ಕರ್ನಾಟಕ

karnataka

ETV Bharat / state

ನೈರ್ಮಲ್ಯವಿಲ್ಲದ ಸ್ಥಳದಲ್ಲಿ ಐಸ್ ಕ್ರೀಂ, ಬಾದಾಮ್ ಹಾಲು ತಯಾರಿಕೆ: ಸರ್ಕಾರ, ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್ - High Court - HIGH COURT

ಅನೈರ್ಮಲ್ಯದ ಸ್ಥಳದಲ್ಲಿ ಐಸ್ ಕ್ರೀಂ ಹಾಗೂ ಬಾದಾಮ್ ಹಾಲು ತಯಾರಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಾಗು ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್ ನೀಡಿದೆ.

High Court  BBMP  State Government  unsanitary premises High Court Notice
ನೈರ್ಮಲ್ಯವಿಲ್ಲದ ಸ್ಥಳದಲ್ಲಿ ಐಸ್ ಕ್ರೀಂ, ಬಾದಾಮ್ ಹಾಲು ತಯಾರಿಕೆ: ಸರ್ಕಾರ, ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್

By ETV Bharat Karnataka Team

Published : Mar 29, 2024, 8:19 AM IST

ಬೆಂಗಳೂರು:ನಗರದಶೇಷಾದ್ರಿಪುರದ ರಾಜಕಾಲುವೆಯ ಪಕ್ಕದ ಶಿಥಿಲಾವಸ್ಥೆಯಲ್ಲಿರುವ ಕಟ್ಟಡವೊಂದರಲ್ಲಿ ಖಾಸಗಿ ವ್ಯಕ್ತಿಗಳು ಫಾಲೂದಾ, ಐಸ್ ಕ್ರೀಂ, ಬಾದಾಮ್ ಹಾಲು ಉತ್ಪಾದನೆ ಘಟಕ ನಡೆಸುತ್ತಿದ್ದಾರೆ ಎಂದು ಆಕ್ಷೇಪಿಸಿ ಸಲ್ಲಿಸಿರುವ ಅರ್ಜಿ ಕುರಿತು ಭಾರತ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ ಹಾಗೂ ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ವಕೀಲ ಅಮೃತೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.

ವಿಚಾರಣೆ ವೇಳೆ ಹಾಜರಾಗಿದ್ದ ವಕೀಲ ಅಮೃತೇಶ್, ಮಲ್ಲೇಶ್ವರದಲ್ಲಿರುವ ಈ ಸ್ಥಳ ಅತ್ಯಂತ ಅನೈರ್ಮಲ್ಯದಿಂದ ಕೂಡಿದೆ. ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಅದೇ ಸ್ಥಳದಲ್ಲಿ ಐಸ್‌ಕ್ರೀಂ ಮತ್ತು ಬಾದಾಮ್ ಹಾಲು ಸಿದ್ಧಪಡಿಸಲಾಗುತ್ತಿದೆ. ಈ ರೀತಿಯ ಆಹಾರ ಸೇವನೆಯಿಂದ ಬೆಂಗಳೂರು ನಗರದ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ. ಆದ್ದರಿಂದ ಈ ಸ್ಥಳದಲ್ಲಿ ಆಹಾರ ಪದಾರ್ಥಗಳನ್ನು ಸಿದ್ಧಪಡಿಸುವುದಕ್ಕೆ ಅನುಮತಿ ನೀಡಬಾರದು ಎಂದು ಕೋರಿದರು.

ಈ ಕುರಿತು ರಾಜ್ಯ ಸರ್ಕಾರ, ಬಿಬಿಎಂಪಿ ಹಾಗೂ ಸ್ಥಳೀಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಕ್ರಮಕ್ಕೆ ಮುಂದಾಗುವಂತೆ ಸೂಚನೆ ನೀಡಬೇಕು. ಇಂಥ ಸ್ಥಳದಲ್ಲಿ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಲು ನೀಡಿರುವ ಅನುಮತಿ ರದ್ದುಪಡಿಸಲು ಭಾರತೀಯ ಆಹಾರ ಸುರಕ್ಷತಾ ಗುಣಮಟ್ಟ ಆಯುಕ್ತಾಲಯಕ್ಕೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.

ಅರ್ಜಿ ವಿವರ:ಪಾಳು ಬಿದ್ದ ಕಟ್ಟಡದಲ್ಲಿ ಫಾಲೂದಾ, ಐಸ್ ಕ್ರೀಂ, ಬಾದಾಮ್ ಹಾಲು ಹಾಗೂ ಇತರೆ ಪಾನೀಯಗಳನ್ನು ತಯಾರಿಸಿ ರಸ್ತೆ ಬದಿಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಈ ತಯಾರಿಕಾ ಘಟಕದಲ್ಲಿ ಜನರು ತ್ಯಾಜ್ಯವನ್ನು ಎಗ್ಗಿಲ್ಲದೇ ತಂದು ಎಸೆಯುತ್ತಾರೆ. ಇದರ ನಡುವೆ ಆಹಾರವನ್ನು ಸಿದ್ಧಪಡಿಸಲಾಗುತ್ತಿದೆ. ಇಲ್ಲಿ ಯಾವುದೇ ರೀತಿಯ ಮುಂಜಾಗೃತಾ ಕ್ರಮ ಕೈಗೊಳ್ಳುತ್ತಿಲ್ಲ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಯಾವುದೇ ಮಾನದಂಡಗಳನ್ನು ಅನುಸರಿಸಲಾಗುತ್ತಿಲ್ಲ.

ಸ್ವಲ್ಪವೂ ಶುಚಿತ್ವಕ್ಕೆ ಪ್ರಾತಿನಿಧ್ಯ ನೀಡದೇ ಘಟಕ ಅನಧಿಕೃತವಾಗಿ ಕಾರ್ಯಾಚರಿಸುತ್ತಿದೆ. ಕಟ್ಟಡ ಹಲವು ವರ್ಷಗಳಷ್ಟು ಹಳೆಯದಾಗಿದ್ದು, ಇನ್ನೇನು ಕೆಲವೇ ವರ್ಷದಗಳಲ್ಲಿ ನೆಲಸಮಗೊಳ್ಳುವ ಸಾಧ್ಯತೆ ಇದೆ. ಎರಡರಿಂದ ಮೂರು ವರ್ಷಗಳ ಹಿಂದೆ ನಗರದಲ್ಲಿ ಅನೇಕ ಕಟ್ಟಡಗಳು ಕುಸಿದಿದ್ದವು. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಹಳೆಯ ಪಾಳು ಬಿದ್ದ ಕಟ್ಟಡವನ್ನು ಕೆಡವುವಂತೆ ಕಟ್ಟಡ ಮಾಲೀಕರಿಗೆ ಸೂಚಿಸಿತ್ತು. ಇಲ್ಲದೇ ಹೋದಲ್ಲಿ ಬಲವಂತದ ಕ್ರಮ ಕೈಗೊಳ್ಳುವುದಾಗಿ ಹೇಳಿತ್ತು. ಆದರೆ, ಇದೀಗ ಆಹಾರ ಉತ್ಪಾದನೆ ಘಟಕ ಹಳೆಯಾದಾಗಿದೆ. ಕೆಲವೇ ದಿನಗಳಲ್ಲಿ ಕುಸಿಯಬಹುದು. ಈ ಎಲ್ಲ ವಿಚಾರಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಸಹಿತ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳೆದ ಆರು ತಿಂಗಳಿಂದ ಪದೇ ಪದೇ ನೀಡಿದರೂ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಂದಾಗಲು ಪ್ರತಿವಾದಿಗಳಿಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿತ್ತು.

ಇದನ್ನೂ ಓದಿ:ಗೌರವಧನ ಬಿಡುಗಡೆಗೆ ಲಂಚ: ಲೋಕಾಯುಕ್ತ ಬಲೆಗೆ ಬಿದ್ದ ಶಿಕ್ಷಕ, ಬಿಇಒ - Lokayukta Ride

ABOUT THE AUTHOR

...view details