ಕೊಡಗು: ಕೊಡವ ಕುಟುಂಬಗಳ ನಡುವಿನ 24ನೇ ವರ್ಷದ ಪ್ರತಿಷ್ಠಿತ ಕುಂಡ್ಯೋಳಂಡ ಹಾಕಿ ಹಬ್ಬಕ್ಕೆ ಶನಿವಾರ ಚಾಲನೆ ನೀಡಲಾಯಿತು. ಪಾಂಡಂಡ ಕುಟ್ಟಣ್ಣಿ ಹಾಗೂ ಅವರ ಸಹೋದರ ಕಾಶಿ ಅವರು ಹಾಕಿ ಉತ್ಸವಕ್ಕೆ ಚಾಲನೆ ನೀಡಿದರು. ಕೂರ್ಗ್ 11 ಇಂಡಿಯನ್ ನೇವಿ ಮೈದಾನದಲ್ಲಿ ಉದ್ಘಾಟನಾ ಪಂದ್ಯವನ್ನು ಆಯೋಜಿಸಲಾಯಿತು. ಇಂದಿನಿಂದ ಏಪ್ರಿಲ್ 28ರವರೆಗೆ ನಾಪೋಕ್ಲುವಿನ ಕೆಪಿಎಸ್ ಶಾಲೆಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಪಂದ್ಯಾಟ ನಡೆಯಲಿದ್ದು, ಈ ಬಾರಿ 360 ಕೊಡವ ಕೌಟುಂಬಿಕ ತಂಡಗಳು ಭಾಗವಹಿಸಲಿವೆ.
ಏಕಕಾಲಕ್ಕೆ 30 ಸಾವಿರ ಮಂದಿ ಆಸೀನರಾಗಿ ಪಂದ್ಯಾಟ ವೀಕ್ಷಿಸಲು ಅನುಕೂಲವಾಗುವಂತೆ ಮೈದಾನದ ಸುತ್ತಲೂ ಗ್ಯಾಲರಿ ನಿರ್ಮಾಣವಾಗಿದೆ. ಗಣ್ಯಾತಿಗಣ್ಯರಿಗೆ ಪ್ರತ್ಯೇಕ ಆಸನ ವ್ಯವಸ್ಥೆಗಳಿದ್ದು, ಒಟ್ಟು 3 ಮೈದಾನಗಳನ್ನು ಹಾಕಿ ಪಂದ್ಯಾವಳಿಗೆ ಸಿದ್ಧ ಮಾಡಲಾಗಿದೆ. ಅಂತಾರಾಷ್ಟ್ರೀಯ ಗುಣಮಟ್ಟದ ಮಾದರಿಯಲ್ಲಿ ಮೈದಾನವನ್ನು ಸಿದ್ಧಗೊಳಿಸಲಾಗಿದೆ. ಮೈದಾನದಲ್ಲಿ ಚೆಂಡು ಮತ್ತು ಆಟಗಾರರ ನಡುವೆ ಸಮತೋಲನ ಕಾಪಾಡುವ ಸಲುವಾಗಿ ಮೈದಾನವನ್ನು ನುಣುಪಾಗಿಸಲು ನೀರನ್ನು ಹರಿಸಲಾಗುತ್ತಿದೆ.
ಪ್ರತಿ ಮೈದಾನದಲ್ಲಿ 6 ಪಂದ್ಯಗಳಂತೆ 1 ದಿನಕ್ಕೆ 18 ಪಂದ್ಯಗಳು ನಡೆಯಲಿವೆ. 10 ದಿನಗಳ ಬಳಿಕ 2 ಮೈದಾನ, ಫ್ರೀ ಕ್ವಾಟರ್ ಹಂತದ ಬಳಿಕ 1ನೇ ಮೈದಾನದಲ್ಲಿ ಹಾಕಿ ಕ್ರೀಡಾಕೂಟಗಳು ನಡೆಯಲಿವೆ. ಈ ಬಾರಿ 360 ತಂಡಗಳು ನೋಂದಣಿ ಮಾಡಿಕೊಂಡಿದ್ದು, ಈ ಕ್ರೀಡಾಕೂಟವನ್ನು ಗಿನ್ನೆಸ್ ದಾಖಲೆಗೆ ಸೇರಿಸುವ ಆಶಯವನ್ನು ಕುಂಡ್ಯೋಳಂಡ ಕುಟುಂಬಸ್ಥರು ವ್ಯಕ್ತಪಡಿಸಿದ್ದಾರೆ. ಈ ಹಿಂದಿನಂತೆ ಹಲವು ತಂಡಗಳಲ್ಲಿ ಮಕ್ಕಳು, ಮಹಿಳಾ ಹಾಕಿಪಟುಗಳ ಸಹಿತ ಹಿರಿಯ ನಾಗರಿಕ ಆಟಗಾರರು ಕೂಡ ಮೈದಾನದಲ್ಲಿ ತಮ್ಮ ಕ್ರೀಡಾ ಸ್ಫೂರ್ತಿ ಪ್ರದರ್ಶಿಸಲಿದ್ದಾರೆ.