ಮಂಗಳೂರು: "ಈ ಬಾರಿಯೂ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಕಲಚೇತನರಿಗೆ (ಶೇ. 40ಕ್ಕಿಂತ ಹೆಚ್ಚಿನ ವಿಕಲಚೇತನರಿಗೆ) ಮನೆಯಿಂದಲೇ ಮತದಾನ ಮಾಡುವ ಅವಕಾಶವಿದೆ. ಮನೆಯಿಂದ ಮತದಾನ ಆಯ್ದುಕೊಂಡರೆ ಮತಗಟ್ಟೆಯಲ್ಲಿ ಅವಕಾಶ ಸಿಗದು" ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.
ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರೀತಿ ಮತದಾನ ಮಾಡಲು ಆಯ್ದುಕೊಂಡಲ್ಲಿ ಅವರ ಮನೆಗಳಿಗೆ ಸಂಬಂಧಪಟ್ಟ ಚುನಾವಣಾ ಅಧಿಕಾರಿ ಹಾಗೂ ಸಿಬ್ಬಂದಿ ಎರಡು ಬಾರಿ ಭೇಟಿ ನೀಡಿ ಮತದಾನ ಪ್ರಕ್ರಿಯೆ ನಡೆಸಲಿದ್ದಾರೆ. ಈ ರೀತಿ ಮನೆಯಿಂದಲೇ ಮತದಾನ ಆಯ್ಕೆ ಮಾಡುವವರಿಗೆ ನಿಗದಿತ ದಿನಾಂಕವನ್ನು ನೀಡಲಾಗುತ್ತದೆ. ಆ ರೀತಿ ಎರಡು ಸಂದರ್ಭಗಳಲ್ಲಿ ಮತದಾರರು ಲಭ್ಯವಿಲ್ಲದಿದ್ದರೆ ಅವರು ಮತ್ತೆ ಮತಗಟ್ಟೆಗೆ ಬಂದು ಮತದಾನ ಪಡೆಯುವ ಅರ್ಹತೆ ಹೊಂದಿರುವುದಿಲ್ಲ" ಎಂದು ಹೇಳಿದರು.
'ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದ ವೇಳಾಪಟ್ಟಿಯಂತೆ 2024ನೇ ಸಾಲಿನ ಲೋಕಸಭಾ ಚುನಾವಣೆಗೆ ದ.ಕ. ಜಿಲ್ಲೆಯಲ್ಲಿ ಮಾ.28 ರಿಂದ ಏಪ್ರಿಲ್ 4 ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಮಾರ್ಚ್ 29 ಹಾಗೂ 31ರಂದು ಸರಕಾರಿ ರಜಾ ದಿನ ಆಗಿರುವ ಕಾರಣ ಆ ದಿನಗಳಂದು ನಾಮಪತ್ರ ಸಲ್ಲಿಸಲು ಅವಕಾಶವಿಲ್ಲ. ಉಳಿದ ದಿನಗಳಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಜಿಲ್ಲಾಧಿಕಾರಿ ಕಚೇರಿಯ ಮೂರನೇ ಮಹಡಿಯ ಕೋರ್ಟ್ ಹಾಲ್‌ನಲ್ಲಿ ನಾಮಪತ್ರ ಸಲ್ಲಿಕೆಗೆ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ಚುನಾವಣಾಧಿಕಾರಿ (ಆರ್ಒ) ಅಥವಾ ಎಆರ್ಒ (ಅಪರ ಜಿಲ್ಲಾಧಿಕಾರಿ)ಗೆ ನಾಮಪತ್ರ ಸಲ್ಲಿಸಬಹುದು" ಎಂದರು.