ್ಯದಲ್ಲಿ 229 ಖಾಸಗಿ ಪೂರೈಕೆದಾರರು ನೋಂದಣಿ ಮಾಡಿಕೊಂಡಿದ್ದಾರೆ" ಎಂದು ಹೇಳಿದರು.
ಗ್ರಿಡ್ ಸಂಪರ್ಕದ ಲಾಭವೇನು?: ಮನೆಯ ರೂಫ್ ಟಾಪ್ ಸೋಲಾರ್ ವ್ಯವಸ್ಥೆಯನ್ನು ಗ್ರಿಡ್ ಜತೆಗೆ ಸಂಪರ್ಕಿಸುವುದರಿಂದ 25 ವರ್ಷಗಳ ಕಾಲ ವಿದ್ಯುತ್ ಬಿಲ್ ಪಾವತಿಸಬೇಕಿಲ್ಲ. ಮನೆಗಳ ಮೇಲ್ಛಾವಣೆಯಲ್ಲಿ ಅಳವಡಿಸುವುದರಿಂದ ಹೆಚ್ಚುವರಿ ಜಾಗದ ಅಗತ್ಯ ಇಲ್ಲ. ನಿರ್ವಹಣೆ ವೆಚ್ಚ ಕೂಡ ತೀರಾ ಕಡಿಮೆ. ಈ ಯೋಜನೆಯೂ 2 ಕಿಲೋ ವ್ಯಾಟ್ ಸಾಮರ್ಥ್ಯದವರೆಗಿನ ವ್ಯವಸ್ಥೆಗಳಿಗೆ ಸೌರ ಘಟಕದ ವೆಚ್ಚದ 60% ಮತ್ತು 2 ರಿಂದ 3 ಕಿಲೋ ವ್ಯಾಟ್ ಸಾಮರ್ಥ್ಯದ ನಡುವಿನ ವ್ಯವಸ್ಥೆಗಳಿಗೆ ಹೆಚ್ಚುವರಿ ಸಿಸ್ಟಮ್ ವೆಚ್ಚದ 40%ರಷ್ಟು ಸಹಾಯಧನ ಒದಗಿಸುತ್ತದೆ.