ಗಂಗಾವತಿ:''ಶೋಷಿತರು, ದಲಿತರ ಬಗ್ಗೆ ನೈಜ ಕಾಳಜಿಯಿದ್ದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಂತೆ ಎಸ್‌ಸಿಪಿ– ಎಸ್‌ಟಿಪಿ ಯೋಜನೆ ಜಾರಿಗೆ ತಂದು ಆಯಾ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಹಂಚಿಕೆ ಮಾಡಲಿ'' ಎಂದು ಸಿಎಂ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿಗೆ ಸವಾಲು ಹಾಕಿದರು.
ನಗರದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಕಾಂಗ್ರೆಸ್ ಸಮಾವೇಶ ಉದ್ಘಾಟಿಸಿ ಮಾತನಾಡಿ, ''ದೇಶದ ಎಲ್ಲ ವರ್ಗದ ಜನರ ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆಯ ಉದ್ದೇಶ ಇರಿಸಿಕೊಂಡಿರುವ ಸರ್ಕಾರ ಮಾತ್ರ ಅಧಿಕಾರದಲ್ಲಿರಬೇಕು. ಆದರೆ, ಕೇಂದ್ರದ ಮೋದಿ ಸರ್ಕಾರ, ಶೋಷಿತರು, ದಲಿತರು, ಕೃಷಿಕರು, ಶ್ರಮಿಕರು, ಕಾರ್ಮಿಕರು, ರೈತರು ಹಾಗೂ ಮಹಿಳಾ ವಿರೋಧಿಯಾಗಿದೆ. ಈ ಸರ್ಕಾರ ಬದಲಾವಣೆಯಾಗದೇ ಹೋದಲ್ಲಿ ಸಾಮಾಜಿಕ ಅಸಮಾನತೆ ಹೆಚ್ಚಾಗಲಿದೆ'' ಎಂದು ಆತಂಕ ವ್ಯಕ್ತಪಡಿಸಿದರು.
''ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಮೋದಿ ಭರವಸೆ ನೀಡಿದಂತೆ ನಡೆದುಕೊಂಡಿಲ್ಲ. ಕಳೆದ ಹತ್ತು ವರ್ಷದಲ್ಲಿ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. 2014 ರಿಂದ 18ರವರೆಗೆ ಕಾಂಗ್ರೆಸ್ ನೇತೃತ್ವದಲ್ಲಿನ ರಾಜ್ಯ ಸರ್ಕಾರದ ಅವಧಿಯಲ್ಲಿ 165 ಭರವಸೆಗಳನ್ನು ನೀಡಿದ್ದೆವು. ಈ ಪೈಕಿ 158 ಭರವಸೆ ಈಡೇರಿಸಿದ್ದೇವೆ. ಹೆಚ್ಚುವರಿ 30 ಭರವಸೆ ಈಡೇರಿಸಿದ್ದೇವೆ. ಆದರೆ, ಕೇಂದ್ರ ಸರ್ಕಾರ 650 ಭರವಸೆ ನೀಡಿತ್ತು. ಈ ಪೈಕಿ ಶೇ.10ರಷ್ಟು ಈಡೇರಿಸಿಲ್ಲ. ಎಸ್ಸಿ, ಎಸ್ಟಿ ಸಮುದಾಯದ ಬಗ್ಗೆ ಕಳಕಳಿ ಇದ್ದರೆ ಕಾಯ್ದೆ ಜಾರಿ ಮಾಡಿ. ಬಡ್ತಿಯಲ್ಲಿ ಮೀಸಲಾತಿ ತನ್ನಿ. ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಕೊಡಿ. ಇದು ಬಿಟ್ಟು ಸುಮ್ಮೆಲೆ ಒಳ್ಳೇಯ ಮಾತುಗಳನ್ನಾಡಿದರೆ ಅವರ ಉದ್ಧಾರ ಆಗದು'' ಎಂದು ಸಿದ್ದರಾಮಯ್ಯ ಕೇಂದ್ರದ ನಡೆಯನ್ನು ಟೀಕಿಸಿದರು.
''ಬಡ್ತಿ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿತ್ತು. ಆದರೆ, ನಾವು ರತ್ನಪ್ರಭಾ ಎಂಬ ಅಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಿ ಮತ್ತೆ ಬಡ್ತಿ ಮೀಸಲಾತಿ ನೀಡಿದ್ದೇವೆ. ಇದನ್ನು ನೀಡಿದ ಏಕೈಕ ರಾಜ್ಯ ಕರ್ನಾಟಕ ಆಗಿದೆ. ಆದರೆ, ಮೋದಿ ಕಳೆದ ಹತ್ತು ವರ್ಷದಲ್ಲಿ ಬರೀ ಸುಳ್ಳುಗಳನ್ನೇ ಹೇಳಿಕೊಂಡು ಬಂದಿದ್ದಾರೆ. ಕಪ್ಪುಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಜಮೆ ಮಾಡುವುದಾಗಿ ಹೇಳಿದ್ದರು. ಇಂದಿಗೆ ಹದಿನೈದು ರೂಪಾಯಿ ಬಂದಿಲ್ಲ. ಹತ್ತು ವರ್ಷದಲ್ಲಿ ಹತ್ತು ಲಕ್ಷ ಉದ್ಯೋಗ ಸೃಷ್ಟಿಯಾಗಿಲ್ಲ. ರೈತರ ಆದಾಯ ದ್ವಿಗುಣ ಎಂದರು. ಆದರೆ, ಇರುವ ಕೃಷಿ, ದಿನನಿತ್ಯದ ಸರಕುಗಳ ಬೆಲೆ ಏರಿಕೆ ಮಾಡಿದ್ದಾರೆ'' ಎಂದು ಸಿದ್ದರಾಮಯ್ಯ ಕಿಡಿಕಾರಿದರು.