ಬೆಂಗಳೂರು: ''ಭಾರತ ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ತನ್ನದೇ ಆದ ಫೌಂಡೇಷನ್ ಮಾಡೆಲ್ ನಿರ್ಮಿಸಲು ಸಾಧ್ಯವಿಲ್ಲ ಎನ್ನುವ ನಂದನ್ ನಿಲೇಕಣಿ ಅವರ ವಿಚಾರ ಸಂಪೂರ್ಣ ತಪ್ಪು'' ಎಂದು ಗೂಗಲ್ ಇಂಡಿಯಾ ರಿಸರ್ಚ್ ತಂಡದ ಮುಖ್ಯಸ್ಥ ಮನೀಶ್ ಗುಪ್ತಾ ತಿಳಿಸಿದರು.
ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ ಮೊದಲ ದಿನ ಆಯೋಜಿಸಿದ್ದ 'ಎಐ: ವಾಸ್ತವ ವರ್ಸಸ್ ಉತ್ಪ್ರೇಕ್ಷೆ' ಚರ್ಚಾಗೋಷ್ಠಿಯಲ್ಲಿ ಮಾತನಾಡಿ, ''ಸದ್ಯದ ಮಟ್ಟಿಗೆ ಎಐ ಕುರಿತು ನಾವು ನೋಡುತ್ತಿರುವುದೆಲ್ಲವೂ ಸತ್ಯವಲ್ಲ. ಅದರಲ್ಲಿ ಸಾಕಷ್ಟು ಊಹಾಪೋಹ, ತಪ್ಪು ಕಲ್ಪನೆ ಹಾಗೂ ಉತ್ಪ್ರೇಕ್ಷೆ ಅಡಗಿದೆ. ಆದರೆ, ಮುಂದಿನ ದಿನಗಳಲ್ಲಿ ಇವೆಲ್ಲವೂ ನಿಜವಾಗುವುದು ಖಚಿತ'' ಎಂದರು.
ಗೂಗಲ್ ಇಂಡಿಯಾ ರಿಸರ್ಚ್ ತಂಡ ವಿಶ್ವದಲ್ಲೇ ಅತ್ಯುತ್ತಮ:''ಎಐ ಅಭಿವೃದ್ಧಿ ವಿಚಾರದಲ್ಲಿ ಭಾರತದ ಸಾಮರ್ಥ್ಯದ ಬಗ್ಗೆ ಸಾಕಷ್ಟು ಜನರಿಗೆ ಅನುಮಾನಗಳಿವೆ. ನಂದನ್ ನಿಲೇಕಣಿ ಅವರು ಭಾರತದಲ್ಲಿ ಎಐ ಕುರಿತು ಮಾತನಾಡುತ್ತಾ, ಭಾರತದಲ್ಲಿ ಎಂದಿಗೂ ಫೌಂಡೇಷನ್ ಲೆವೆಲ್ ಎಐಗಳನ್ನು ರೂಪಿಸಲು ಸಾಧ್ಯವಿಲ್ಲ. ನಾವು ಈಗಾಗಲೇ ರೂಪುಗೊಂಡಿರುವ ಫೌಂಡೇಷನಲ್ ಮಾಡೆಲ್‌ಗಳನ್ನು ಬಳಸಿಕೊಂಡು ಸೀಮಿತ ಬಳಕೆಯ ಮಾದರಿಗಳನ್ನು ಸೃಷ್ಟಿಸುವ ಕಡೆಗೆ ಗಮನ ಹರಿಸಬೇಕಿದೆ ಎಂದಿದ್ದಾರೆ. ಇದನ್ನು ನಾನು ಒಪ್ಪುವುದಿಲ್ಲ. ಗೂಗಲ್‌ನ ಇಂಡಿಯಾ ರಿಸರ್ಚ್ ತಂಡ ವಿಶ್ವದಲ್ಲೇ ಅತ್ಯುತ್ತಮವಾಗಿದೆ. ಅಲ್ಲಿ ನಡೆಯುತ್ತಿರುವ ಸಂಶೋಧನೆಗಳು ಅಭೂತಪೂರ್ವವಾಗಿವೆ. ಭಾರತ ತನ್ನದೇ ಸ್ವಂತ ಫೌಂಡೇಷನಲ್ ಮಾಡೆಲ್‌ಗಳನ್ನು ಸೃಷ್ಟಿಸಲು ಶಕ್ತವಾಗಿದೆ'' ಎಂದು ಪ್ರತಿಪಾದಿಸಿದರು.