ಬೆಂಗಳೂರು:ಹಲವು ವರ್ಷಗಳಿಂದ ರಾಜ್ಯ ಸೇವೆಯಲ್ಲಿದ್ದ ಐಎಎಸ್ ಅಧಿಕಾರಿ ಸಿ.ಶಿಖಾ ಅವರು ಕೇಂದ್ರ ಸರ್ಕಾರದ ಸೇವೆಗೆ ನಿಯೋಜನೆಗೊಂಡಿದ್ದಾರೆ. ಕೇಂದ್ರ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ಕಾರ್ಯದರ್ಶಿ ಹುದ್ದೆಗೆ ಶಿಖಾ ಅವರನ್ನು ನೇಮಕ ಮಾಡಲಾಗಿದೆ.
ರಾಜ್ಯ ಸರ್ಕಾರದ ಸೇವೆಯಿಂದ ಶಿಖಾ ಅವರನ್ನು ಬಿಡುಗಡೆಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ. ಕೇಂದ್ರದ ಸೇವೆಗೆ ಶಿಖಾ ಅವರು ನಿಯೋಜನೆಗೊಂಡ ಹಿನ್ನೆಲೆಯಲ್ಲಿ ತೆರವಾಗಿರುವ ವಾಣಿಜ್ಯ ತೆರಿಗೆಗಳ ಆಯುಕ್ತರ ಹುದ್ದೆಯ ಜವಾಬ್ದಾರಿಯನ್ನು ವಾಣಿಜ್ಯ ತೆರಿಗೆಗಳ ಹೆಚ್ಚುವರಿ ಆಯುಕ್ತರಾದ (ಜಾರಿ) ಚಂದ್ರಶೇಖರ್ ನಾಯಕ್ ಎಲ್. ಅವರಿಗೆ ವಹಿಸಿ ಆದೇಶಿಸಲಾಗಿದೆ.
2004ರಲ್ಲಿ ಕರ್ನಾಟಕ ಕೇಡರ್ನ ಐಎಎಸ್ ಅಧಿಕಾರಿಯಾಗಿರುವ ಶಿಖಾ ಅವರು ಮೈಸೂರು ಜಿಲ್ಲಾಧಿಕಾರಿ, ಬೆಸ್ಕಾಂ, ಸೆಸ್ಕಾಂ ಎಂಡಿ, ಪಿಯು ಬೋರ್ಡ್ ನಿರ್ದೇಶಕಿ, ಬಿಎಂಟಿಸಿ ಎಂಡಿ ಸೇರಿದಂತೆ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಸದ್ಯ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರಾಗಿ ಕಾರ್ಯ ನಿರ್ವಹಿಸಿದ್ದರು.
ಮತ್ತೋರ್ವ ಐಎಎಸ್ ಅಧಿಕಾರಿ ಸದಾಶಿವಪ್ರಭು ಬಿ. ಅವರು ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಇಲಾಖೆಯ (ವಿಜ್ಞಾನ ಮತ್ತು ತಂತ್ರಜ್ಞಾನ) ನಿರ್ದೇಶಕ ಹುದ್ದೆಗೆ ವರ್ಗಾವಣೆಗೊಂಡಿದ್ದಾರೆ. ಜೊತೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕರ (ಮಧ್ಯಾಹ್ನದ ಉಪಹಾರ) ಹುದ್ದೆಯ ಹೊಣೆಗಾರಿಕೆಯನ್ನು ವಹಿಸಲಾಗಿದೆ.
ಇದನ್ನೂ ಓದಿ:ಬುಡಕಟ್ಟು ಜನರಿಗಾಗಿ ಪ್ರಧಾನಿಯಿಂದ 6 ಸಾವಿರ ಕೋಟಿ ರೂ.ಗಳ ಕಾರ್ಯಕ್ರಮ ಘೋಷಣೆ: ಸಚಿವ ಹೆಚ್ಡಿಕೆ ಹೇಳಿಕೆ