ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಇಂಡಿಯಾ ಒಕ್ಕೂಟದಿಂದ ಒಗ್ಗಟ್ಟಾಗಿ ಬಿಜೆಪಿ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು. ಕೆಪಿಸಿಸಿ ಕಚೇರಿಯಲ್ಲಿ ಇಂದು ಇಂಡಿಯಾ ಮೈತ್ರಿಕೂಟದ ಅಂಗಪಕ್ಷಗಳ ಕರ್ನಾಟಕ ಘಟಕದ ಮುಖಂಡರ ಜತೆ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ ಇಂಡಿಯಾ ಒಕ್ಕೂಟ ಜನ್ಮ ತಾಳಿತು. ಜನ ಬದಲಾವಣೆ ನಿರೀಕ್ಷೆ ಮಾಡುತ್ತಿದ್ದಾರೆ. ಜನ ನಮ್ಮ ಮೇಲಿನ ನಂಬಿಕೆ ಉಳಿಸಲು 10 ಪ್ರಮುಖ ಪಕ್ಷಗಳು ಚರ್ಚೆ ಮಾಡಿದ್ದೇವೆ. ಅವರ ಸಂಖ್ಯೆ ಮುಖ್ಯವಲ್ಲ. ಅವರದೇ ಆದ ಸಿದ್ಧಾಂತ ನಂಬಿಕೊಂಡು ಪಕ್ಷ ನಡೆಸುತ್ತಿದ್ದಾರೆ ಎಂದರು.
ಎನ್ಡಿಎ ಸೋಲಿಸಬೇಕು ಎಂಬ ಉದ್ದೇಶದೊಂದಿಗೆ ಒಗ್ಗಟ್ಟಾಗಿ ಹೋರಾಟ ಮಾಡಲು ತೀರ್ಮಾನಿಸಿದ್ದೇವೆ. ಚುನಾವಣಾ ಬಾಂಡ್ನಲ್ಲಿ ಬಂದ ತೀರ್ಪು, ತನಿಖಾ ಸಂಸ್ಥೆಗಳ ದುರ್ಬಳಕೆ ಎಲ್ಲದರ ಬಗ್ಗೆ ಚರ್ಚಿಸಿ ಖಂಡಿಸಿದ್ದೇವೆ. ಒಗ್ಗಟ್ಟಿನಿಂದ ಚುನಾವಣೆಯನ್ನು ಎದುರಿಸಲು ನಿರ್ಧರಿಸಿದ್ದೇವೆ. ಬೂತ್ ನಿಂದ ಹಿಡಿದು ರಾಜ್ಯದಲ್ಲಿ ಒಟ್ಟಾಗಿ ಹೋರಾಟ ಮಾಡುತ್ತೇವೆ. ಕೋಮುವಾದಿ ಸರ್ವಾಧಿಕಾರ ವರ್ಸಸ್ ಪ್ರಜಾಪ್ರಭುತ್ವ. ಇದು ನಮ್ಮ ಲೀಡ್ ಲೈನ್ ಆಗಿರಲಿದೆ. 28ಕ್ಕೆ 28 ಸ್ಥಾನವನ್ನೂ ನಾವು ಗೆಲ್ಲುತ್ತೇವೆ ಎಂದು ಇಂಡಿಯಾ ಒಕ್ಕೂಟದ ಪ್ರತಿನಿಧಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ, ದೇಶ ಇಕ್ಕಟ್ಟು ಹಾಗೂ ಬಿಕ್ಕಟ್ಟಿನಲ್ಲಿ ಸಿಲುಕಿದೆ. 10 ವರ್ಷ ಬಿಜೆಪಿ ಆಡಳಿತದ ವೈಖರಿ ನೋಡಿದರೆ ಭಯದ ವಾತಾವರಣ ಇದೆ. ಹೀಗಾಗಿ ನಾವು ಈ ಬಾರಿ ಒಗ್ಗಟ್ಟಿನಿಂದ ಹೋರಾಟ ಮಾಡುತ್ತೇವೆ. ಕೇಜ್ರಿವಾಲ್‌ರನ್ನು ಬಂಧನ ಮಾಡಿದ್ದಾರೆ. ಬಂಧನ ಆಗಿರುವುದು ಪ್ರಜಾಪ್ರಭುತ್ವ, ಫ್ರೀಜ್ ಆಗಿರುವುದು ಸಂವಿಧಾನ. ರಾಜಕೀಯ ದ್ವೇಷ, ಪಿತೂರಿ ನಡೆಯುತ್ತಿದೆ. ರಾಮಮಂದಿರ ಮೂಲಕ ಆಧ್ಯಾತ್ಮಿಕ ಸರ್ವಾಧಿಕಾರಿ ವರ್ತನೆ ತೋರುತ್ತಿದ್ದಾರೆ ಎಂದು ಕಿಡಿಕಾರಿದರು.