ಬೆಂಗಳೂರು:ಹೆಚ್ಚುತ್ತಿರುವ ಸೈಬರ್ ಅಪರಾಧವನ್ನು ನಿಯಂತ್ರಿಸಲು ರಾಜ್ಯ ಸರ್ಕಾರ 'ಕರ್ನಾಟಕ ಸೈಬರ್ ಸೆಕ್ಯುರಿಟಿ ಪಾಲಿಸಿ-2024' ಜಾರಿಗೆ ತಂದಿದೆ. ಸೈಬರ್ ಸೆಕ್ಯುರಿಟಿ ನೀತಿಯ ಜೊತೆಗೆ ಸಿಸ್ಕೋ(CISCO) ಸಹಯೋಗದೊಂದಿಗೆ 'ಸೈಬರ್ ಸೆಕ್ಯುರಿಟಿ ' ಕೌಶಲ್ಯ ತರಬೇತಿ ಕಾರ್ಯಕ್ರಮವನ್ನೂ ಪ್ರಾರಂಭಿಸಿದೆ.
ಇಲ್ಲಿನ ವಿಕಾಸಸೌಧದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಸೈಬರ್ ಸೆಕ್ಯುರಿಟಿ ಪಾಲಿಸಿಯನ್ನು ಬಿಡುಗಡೆ ಮಾಡಿದರು.
ಸರ್ಕಾರಿ- ಖಾಸಗಿ ಪಾಲುದಾರಿಕೆ:ನಂತರ ಮಾತನಾಡಿದ ಸಚಿವರು, ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಮತ್ತು ಎಸ್ & ಟಿ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಇ-ಆಡಳಿತ), ಗೃಹ ಇಲಾಖೆ ಹಾಗೂ ಸರ್ಕಾರಿ ಮತ್ತು ಖಾಸಗಿ ವಲಯದ ಎಲ್ಲಾ ಸಂಬಂಧಿತ ಪಾಲುದಾರರೊಂದಿಗೆ ಸಮಾಲೋಚಿಸಿ ಈ ನೀತಿಯನ್ನು ಜಂಟಿಯಾಗಿ ರಚಿಸಲಾಗಿದೆ. ಈ ನೀತಿಯನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಪರಿಶೀಲಿಸಿದೆ. ಕೆ-ಟೆಕ್ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಸೈಬರ್ ಸೆಕ್ಯುರಿಟಿ (CYSECK) ಕೇಂದ್ರವು ಕೂಡ ನೀತಿಯ ಭಾಗವಾಗಿದೆ ಎಂದರು.
ಸಾರ್ವಜನಿಕ, ಶೈಕ್ಷಣಿಕ, ಉದ್ಯಮ, ಸ್ಟಾರ್ಟ್ಆಪ್ ಮೇಲೆ ನಿಗಾ ವಹಿಸಿದರೆ, ಐಟಿ ಸ್ವತ್ತುಗಳು ಸೇರಿದಂತೆ ಸಮಾಜದ ಎಲ್ಲಾ ವಿಭಾಗಗಳಲ್ಲಿ ಬಲವಾದ ಸೈಬರ್ ಭದ್ರತಾ ಪರಿಸರ ವ್ಯವಸ್ಥೆಯನ್ನು ಒದಗಿಸುತ್ತದೆ. ಈ ನೀತಿಯು ಎರಡು ಭಾಗಗಳನ್ನು ಹೊಂದಿದೆ. ಮೊದಲ ಭಾಗವು ಸಾರ್ವಜನಿಕ ಕ್ಷೇತ್ರದಲ್ಲಿದ್ದರೆ, ಎರಡನೇ ಭಾಗವು ರಾಜ್ಯದ ಐಟಿ ತಂಡ ಮತ್ತು ಇಲಾಖೆಗಳಲ್ಲಿ ಐಟಿ ಅನುಷ್ಠಾನಗಳ ಕುರಿತು ಕೇಂದ್ರಿಕೃತವಾಗಿರುತ್ತದೆ. ಈ ನೀತಿಯನ್ನು 5 ವರ್ಷಗಳವರೆಗೆ ಅನುಷ್ಠಾನಕ್ಕಾಗಿ 103.87 ಕೋಟಿ ರೂಪಾಯಿ ಅನುದಾನ ಇದೆ ಎಂದು ತಿಳಿಸಿದರು.
ಉದ್ಯೋಗವಾಕಾಶ ಹೆಚ್ಚಳ:ಸಿಸ್ಕೋ ಜೊತೆಗಿನ ಈ ಪಾಲುದಾರಿಕೆಯು ಸುರಕ್ಷಿತ ಡಿಜಿಟಲ್ ಪರಿಸರವನ್ನು ಬೆಳೆಸುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ. ಮಹಿಳೆಯರ ಸಬಲೀಕರಣಕ್ಕೆ ವಿಶೇಷ ಒತ್ತು ನೀಡುವ ಮೂಲಕ 40,000 ಜನರಿಗೆ ತರಬೇತಿ ನೀಡುವ ಮೂಲಕ ಟೆಕ್ ವಲಯದಲ್ಲಿ ಉದ್ಯೋಗವಕಾಶವನ್ನು ಹೆಚ್ಚಿಸಲಿದ್ದೇವೆ ಎಂದು ಹೇಳಿದರು.