ಬೆಂಗಳೂರು:ಸ್ಟೈಫಂಡ್ ಹೆಚ್ಚಿಸುವಂತೆ ಆಗ್ರಹಿಸಿ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕರ್ನಾಟಕ ನಿವಾಸಿ ವೈದ್ಯರ ಸಂಘ ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭಿಸಿದ್ದು, ಇಂದೂ ಮುಂದುವರೆಯಿತು.
ಸಂಘದ 600ಕ್ಕೂ ಹೆಚ್ಚು ವಿದ್ಯಾರ್ಥಿಗಳ ಎರಡನೇ ದಿನದ ಪ್ರತಿಭಟನೆಯಲ್ಲಿ ಭಾಗವಹಿಸಿದ ನಂತರ ಮಾತನಾಡಿದ ಸಂಘದ ಅಧ್ಯಕ್ಷ ಡಾ.ಸಿರೀಶ್ ಶಿವರಾಮಯ್ಯ, ಪ್ರತಿನಿತ್ಯ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮುಷ್ಕರ ನಡೆಯುತ್ತಿದೆ. ನಮ್ಮ ಬೇಡಿಕೆ ಈಡೇರುವವರೆಗೂ ರಾಜ್ಯಾದ್ಯಂತ ಮುಷ್ಕರ ನಡೆಸುತ್ತೇವೆ ಎಂದು ಹೇಳಿದರು.
ಸದ್ಯಕ್ಕೆ ನಮ್ಮ ಪ್ರತಿಭಟನೆಯಿಂದ ರೋಗಿಗಳಿಗೆ ಯಾವುದೇ ತೊಂದರೆಯಾಗಿಲ್ಲ. ಮುಂದಿನ ದಿನಗಳಲ್ಲಾಗುವ ಸೇವೆಯಲ್ಲಿನ ವ್ಯತ್ಯಯಕ್ಕೆ ನಾವು ಜವಾಬ್ದಾರರಲ್ಲ. ಸರ್ಕಾರ ಕೂಡಲೇ ನಮ್ಮ ಮನವಿಗೆ ಸ್ಪಂದಿಸುವ ಭರವಸೆ ಇದೆ ಎಂದರು.
ಕರ್ನಾಟಕದ ನಿವಾಸಿ ವೈದ್ಯರು ದೇಶದಲ್ಲೇ ಅತ್ಯಂತ ಕಡಿಮೆ ಸ್ಟೈಫಂಡ್ ಪಡೆಯುತ್ತಿದ್ದಾರೆ. ಆದರೆ, ಶಿಕ್ಷಣದ ಶುಲ್ಕ ಅತ್ಯಧಿಕವಾಗಿದೆ. ನಮ್ಮ ಬೇಡಿಕೆಗಳು ಕೇವಲ ಉತ್ತಮ ವೇತನಕ್ಕಾಗಿ ಅಲ್ಲ. ರೆಸಿಡೆಂಟ್ ವೈದ್ಯರು ಆರೋಗ್ಯ ವ್ಯವಸ್ಥೆಯಲ್ಲಿ ವಹಿಸುವ ನಿರ್ಣಾಯಕ ಪಾತ್ರವನ್ನು ಗುರುತಿಸಬೇಕೆಂಬುದು ನಮ್ಮ ಒತ್ತಾಯ. ನಾವು ಆಸ್ಪತ್ರೆಗಳ ಬೆನ್ನೆಲುಬು. ಅಗತ್ಯ ಆರೈಕೆ ಒದಗಿಸುತ್ತೇವೆ. ಜನರ ಸೇವೆ ಮಾಡಲು ಬಂದಿದ್ದೇವೆ. ನ್ಯಾಯಯುತವಾಗಿ ಸ್ಟೈಫಂಡ್ ನೀಡುವವರೆಗೂ ಪ್ರತಿಭಟನೆ ಮುಂದುವರಿಸಲಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ:ವೈದ್ಯೆ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಕೇಸ್: ಬೇಡಿಕೆಗಳಿಗೆ ಕೇಂದ್ರ ಸಚಿವರ ಒಪ್ಪಿಗೆ, ಮುಷ್ಕರ ಹಿಂಪಡೆದ ಫೋರ್ಡಾ - Kolkata Doctor Rape Murder Case