ಗಂಗಾವತಿ:ಕನಕಗಿರಿ ತಾಲೂಕಿನ ಬಂಕಾಪುರ ಗ್ರಾಮದಲ್ಲಿರುವ ತೋಳಧಾಮದಲ್ಲಿ ಅಪರೂಪದ ತೋಳವು (ಇಂಡಿಯನ್ ಗ್ರೇ ಉಲ್ಫ್) ಎಂಟು ಮರಿಗಳಿಗೆ ಜನ್ಮ ನೀಡಿದ್ದು, ಎಲ್ಲ ಮರಿಗಳು ಸುರಕ್ಷಿತವಾಗಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕನಕಗಿರಿ ತಾಲ್ಲೂಕಿನ ತೋಳಧಾಮದಲ್ಲಿ ಅಳಿವಿನಂಚಿನಲ್ಲಿರುವ ತೋಳಗಳು ಸ್ವಚ್ಛಂದವಾಗಿ ವಿಹರಿಸುತ್ತಿದ್ದು, ಇತ್ತೀಚೆಗೆ ಹೆಣ್ಣು ತೋಳವೊಂದು 8 ಮರಿಗಳಿಗೆ ಜನ್ಮ ನೀಡಿದೆ. ಎಲ್ಲವೂ ಆರೋಗ್ಯವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕರ್ನಾಟಕ ಅರಣ್ಯ ಇಲಾಖೆ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಫಲವಾಗಿ, ಕೊಪ್ಪಳ ಜಿಲ್ಲೆ ಬಂಕಾಪೂರದಲ್ಲಿ ತೋಳಗಳನ್ನು ಸಂರಕ್ಷಿಸಲಾಗುತ್ತಿದೆ. ಗಂಗಾವತಿ ಪ್ರಾದೇಶಿಕ ವಲಯದ ವ್ಯಾಪ್ತಿಯಲ್ಲಿ ಸುಮಾರು 332 ಹೆಕ್ಟೇರ್ ಪ್ರದೇಶದಲ್ಲಿರುವ ಬಂಕಾಪುರ ತೋಳ ಧಾಮವು ಕುರುಚಲು ಅರಣ್ಯದೊಳಗೆ ಗುಡ್ಡಗಳು, ಸ್ವಾಭಾವಿಕ ಗುಹೆಗಳನ್ನೂ ಹೊಂದಿದೆ.
ತೋಳ, ಚಿರತೆ, ನವಿಲು, ಕತ್ತೆಕಿರುಬ, ನರಿ, ಮೊಲ, ಮುಳ್ಳುಹಂದಿ ಮೊದಲಾದ ಹಲವು ವನ್ಯಜೀವಿಗಳ ತಾಣವಾಗಿದೆ. ಇಂಡಿಯನ್ ಗ್ರೇ ವೂಲ್ಫ್ ಎಂಬ ಪ್ರಭೇದದ ತೋಳಗಳು ಈ ಸಂರಕ್ಷಿತ ಪ್ರದೇಶದಲ್ಲಿದ್ದು, ಇತ್ತೀಚೆಗೆ ಒಂದು ತೋಳವು 8 ಮರಿಗಳಿಗೆ ಜನ್ಮ ನೀಡಿದೆ. ಇವುಗಳ ಪೈಕಿ ಸಾಮಾನ್ಯವಾಗಿ ಪ್ರತಿಶತ 50ರಷ್ಟು ಬದುಕುಳಿಯುವ ಸಾಧ್ಯತೆ ಇರುತ್ತದೆ. ಆದರೆ, ಎಲ್ಲ ತೋಳದ ಮರಿಗಳನ್ನೂ ಉಳಿಸಲು ಕ್ರಮವಹಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಬಂಕಾಪುರ ತೋಳ ವನ್ಯಧಾಮದಲ್ಲಿ ಈ 8 ಮರಿಗಳೂ ಸೇರಿ ಸುಮಾರು 35-40 ತೋಳಗಳಿವೆ. ಇವುಗಳ ಸುರಕ್ಷತೆಗೆ ಕ್ರಮ ವಹಿಸಲಾಗಿದೆ. ನವಜಾತ ತೋಳದ ಮರಿಗಳಿಗೆ ಜನರಿಂದ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.