ದಾವಣಗೆರೆ : ಹಳೇ ಕುಂದುವಾಡದಲ್ಲಿ ಶಿಥಿಲಗೊಂಡಿದ್ದ ದೇವಾಲಯಗಳಿಗೆ ಈಗ ಜೀವಕಳೆ ಬಂದಿದೆ. ದೇಣಿಗೆ ಎತ್ತಿ ಗ್ರಾಮಸ್ಥರು ಐದು ಕೋಟಿ ರೂಪಾಯಿ ವೆಚ್ಚದಲ್ಲಿ ಎರಡು ದೇವಾಲಯಗಳನ್ನು ಕಲ್ಲಿನಲ್ಲಿ ನಿರ್ಮಾಣ ಮಾಡಿದ್ದಾರೆ. ಅಯೋಧ್ಯೆಯ ಬಾಲ ರಾಮನ ಮೂರ್ತಿ ಕೆತ್ತಿದ್ದ ಅರುಣ್ ಯೋಗಿರಾಜ್ ಅವರೇ ಥೇಟ್ ಬಾಲರಾಮನ ಮಾದರಿಯಲ್ಲೇ ವಾಯುಪುತ್ರನ ವಿಗ್ರಹವನ್ನು ಕೆತ್ತನೆ ಮಾಡಿದ್ದಾರೆ.
ಅಯೋಧ್ಯೆಯ ಬಾಲರಾಮನ ವಿಗ್ರಹ ಇಡೀ ದೇಶದಲ್ಲಿ ಗಮನ ಸೆಳೆದಿತ್ತು. ಈ ಕೈಚಳಕದ ಹಿಂದೆ ನಮ್ಮ ಸಾಂಸ್ಕೃತಿಕ ನಗರಿ ಮೈಸೂರಿನ ಅರುಣ್ ಯೋಗಿರಾಜ್ ಅವರು ಇದ್ದಿದ್ದು ಕರ್ನಾಟಕಕ್ಕೆ ಹೆಮ್ಮೆಯ ಸಂಗತಿಯಾಗಿತ್ತು. ಹೀಗೆ ಶಿಲ್ಪಿ ಅರುಣ್ ಯೋಗಿರಾಜ್ ಅವರ ಕೈಯಲ್ಲಿ ಮತ್ತೊಂದು ವಿಗ್ರಹ ಅರಳಿದ್ದು, ಕಣ್ಮನ ಸೆಳೆಯುವಂತಿದೆ. ಈಗಾಗಲೇ ಕುಂದವಾಡಕ್ಕೆ ವಿಗ್ರಹ ಆಗಮಿಸಿದೆ.
ಅಯೋಧ್ಯೆ ಬಾಲ ರಾಮನಂತೆ ಸಿದ್ಧವಾಯ್ತು ಆಂಜನೇಯನ ವಿಗ್ರಹ : ಪ್ರಾಣ ಪ್ರತಿಷ್ಠಾಪನೆಗಾಗಿ ಗ್ರಾಮದಲ್ಲಿ 41 ದಿನ ಮದ್ಯ, ಮಾಂಸ ನಿಷೇಧ (ETV Bharat) ಶ್ರೀ ಬಸವ ಆಂಜನೇಯ ಅಭಿವೃದ್ಧಿ ಸಮಿತಿ, ಗ್ರಾಮಸ್ಥರು, ದಾನಿಗಳಿಂದ ದೇಣಿಗೆ ಪಡೆದು, ಸುಮಾರು ಐದೂವರೆ ಕೋಟಿ ರೂ. ವೆಚ್ಚದಲ್ಲಿ ಗ್ರಾಮದ ಮುಖಂಡರು, ಯುವಕರ ಸತತ ಪರಿಶ್ರಮದಿಂದ ಶ್ರೀ ಆಂಜನೇಯ, ಶ್ರೀ ಬಸವೇಶ್ವರ ದೇವಸ್ಥಾನಗಳು ನಿರ್ಮಾಣಗೊಂಡಿವೆ. ಈ ಭವ್ಯ ದೇವಸ್ಥಾನ ಉದ್ಘಾಟನೆಗೆ ಸಿದ್ಧವಾಗಿದ್ದು ಇದೇ 17ರಂದು ವಿರಾಜಮಾನವಾಗಲಿದೆ. ವಿಶಾಲ ಆವರಣ ಹೊಂದಿರುವ ದೇವಸ್ಥಾನವನ್ನು ಸಂಪೂರ್ಣವಾಗಿ ಶಿಲೆಯಲ್ಲೇ ನಿರ್ಮಿಸಲಾಗಿದೆ. ಎರಡು ದೇಗುಲಗಳನ್ನು ಶಿಲ್ಪಿಗಳಾದ ತಮಿಳುನಾಡಿನ ಎಸ್. ವಡಿವೇಲು, ಕೆ.ಆರ್. ಮಾರಿಯಪ್ಪನ್ ಕಟ್ಟಿದ್ದಾರೆ.
ಅಯೋಧ್ಯೆ ರಾಮನ ಮಾದರಿಯಲ್ಲೇ ಹನುಮನ ವಿಗ್ರಹ (ETV Bharat) ಐದು ದಿನ ಮನೆಯಲ್ಲಿ ಅಡುಗೆ ಮಾಡುವಂತಿಲ್ಲ :ಫೆ.16-17ರಂದು ದೇವಸ್ಥಾನಗಳು ಅದ್ಧೂರಿಯಾಗಿ ಉದ್ಘಾಟನೆಗೆ ಸಿದ್ಧವಾಗಿವೆ. ಐದು ದಿನಗಳ ಕಾಲ ಮನೆಯಲ್ಲಿ ಯಾರೂ ಅಡುಗೆ ಮಾಡುವಂತಿಲ್ಲ. ಇಡೀ ಗ್ರಾಮಸ್ಥರಿಗೆ, ಭಕ್ತರಿಗೆ ಐದು ದಿನ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಆಂಧ್ರಪ್ರದೇಶದ ತಿರುಪತಿ ದೇವಸ್ಥಾನ ಹಾಗೂ ಪೂರ್ವ ಗೋಧಾವರಿಯ ಪಂಡಿತರಿಂದ ದೇವ ಯಜ್ಞ, ವಿವಿಧ ಹೋಮಗಳ ಮೂಲಕ ದೇವರ ಪ್ರಾಣ ಪ್ರತಿಷ್ಠಾಪನೆ ಜರುಗಲಿದೆ. ಫೆ. 17 ರಂದು ಚಿತ್ತ ನಕ್ಷತ್ರದ ಶುಭ ಮೂಹರ್ತದಲ್ಲಿ ಬೆ. 10.46 ನಿಮಿಷಕ್ಕೆ ಪ್ರಾಣಪ್ರತಿಷ್ಠಾಪನೆ ಮಾಡಲಾಗುತ್ತದೆ. ಗ್ರಾಮಸ್ಥರು 41 ದಿನಗಳ ಕಾಲ ಮದ್ಯ, ಮಾಂಸ ಭಕ್ಷಣೆಗೆ ನಿರ್ಬಂಧವನ್ನು ಸ್ವಯಂ ವಿಧಿಸಿಕೊಂಡಿದ್ದಾರೆ ಎಂದು ಶ್ರೀನಿವಾಸ್ ಶರ್ಮ ತಿಳಿಸಿದರು.
ಶ್ರೀ ಬಸವೇಶ್ವರ ದೇವಸ್ಥಾನ (ETV Bharat) 41 ದಿನ ಮದ್ಯ, ಮಾಂಸ ಸೇವನೆ ನಿಷೇಧ :ದೇವಾಲಯ ಸಮಿತಿಯ ಅಧ್ಯಕ್ಷ ಗಣೇಶಪ್ಪ ಪ್ರತಿಕ್ರಿಯಿಸಿ,ಗ್ರಾಮದಲ್ಲಿ 41 ದಿನಗಳ ಕಾಲ ಮದ್ಯ, ಮಾಂಸ ಮಾರಾಟ, ಸೇವನೆಗೆ ಸ್ವತಃ ಗ್ರಾಮಸ್ಥರೇ ಸಂಪೂರ್ಣವಾಗಿ ನಿಷೇಧ ಹೇರಿಕೊಂಡಿದ್ದಾರೆ. ಇದನ್ನು ಕಟ್ಟುನಿಟ್ಟಿನಿಂದ ಪಾಲನೆ ಮಾಡಲಾಗುತ್ತಿದೆ. 17ರಂದು ಬೆಳಗ್ಗೆ 11ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು, ಸಿರಿಗೆರೆಯ ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳು, ಕಾಗಿನೆಲೆ ಮಹಾಸಂಸ್ಥಾನ ಶ್ರೀ ಕನಕ ಗುರುಪೀಠದ ನಿರಂಜನಾನಂದಪುರಿ ಶ್ರೀಗಳು ಸಾನಿಧ್ಯ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:ಭಕ್ತರನ್ನ ಕೈಬೀಸಿ ಕರೆಯುತ್ತಿದೆ ಹುಬ್ಬಳ್ಳಿಯ ಶಿವಶಕ್ತಿಧಾಮ ; ಒಂದೇ ಕಡೆ ಹಲವು ದೇವರ ದರ್ಶನ ಭಾಗ್ಯ